ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24ಕ್ಕೆ ‘ಪ್ರಜಾ ಧ್ವನಿ’ ಯಾತ್ರೆ ತುಮಕೂರಿಗೆ

ನಗರದಲ್ಲಿ ಮೆರವಣಿಗೆಗೆ ಸಿದ್ಧತೆ, ರಾರಾಜಿಸುತ್ತಿರುವ ಫ್ಲೆಕ್ಸ್‌, ಬ್ಯಾನರ್‌
Last Updated 23 ಜನವರಿ 2023, 14:19 IST
ಅಕ್ಷರ ಗಾತ್ರ

ತುಮಕೂರು: ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿರುವ ‘ಪ್ರಜಾ ಧ್ವನಿ’ ಬಸ್‌ ಯಾತ್ರೆ ಸ್ವಾಗತಿಸಲು ಜಿಲ್ಲೆಯ ಪಕ್ಷದ ನಾಯಕರು ಸಜ್ಜಾಗಿದ್ದು, ಜ. 24ರಂದು ಬೆಳಿಗ್ಗೆ 9ಗಂಟೆಗೆ ನಗರ ಹೊರವಲಯದ ಕ್ಯಾತ್ಸಂದ್ರ ಟೋಲ್‌ ಬಳಿ ಬರ ಮಾಡಿಕೊಳ್ಳಲಾಗುತ್ತದೆ.

ನಗರದ ಬಿಜಿಎಸ್‌ ವೃತ್ತದಿಂದ ವೇದಿಕೆ ಕಾರ್ಯಕ್ರಮ ನಡೆಯುವ ಅಮಾನಿಕೆರೆಯ ಗಾಜಿನ ಮನೆಯವರೆಗೆ ಮೆರವಣಿಗೆ ನಡೆಯಲಿದೆ. ಕಾರ್ಯಕರ್ತರು, ಸಾರ್ವಜನಿಕರು ಸಾಥ್‌ ನೀಡಲಿದ್ದಾರೆ. ಸಾವಿರಾರು ಜನರು ಪಾಲ್ಗೊಳ್ಳಲು ವೇದಿಕೆಯ ಬಳಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ 11 ತಾಲ್ಲೂಕುಗಳಿಂದ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಶಾಸಕ ಡಾ.ಜಿ. ಪರಮೇಶ್ವರ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಯಾತ್ರೆಯಲ್ಲಿ ಬರಲಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ವಿರೋಧಿ ನೀತಿ ಅನುಸರಿಸುತ್ತಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಕೆ.ಎನ್‌. ರಾಜಣ್ಣ ಇಲ್ಲಿ ಸೋಮವಾರ ತಿಳಿಸಿದರು.

ಮುಂದಿನ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ‘ಪ್ರಜಾ ಧ್ವನಿ’ ಯಾತ್ರೆ ನೆರವಾಗಲಿದೆ. ಕಾಂಗ್ರೆಸ್‌ ಅವಧಿಯಲ್ಲಿನ ಜನಪರ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಯಾತ್ರೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೆಪಿಸಿಸಿ ಉಪಾಧ್ಯಕ್ಷ ಶಫಿ ಉಲ್ಲಾ, ‘ಸರ್ಕಾರದ ಸುಳ್ಳು ಭರವಸೆಗಳು ಮತ್ತು ಜನವಿರೋಧಿ ನೀತಿಗಳ ಬಗ್ಗೆ ಮತದಾರರಿಗೆ ತಿಳಿಸಲಾಗುತ್ತದೆ. ಹೆಚ್ಚಿನ ಜನರು ಸೇರುವ ನಿರೀಕ್ಷೆ ಇದೆ. ಎಲ್ಲಾ ಸ್ಥಳೀಯ ನಾಯಕರು ಒಂದಾಗಿ ಕಾರ್ಯಕ್ರಮದ ಯಶಸ್ಸಿಗೆ ದುಡಿಯುತ್ತಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಚಂದ್ರಶೇಖರ್‌ಗೌಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್, ಯುವ ಘಟಕದ ಅಧ್ಯಕ್ಷ ಶಶಿ ಹುಲಿಕುಂಟೆ ಮಠ್, ಮುಖಂಡರಾದ ಷಫಿ ಅಹ್ಮದ್, ರಫೀಕ್ ಅಹ್ಮದ್, ಇಕ್ಬಾಲ್ ಅಹ್ಮದ್, ಧನಂಜಯ, ಆರ್‌. ನಾರಾಯಣ, ಮುರಳೀಧರ ಹಾಲಪ್ಪ ಉಪಸ್ಥಿತರಿದ್ದರು.

**

ಶ್ರೀನಿವಾಸ್‌ ಕಾಂಗ್ರೆಸ್‌ ಸೇರುವುದು ಖಚಿತ

ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಕಾಂಗ್ರೆಸ್‌ ಸೇರುವುದು ಖಚಿತ. ಅದು ಯಾವಾಗ ಎಂಬುವುದು ಕೆಪಿಸಿಸಿಯಿಂದ ತೀರ್ಮಾನವಾಗುತ್ತದೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ತಿಳಿಯಲಿದೆ ಎಂದು ಕೆ.ಎನ್‌. ರಾಜಣ್ಣ ಸ್ಪಷ್ಟಪಡಿಸಿದರು.

ಬಿಜೆಪಿ ಹಿಂದುತ್ವ ವಾದವನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದೆ. ಜೆಡಿಎಸ್‌ ಕುಟುಂಬ ರಾಜಕಾರಣ ಮುಂದುವರಿಸಿದೆ. ಇವರೆಲ್ಲರ ಮಧ್ಯೆ ಕಾಂಗ್ರೆಸ್‌ ಪ್ರಜೆಗಳ ಧ್ವನಿಯಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ನ ಹೋರಾಟದ ಅಂಶಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT