ಭಾನುವಾರ, ನವೆಂಬರ್ 28, 2021
19 °C

ವಿದ್ಯುತ್ ಬಿಕ್ಕಟ್ಟಿನ ನಾಟಕ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕಾರ್ಪೋರೇಟ್ ವಲಯದ ಅನುಕೂಲಕ್ಕಾಗಿ ವಿದ್ಯುತ್ ಬಿಕ್ಕಟ್ಟು ಸೃಷ್ಟಿಸುವ ನಾಟಕ ಮಾಡಲಾಗುತ್ತಿದೆ ಎಂದು ಸಿಐಟಿಯು ಜಿಲ್ಲಾ ಸಮಿತಿ ಟೀಕಿಸಿದೆ.

ಕೃತಕವಾಗಿ ಕಲ್ಲಿದ್ದಲು ಕೊರತೆ ಹಾಗೂ ವಿದ್ಯುತ್ ಸಮಸ್ಯೆ ಸೃಷ್ಟಿಸಲಾಗುತ್ತಿದೆ. ತ್ರೈಮಾಸಿಕ ಅವಧಿಯಲ್ಲಿ ದಾಖಲೆಯ ಪ್ರಮಾಣದಲ್ಲಿ ಕಲ್ಲಿದ್ದಲು ಉತ್ಪಾದನೆ ಮಾಡಿದ್ದರೂ ಕೊರತೆ ಎಂದು ಹೇಳಲಾಗುತ್ತಿದೆ. ಕೋಲ್ ಇಂಡಿಯಾ ಸಂಸ್ಥೆಯು ಏಪ್ರಿಲ್– ಸೆಪ್ಟೆಂಬರ್ ನಡುವೆ ದಾಖಲೆಯ ಪ್ರಮಾಣದಲ್ಲಿ ಕಲ್ಲಿದ್ದಲು ಉತ್ಪಾದಿಸಿದೆ. ಹಾಗಾದರೆ ಉತ್ಪಾದನೆ ಮಾಡಿದ ಕಲ್ಲಿದ್ದಲು ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದೆ.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಪ್ರಧಾನ ಕಾರ್ಯದರ್ಶಿ ಜಿ.ಕಮಲ, ಖಜಾಂಚಿ ಎ.ಲೋಕೇಶ್ ಜಂಟಿ ಹೇಳಿಕೆಯಲ್ಲಿ ಕಲ್ಲಿದ್ದಲು ಅಭಾವ ಸೃಷ್ಟಿಸುವುದನ್ನು ಖಂಡಿಸಿದ್ದಾರೆ.

ಪಟ್ಟಭದ್ರ ಹಿತಾಸಕ್ತಿಗಳು ಬಿಜೆಪಿ ಸರ್ಕಾರದ ಸಹಕಾರದೊಂದಿಗೆ ವಿದ್ಯುತ್ ಬಿಕ್ಕಟ್ಟು ಸೃಷ್ಟಿಸಿವೆ. ಕೇಂದ್ರೀಯ ವಿದ್ಯುತ್ ಪ್ರಾಧಿಕಾರದ ನಿಯಮದ ಪ್ರಕಾರ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಕನಿಷ್ಠ 20 ದಿನಗಳಿಗೆ ಸಾಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇಟ್ಟುಕೊಳ್ಳಬೇಕಿದೆ. ಆದರೂ ಅಗತ್ಯ ದಾಸ್ತಾನು ಇಲ್ಲದೆ, ಕೊರತೆಯಾಗಿರುವುದಕ್ಕೆ ಕೇಂದ್ರ ಸರ್ಕಾರವೇ ಹೊಣೆಯಾಗಿದೆ ಎಂದು ಹೇಳಿದ್ದಾರೆ.

ಬೇಡಿಕೆ ತಗ್ಗಿದ್ದರಿಂದ ಕಲ್ಲಿದ್ದಲು ಉತ್ಪಾದನೆಯನ್ನು ಕಡಿಮೆ ಮಾಡುವಂತೆ ಕೋಲ್ ಇಂಡಿಯಾ ಸಂಸ್ಥೆ ಅಧ್ಯಕ್ಷರು ಹೇಳಿದ್ದರು. ಹೆಚ್ಚು ಸಮಯ ಕಲ್ಲಿದ್ದಲು ದಾಸ್ತಾನು ಮಾಡಿದರೆ ಬೂದಿಯಾಗಿ ನಿರುಪಯುಕ್ತವಾಗಲಿದೆ ಎಂದು ಅವರು ವಾದಿಸಿದ್ದಾರೆ. ಹೇಗೆ ಕೃತಕವಾಗಿ ಬಿಕ್ಕಟ್ಟು ಸೃಷ್ಟಿಸಲಾಗಿದೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ
ಎಂದಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲು ಬೆಲೆ ಏರಿಕೆ, ಕಲ್ಲಿದ್ದಲು ಆಮದು ಹಾಗೂ ವಿದ್ಯುತ್ ಉತ್ಪಾದಿಸುವ ದೈತ್ಯ ಸಂಸ್ಥೆಗಳಾದ ಟಾಟಾ, ಅದಾನಿಯ ಕಾರ್ಪೋರೇಟ್ ಕಂಪನಿಗಳ ಲಾಭದ ಲೆಕ್ಕಾಚಾರದಿಂದಾಗಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಕಂಪನಿಗಳು ವಿದ್ಯುತ್ ಉತ್ಪಾದನೆಗೆ ಆಮದು ಮಾಡಿಕೊಂಡ ಕಲ್ಲಿದ್ದಲು ಬಳಸುತ್ತಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲು ಬೆಲೆ ಹೆಚ್ಚಳವಾಗಿದ್ದು, ಈ ಹಿಂದೆ ಮಾಡಿಕೊಂಡ ವಿದ್ಯುತ್ ಖರೀದಿ ಒಪ್ಪಂದವನ್ನು ಪರಿಷ್ಕರಿಸಿ, ಬೆಲೆ ಹೆಚ್ಚಳ ಮಾಡುವಂತೆ ಒತ್ತಾಯಿಸಿದ್ದವು. ಇದೇ ಕಾರಣ ಮುಂದಿಟ್ಟುಕೊಂಡು ಸೆಪ್ಟೆಂಬರ್ ಮೂರನೇ ವಾರದಿಂದ ವಿದ್ಯುತ್ ಉತ್ಪಾದನೆ ನಿಲ್ಲಿಸಿದ್ದು, ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ರಾಷ್ಟ್ರೀಯ ಸುಂಕ ನೀತಿಯ ಅಡಿಯಲ್ಲಿ ವಿದ್ಯುತ್ ಪ್ರತಿ ಯೂನಿಟ್‍ ಖರೀದಿ ದರವನ್ನು ₹9ರಿಂದ ₹21ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಬಿಕ್ಕಟ್ಟಿನ ನೆಪದಲ್ಲಿ ವಿದ್ಯುತ್ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಾರ್ಪೋರೇಟ್‍ ಕಂಪನಿಗಳು ತಮ್ಮ ದೀರ್ಘಕಾಲೀನ ಹಾಗೂ ಅಲ್ಪಾವಧಿಯ ಲಾಭಕ್ಕಾಗಿ ಕೃತಕವಾಗಿ ಅಭಾವ ಸೃಷ್ಟಿಸಿವೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಇಂತಹ ಸಂಚಿನ ವಿರುದ್ಧ ಜನಸಾಮಾನ್ಯರು ಹೋರಾಟ ನಡೆಸಬೇಕು ಎಂದು ಸಲಹೆ ಮಾಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.