ಸೋಮವಾರ, ನವೆಂಬರ್ 28, 2022
20 °C

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಗರ್ಭಿಣಿ, ಅವಳಿ ಶಿಶು ಸಾವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಮನೆಯಲ್ಲಿ ಹೆರಿಗೆ ಮಾಡಿಸಿದ್ದು, ಆ ಸಮಯದಲ್ಲಿ ಮಹಿಳೆ ಮೃತಪಟ್ಟಿದ್ದು, ಹೊಟ್ಟೆಯಲ್ಲಿದ್ದ ಅವಳಿ ಶಿಶುಗಳೂ ಸಾವನ್ನಪ್ಪಿವೆ.

ಭಾರತಿನಗರದಲ್ಲಿ ವಾಸವಿದ್ದ ಕಸ್ತೂರಿ (30) ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಬುಧವಾರ ಸಂಜೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅವರ ಬಳಿ ತಾಯಿ ಕಾರ್ಡ್, ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ವೈದ್ಯರು, ಆಸ್ಪತ್ರೆ ಸಿಬ್ಬಂದಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಮಹಿಳೆ ಜತೆಯಲ್ಲಿ ಇದ್ದವರು ಪರಿಪರಿಯಾಗಿ ಬೇಡಿಕೊಂಡರೂ ಸಿಬ್ಬಂದಿ ಮನಸ್ಸು ಕರಗಿಲ್ಲ. ಬೇಕಿದ್ದರೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿ ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ್ದಾರೆ.

ಬೆಂಗಳೂರಿಗೆ ಆಂಬುಲೆನ್ಸ್‌ನಲ್ಲಿ ತೆರಳಲು ಅಷ್ಟೊಂದು ಹಣ ಹೊಂದಿಸುವುದು ಕಷ್ಟಕರವಾಗಿದ್ದು, ರಾತ್ರಿ ವೇಳೆಗೆ ಮನೆಗೆ ವಾಪಸ್ಸಾಗಿದ್ದಾರೆ. ಗುರುವಾರ ಬೆಳಗ್ಗಿನ ಜಾವ ಮತ್ತೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮನೆಯಲ್ಲಿ ಹೆರಿಗೆಯಾಗಿದೆ. ಮೊದಲಿಗೆ ಗಂಡು ಮಗು ಜನಿಸುವ ಹೊತ್ತಿಗೆ ತೀವ್ರ ರಕ್ತ ಸ್ರಾವವಾಗಿದ್ದು, ಆ ವೇಳೆಗೆ ಮಗುವೂ ಸಾವನ್ನಪ್ಪಿದೆ. ಮತ್ತೊಂದು ಗಂಡು ಮಗು ಜನಿಸುವ ಮುನ್ನವೇ ಮಹಿಳೆ ಮೃತಪಟ್ಟಿದ್ದಾರೆ.

ವಿಚಾರ ತಿಳಿದು ಅಕ್ಕಪಕ್ಕದ ಮನೆಯವರು ಸೇರಿ, ಗಲಾಟೆ ಮಾಡಿದ್ದಾರೆ. ವಿಷಯ ತಿಳಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಶ್, ಜಿಲ್ಲಾ ಸರ್ಜನ್ ಡಾ.ಉಷಾ ಭೇಟಿನೀಡಿ ಪರಿಶೀಲಿಸಿದರು.

ಗರ್ಭಿಣಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡದೆ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ. ಕರ್ತವ್ಯದಲ್ಲಿದ್ದ ಡಾ.ಉಷಾ ಹಾಗೂ ಇತರ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಸುರೇಶ್ ತಿಳಿಸಿದರು.

ಓದಿ... ರಾಮನಗರ: ಮೂಲ ನಕ್ಷತ್ರದಲ್ಲಿ ಮಗು ಹುಟ್ಟಿದಕ್ಕೆ ಕಿರುಕುಳ, ಪತಿ ವಿರುದ್ಧ ದೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು