ಶನಿವಾರ, ಮಾರ್ಚ್ 6, 2021
29 °C
ಹೆಚ್ಚುತ್ತಿರುವ ಅಪಘಾತ ಪ್ರಕರಣ ನಿಯಂತ್ರಣ ಕುರಿತು ಹೇಳಿಕೆ

ಹೆದ್ದಾರಿಗಳಲ್ಲಿ ಅಪಘಾತ ತಡೆಗೆ ಪರಿಣಾಮಕಾರಿ ಪೆಟ್ರೋಲಿಂಗ್‌ಗೆ ಸೂಚನೆ–ಪರಮೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ’ಹೆದ್ದಾರಿಗಳಲ್ಲಿ ಅಪಘಾತ ತಡೆಯಲು ದಿನದ 24 ಗಂಟೆ ಗಸ್ತು ವಾಹನಗಳನ್ನು (ಪೆಟ್ರೋಲಿಂಗ್‌) ಪ್ರತಿ 35 ಕಿ.ಮೀಗೆ ಒಂದರಂತೆ ಒದಗಿಸಲಾಗಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸೂಚಿಸಲಾಗುವುದು’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಮಹಿಳಾ ಪೊಲೀಸ್ ಕಾನ್‌ ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

’ರಾಜ್ಯದಲ್ಲಿನ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಎಲ್ಲಿ ಹೆಚ್ಚು ಅಪಘಾತಗಳು ನಡೆಯುತ್ತವೆ ಎಂಬ ಸ್ಥಳಗಳನ್ನು ಗುರುತಿಸಲಾಗಿದೆ. ಇಂತಹ ಕಡೆ ಈಗಾಗಲೇ ಪೊಲೀಸ್ ಗಸ್ತು ವಾಹನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈಚೆಗೆ ಅಪಘಾತಗಳೂ ಹೆಚ್ಚಾಗುತ್ತಿವೆ. ಕುಟುಂಬಕ್ಕೆ ಕುಟುಂಬಗಳೇ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ, ಅಪಘಾತ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು’ ಎಂದರು.

‘ಈಗ ರಸ್ತೆಗಳು ಸಾಕಷ್ಟು ಸುಧಾರಿಸಿವೆ. ಅಲ್ಲದೇ ಹಿಂದೆ ಇದ್ದ ಹಾಗೆ ಕಾರ್ಬರೇಟರ್ ವಾಹನಗಳಿಲ್ಲ. ಈಗೇನಿದ್ದರೂ ಪ್ಯುಯನ್ ಇಂಜೆಕ್ಷನ್ ಸಿಸ್ಟಮ್ ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ. ಸಾಕಷ್ಟು ವೇಗವಾಗಿ ಹೋಗುವುದು ಇಂತಹ ಅಪಘಾತಗಳಿಗೆ ಕಾರಣವಾಗಿದೆ’ ಎಂದು ಹೇಳಿದರು.

ಔರಾದ್ಕರ್ ವರದಿ ಅನುಷ್ಠಾನ: ‘ಔರಾದ್ಕರ್ ವರದಿ ಪ್ರಕಾರ 12000 ಸಿಬ್ಬಂದಿಗೆ ಬಡ್ತಿ ಕಲ್ಪಿಸಲಾಗಿದೆ. ವೇತನ ಮರುಪರಿಶೀಲನೆಗೆ 6ನೇ ವೇತನ ಆಯೋಗಕ್ಕೆ ಶಿಫಾರಸು ಮಾಡಲಾಗಿದೆ. ಆಯೋಗದ ವರದಿ ಬಂದ ಬಳಿಕ ಅನುಷ್ಠಾನ ಮಾಡಲಾಗುವುದು. ವೇತನ ಮರುಪರಿಶೀಲನೆಯಾದರೆ ಕಂದಾಯ ಹಾಗೂ ಇತರೆ ಇಲಾಖೆಗಳ ನೌಕರರಿಗೆ ಸರಿ ಸಮಾನ ವೇತನ ಪೊಲೀಸರಿಗೆ ಸಿಗಲಿದೆ’ ಎಂದರು.

‘ಆರೋಗ್ಯ ಸೇವೆ, ಮನೆ ನಿರ್ಮಾಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಇಲಾಖೆಯಲ್ಲಿ ಪ್ರತಿ ವರ್ಷ 4 ಸಾವಿರ ಸಿಬ್ಬಂದಿ ನಿವೃತ್ತರಾಗುತ್ತಾರೆ. ಈ ಹುದ್ದೆಗಳಿಗೆ ಸಿಬ್ಬಂದಿ ನೇಮಕ ಅಲ್ಲದೇ ಹೆಚ್ಚುವರಿಯಾಗಿ ಹುದ್ದೆ ನೇಮಕಾತಿಗೆ ಇಲಾಖೆ ನಿರಂತರ ಕ್ರಮ ಕೈಗೊಳ್ಳುತ್ತಲೆ ಇದೆ. ರಾಜ್ಯದ 22 ಪೊಲೀಸ್ ತರಬೇತಿ ಶಾಲೆಗಳಲ್ಲಿ ತರಬೇತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು