ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ರೈತರಿಗೆ ಸಿಗದ ‘ಸಮ್ಮಾನ್‌ ನಿಧಿ’

ಸಲ್ಲಿಕೆಯಾದ ಅರ್ಜಿ ಅನುಮೋದನೆಗೆ ತಹಶೀಲ್ದಾರರಿಗೆ ಇಲ್ಲ ಅಧಿಕಾರ
Last Updated 17 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ತುಮಕೂರು: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳನ್ನು ಆಯಾ ತಹಶೀಲ್ದಾರರು ವಿಲೇವಾರಿ ಮಾಡುವ ಆಯ್ಕೆಯನ್ನು ಆನ್‌ಲೈನ್‌ ಪೊರ್ಟಲ್‌ನಲ್ಲಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ರೈತರು ‘ಸಮ್ಮಾನ್‌ ನಿಧಿ’ಯಿಂದ ವಂಚಿತರಾಗುತ್ತಿದ್ದಾರೆ.

ಈ ಯೋಜನೆ ಆರಂಭವಾದಾಗ ಮೊದಲು ಅರ್ಜಿಗಳನ್ನು ಸಲ್ಲಿಸಿದ ರೈತರಿಗೆ ಈಗಾಗಲೇ ಕೆಲವು ಕಂತುಗಳ ಮೊತ್ತ ಖಾತೆಗೆ ಜಮೆ ಆಗಿದೆ. ಮಾರ್ಚ್‌ನಿಂದ ಈಚೆಗೆ ಸಲ್ಲಿಸಿದ ಅರ್ಜಿಗಳು ಸಕಾಲಕ್ಕೆ ವಿಲೇವಾರಿ ಆಗಿಲ್ಲ. ಇದರಿಂದಾಗಿ 2 ಹೆಕ್ಟೆರ್‌ಕ್ಕಿಂತ ಕಡಿಮೆ ಜಮೀನು ಹೊಂದಿದ ರೈತರು ಈ ಯೋಜನೆಯ ಫಲಾನುಭವಿಗಳಾಗಲು ಸರ್ಕಾರಿ ಕಚೇರಿಗಳಿಗೆ ದಿನಾಲು ಅಲೆಯುವಂತಾಗಿದೆ.

ಯೋಜನೆಯ ಸೌಲಭ್ಯ ಪಡೆಯಲು ಜಮೀನಿನ ಪಾಣಿ, ಆಧಾರ್‌ ಗುರುತಿನ ಚೀಟಿ ಮತ್ತು ಬ್ಯಾಂಕ್‌ ಖಾತೆಯ ಮಾಹಿತಿಯ ಪ್ರತಿಯನ್ನು ಮಾರ್ಚ್‌ ತಿಂಗಳಿನಲ್ಲಿಯೇ ಸಲ್ಲಿಸಿದ್ದೇನೆ. ಆದರೂ ಅರ್ಜಿ ವಿಲೇವಾರಿ ಆಗಿಲ್ಲ. ಆನ್‌ಲೈನ್‌ನಲ್ಲಿ ಪರಿಶೀಲಿಸಿದರೆ, ‘ತಹಶೀಲ್ದಾರರಿಂದ ಅರ್ಜಿ ಅನುಮೋದನೆಗೊಂಡಿಲ್ಲ’ ಎಂಬ ಸಂದೇಶ ಬಿತ್ತರಗೊಳ್ಳುತ್ತಿದೆ ಎಂದು ಗುಬ್ಬಿ ತಾಲ್ಲೂಕಿನ ರೈತರೊಬ್ಬರು ತಿಳಿಸಿದರು.

ಬಹುತೇಕ ರೈತರು ಏಕಕಾಲಕ್ಕೆ ಅರ್ಜಿ ಸಲ್ಲಿಸಿದ್ದರೂ, ಅರ್ಧದಷ್ಟು ಜನರಿಗೆ ಮಾತ್ರ ಹಣ ಬಂದಿದೆ. ಈ ರೀತಿ ಯಾಕೆ ಆಗುತ್ತದೆ ಎಂಬ ಕುರಿತು ಸರ್ಕಾರಿ ಅಧಿಕಾರಿಗಳು ಸಹ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಈ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಜಮೀನನ ಮಾಲೀಕತ್ವ ಮೃತಪಟ್ಟ ಪೋಷಕರ ಹೆಸರಿನಲ್ಲಿ ಇದ್ದು, ಅವರ ಮಕ್ಕಳು ಸಮ್ಮಾನ್‌ ನಿಧಿಗಾಗಿ ಅರ್ಜಿ ಹಾಕಿದ್ದರೆ ಅಥವಾ ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಮಾಹಿತಿಯ ನಡುವೆ ಹೊಂದಾಣಿಕೆ ಆಗದಿದ್ದ ಅರ್ಜಿಗಳು ಮಾತ್ರ ತಹಶೀಲ್ದಾರರ ಅನುಮೋದನೆಗಾಗಿ ಬರುತ್ತವೆ. ಅವುಗಳ ದಾಖಲೆಗಳನ್ನು ಸರಿಪಡಿಸಿ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿದ್ದೇವು. ಆ ರೀತಿ ವಿಲೇವಾರಿ ಮಾಡುವ ಆಯ್ಕೆಯನ್ನು ಎರಡು ತಿಂಗಳ ಹಿಂದೆಯೇ ಆನ್‌ಲೈನ್‌ ಪೊರ್ಟಲ್‌ನಲ್ಲಿ ಫ್ರೀಜ್‌ ಮಾಡಿದ್ದಾರೆ. ಹಾಗಾಗಿ ಫಲಾನುಭವಿಗಳ ಆಯ್ಕೆಯಲ್ಲಿ ವಿಳಂಬ ಆಗುತ್ತಿದೆ ಎಂದು ಗುಬ್ಬಿ ತಾಲ್ಲೂಕಿನ ತಹಶೀಲ್ದಾರ್ ಎಂ.ಮಮತಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸಮಸ್ಯೆ ರಾಜ್ಯದ ಎಲ್ಲ ಕಡೆ ಇದೆ. ಈ ಕುರಿತು ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಗಮನ ಸೆಳೆಯಲಾಗಿದೆ. ಈ ತಾಂತ್ರಿಕ ಅಡಚಣೆ ಯಾವಾಗ ಸರಿಪಡಿಸಲಾಗುತ್ತದೆ ಎಂದು ನಾವು ನಿರ್ದಿಷ್ಟವಾಗಿ ಹೇಳಲಾಗಲ್ಲ ಎಂದು ಅವರು ಹೇಳಿದರು.

ಏನಿದು ಯೋಜನೆ: ಎರಡು ಹೆಕ್ಟೆರ್‌ಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವಾರ್ಷಿಕ ₹ 6,000 ಅನ್ನು ಮೂರು ಕಂತುಗಳಲ್ಲಿ ನೀಡುವ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಆ ಯೋಜನೆಯಡಿಯೇ ₹ 4,000 ಅನ್ನು ಎರಡು ಕಂತುಗಳಲ್ಲಿ ನೀಡುವುದಾಗಿ ರಾಜ್ಯ ಸರ್ಕಾರವೂ ಘೋಷಿಸಿದೆ.

*
ಆನ್‌ಲೈನ್‌ ಪೊರ್ಟಲ್‌ ಪ್ರವೇಶದ ಆಯ್ಕೆ ನಮಗೂ ಇಲ್ಲ. ಹಾಗಾಗಿ ಎಷ್ಟು ಸಾವಿರ ಅರ್ಜಿಗಳು ವಿಲೇವಾರಿಗೆ ಆಗಬೇಕಿದೆ ಎಂಬುದು ನಮಗೂ ಗೊತ್ತಾಗುತ್ತಿಲ್ಲ.
-ಎಂ.ಮಮತಾ, ತಹಶೀಲ್ದಾರ್, ಗುಬ್ಬಿ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT