ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಳಿಕೆ; ಲಾಭ, ನಷ್ಟದ ಲೆಕ್ಕಾಚಾರ

ಪ್ರತಿಷ್ಠಿತ ಕಣ ತುಮಕೂರು ಕ್ಷೇತ್ರ; ಅಭ್ಯರ್ಥಿಗಳ ಬೆಂಬಲಿಗರಲ್ಲಿ ನಾನಾ ಚರ್ಚೆ
Last Updated 19 ಏಪ್ರಿಲ್ 2019, 20:06 IST
ಅಕ್ಷರ ಗಾತ್ರ

ತುಮಕೂರು: ಲೋಕಸಭಾ ಚುನಾವಣೆಯ ಮತದಾನ ಪೂರ್ಣವಾಗಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತ ಯಂತ್ರದಲ್ಲಿ ಭದ್ರವಾಗಿದೆ. ಕಣಕ್ಕಿಳಿದ ಅಭ್ಯರ್ಥಿಗಳು ಮಾಡಿದ ಖರ್ಚು, ವೆಚ್ಚ, ಗೆಲುವಿನ ಲೆಕ್ಕಾಚಾರಗಳು ಕ್ಷೇತ್ರದಲ್ಲಿ ಚರ್ಚೆಗೆ ಒಳಪಟ್ಟಿವೆ.

ಕಳೆದ ಬಾರಿ ಶೇ 72.50 ದಾಖಲಾಗಿದ್ದ ಮತದಾನ ಪ್ರಮಾಣ ಈ ಬಾರಿ ಶೇ 77.03ರಷ್ಟಾಗಿದೆ. ಇದು ಕಣದಲ್ಲಿರುವ ಮೈತ್ರಿ ಪಕ್ಷಗಳ ಅಭ್ಯರ್ಥಿ ಎಚ್.ಡಿ.ದೇವೇಗೌಡ, ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ಅವರ ಮೊಗದಲ್ಲಿ ನಗೆ ಅರಳಿಸಿದೆ.

ತುಮಕೂರು ಗ್ರಾಮಾಂತರ ಶೇ 81.87, ತಿಪಟೂರು 80.27, ತುರುವೇಕೆರೆ ಶೇ 80 ಗರಿಷ್ಠ ಮತದಾನ ದಾಖಲಾಗಿದೆ. ಅತ್ಯಂತ ಕನಿಷ್ಠ ಶೇ 65 ಮತದಾನ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದಲ್ಲಿ ದಾಖಲಾಗಿದೆ.

ಎಂಟೂ ವಿಧಾನ ಸಭಾ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡ, ಜಿ.ಎಸ್. ಬಸವರಾಜ್ ಅವರ ಪರ ಪ್ರಚಾರಕ್ಕಿಳಿದು ಮತಗಳಿಕೆಗೆ ಶ್ರಮಪಟ್ಟ ಪಕ್ಷದ ಮುಖಂಡರು, ಕಾರ್ಯಕರ್ತರು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಅಭ್ಯರ್ಥಿ ಜಾತಿ, ಸಮುದಾಯದವರೂ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

ಚುನಾವಣೆ ಮುಗೀತು. ಗೌಡ್ರು ಗೆಲ್ತಾರಾ? ಬಸವರಾಜ್ ಐದನೇ ಬಾರಿ ಸಂಸದರಾಗುತ್ತಾರಾ? ನಿಮ್ ಬೂತ್‌ನಲ್ಲಿ ಎಷ್ಟು, ನಿಮ್ಮ ಕ್ಷೇತ್ರದಲ್ಲೆಷ್ಟು ಓಟು ಹಾಕ್ಸಿದ್ದೀರಾ? ಅವರು ಓಟು ಹಾಕಿದ್ರಾ ಇವರು ಓಟು ಯಾಕೆ ಹಾಕ್ಲಿಲ್ಲಾ? ಹೀಗೆ ಹತ್ತಾರು ಬಗೆಯಲ್ಲಿ ಚರ್ಚೆ ನಡೆಸುತ್ತಿದ್ದುದು ಕಂಡು ಬಂದಿತು.

ಈ ಭಾಗದಲ್ಲಿ ಆ ಸಮುದಾಯ ಜನರು ಹೆಚ್ಚಿದ್ದಾರೆ. ಅವರು ಈ ಅಭ್ಯರ್ಥಿಗೆ ಮಾತ್ರ ಮತಹಾಕಿದ್ದಾರೆ. ಈ ಬೂತ್‌ನಲ್ಲಿ ಇಬ್ಬರೂ ಸಮವಾಗಿ ಓಟ್ ತೆಗೆದುಕೊಳ್ಳುವರು. ಆ ಕಡೆಯವರು ಕೊನೆಯ ದಿನ ಇಷ್ಟು ಕೊಟ್ರಂತೆ, ಇವರು ಅಷ್ಟು ಕೊಟ್ರಂತೆ...ಹೀಗೆ ನಾನಾ ಚರ್ಚೆಗಳು ಮೇರೆ ಮೀರಿದೆ.

ಮತ್ತೊಂದೆಡೆ ಮತದಾನ ಪ್ರಮಾಣ ಹಾಗೂ ಬೂತ್ ಮಟ್ಟದಲ್ಲಿನ ಮಾಹಿತಿ ಕಲೆಹಾಕಿರುವ ಪಕ್ಷಗಳ ಮುಖಂಡರು ಅಳೆದು ಸುರಿದು, ಗುಣಾಕಾರ, ಭಾಗಾಕಾರದ ಲೆಕ್ಕಾಚಾರ ನಡೆಸಿದ್ದಾರೆ.

ಓಟಿನ ಪ್ರಮಾಣ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ 5ರಷ್ಟು ಹೆಚ್ಚಳವಾಗಿದೆ. ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ, ಬಿಜೆಪಿ ಅಭ್ಯರ್ಥಿಗಳ ಬೆಂಬಲಿಗರು ಇದರಿಂದ ತಮಗೇ ಅನುಕೂಲ ಎಂದು ಹೇಳಿಕೊಳ್ಳುತ್ತಿದ್ದಾರೆ.

ತುರುವೇಕೆರೆ, ತಿಪಟೂರು, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಗರಿಷ್ಠ ಮತದಾನಕ್ಕೆ ದೇವೇಗೌಡರ ಸ್ಪರ್ಧೆಯೇ ಕಾರಣ. ಸ್ವಜಾತಿ ಮತಗಳು ಅವರಿಗೆ ಸಾರಾ ಸಗಟಾಗಿ ಬಿದ್ದಿವೆ. ಹಿಂದುಳಿದ ವರ್ಗದ ಮತದಾರರು ಗೌಡರ ಕೈ ಹಿಡಿದ್ದಾರೆ. ಕೊರಟಗೆರೆ ಉಪಮುಖ್ಯಮಂತ್ರಿ ಪರಮೇಶ್ವರ ಕ್ಷೇತ್ರ, ಗುಬ್ಬಿ ಸಚಿವ ಎಸ್.ಆರ್.ಶ್ರೀನಿವಾಸ್ ಪ್ರತಿನಿಧಿಸುವ ಕ್ಷೇತ್ರಗಳಾಗಿದ್ದು, ಅಲ್ಲಿ ಎರಡೂ ಪಕ್ಷದವರೂ ಕಟ್ಟುನಿಟ್ಟಾಗಿ ಕೆಲಸ ಮಾಡಿದ್ದು, ಮತಬುಟ್ಟಿ ಗೌಡರ ಪಾಲಾಗಿದೆ ಎಂದು ಬೆಂಬಲಿಗರು ಹೇಳುತ್ತಿದ್ದಾರೆ.

ಇನ್ನು ಬಿಜೆಪಿ ಅಭ್ಯರ್ಥಿ ಬೆಂಬಲಿಗರ ಲೆಕ್ಕ ಸ್ವಲ್ಪ ಭಿನ್ನ. ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ, ತುಮಕೂರು ಗ್ರಾಮಾಂತರದಲ್ಲಿ ಹಾಲಿ ಶಾಸಕರು ಜೆಡಿಎಸ್‌ನವರೇ ಇದ್ದರೂ ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರ ಬಲದಿಂದ ಬಿಜೆಪಿ ಮತಗಳು ಕೈ ಬಿಟ್ಟಿಲ್ಲ. ಗುಬ್ಬಿ, ತುಮಕೂರು ನಗರ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಪಠಿಸಿದ ಒಗ್ಗಟ್ಟಿನ ಮಂತ್ರಕ್ಕೆ ಫಲ ಸಿಕ್ಕಿದೆ. ಮಧುಗಿರಿಯಲ್ಲಿ ಬಿಜೆಪಿಗೆ ಸ್ವಂತ ಬಲ ಅಷ್ಟಕ್ಕಷ್ಟೇ ಇದ್ದರೂ ಮಧುಗಿರಿ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಅವರ ಆನೆ ಬಲ ಜೆಡಿಎಸ್, ಕಾಂಗ್ರೆಸ್ ಮತಕೋಟೆಯನ್ನು ಛಿದ್ರ ಮಾಡಿದೆ ಎಂದು ಭರವಸೆಯ ಮಾತು ಆಡುತ್ತಿದ್ದಾರೆ.

ಕೊರಟಗೆರೆ ಕ್ಷೇತ್ರದಲ್ಲಿ ಡಾ.ಪರಮೇಶ್ವರ ಕೆಲಸ ಮಾಡಿಲ್ಲ ಎಂಬುದೇ ನಮಗೆ ಅಸ್ತ್ರವಾಗಿತ್ತು. ಅದನ್ನೇ ಬಳಸಿದ್ದೇವೆ ಎಂಬುದು ಬಿಜೆಪಿ ಅಭ್ಯರ್ಥಿಗಳ ಬೆಂಬಲಿಗರ ಮಾತುಗಳು. ಆದರೆ ಮೈತ್ರಿ ಬೆಂಬಲಿಗರು ಹೇಳುವುದೇ ಬೇರೆ. ಈ ಕ್ಷೇತ್ರ ಎಂದೂ ಬಿಜೆಪಿ ನೆಲವಲ್ಲ. ಕಾಂಗ್ರೆಸ್, ಜೆಡಿಎಸ್ ಗಟ್ಟಿ ನೆಲ. ಪ್ರತಿ ಚುನಾವಣೆಯಲ್ಲೂ ಹೋದರೆ ಆ ಕಡೆ, ಬಂದರೆ ಈ ಕಡೆ ಎಂಬಂತೆ ಕಾಂಗ್ರೆಸ್ ಬಿಟ್ಟರೆ, ಜೆಡಿಎಸ್, ಜೆಡಿಎಸ್ ಬಿಟ್ಟರೆ ಕಾಂಗ್ರೆಸ್‌ಗೆ ಎಂಬಂತಿದೆ. ಈ ಬಾರಿ ಎರಡೂ ಪಕ್ಷದ ಅಭ್ಯರ್ಥಿ ಒಬ್ಬರೇ ಆಗಿದ್ದರಿಂದ ಅವರಿಗೇ ಮತ ಬಿದ್ದಿವೆ. ಅಲ್ಲದೇ, ಈ ಕ್ಷೇತ್ರದಲ್ಲಿ ಪರಮೇಶ್ವರ ಗೌಡರಿಗೆ ಹೆಚ್ಚು ಲೀಡ್ ಕೊಡಲಿಸಲು ತಮ್ಮದೇ ತಂತ್ರ ಮಾಡಿದ್ದರು ಎಂದು ಹೇಳುವ ಮೂಲಕ ಗೌಡರಿಗೇನೂ ಕ್ಷೇತ್ರದಲ್ಲಿ ಮತ ಕಮ್ಮಿಯೇನೂ ಬಿದ್ದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT