ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಕ್ರಿಸ್‌ಮಸ್‌ಗೆ ಸಿದ್ಧತೆ, ಕಾಣದ ಉತ್ಸಾಹ

ರಾತ್ರಿ ಕರ್ಫೂ ತಂದಿಟ್ಟ ಸಂಕಷ್ಟ; ಆಚರಣೆ ಮನೆಗೆ ಸೀಮಿತ
Last Updated 24 ಡಿಸೆಂಬರ್ 2020, 3:09 IST
ಅಕ್ಷರ ಗಾತ್ರ

ತುಮಕೂರು: ಕ್ರಿಸ್‌ಮಸ್ ಆಚರಣೆ ಹಾಗೂ ಹೊಸ ವರ್ಷದ ಸ್ವಾಗತಕ್ಕೆ ಸಕಲ ಸಿದ್ಧತೆಗಳು ಆರಂಭಗೊಂಡಿವೆ. ಆದರೆ ಹಿಂದಿನ ವರ್ಷದಂತೆ ಸಂಭ್ರಮ, ಸಡಗರ ಕಾಣುತ್ತಿಲ್ಲ. ಕೋವಿಡ್ ಹೆಮ್ಮಾರಿಯಿಂದಾಗಿ ಹಬ್ಬದ ವಾತಾವರಣವೇ ಮರೆಯಾಗಿದೆ.

ಕ್ರಿಶ್ಚಿಯನ್ನರು ಕ್ರಿಸ್‌ಮಸ್ ಹಾಗೂ ಹೊಸ ವರ್ಷವನ್ನು ಉತ್ಸಾಹ, ಸಂಭ್ರಮದಿಂದ ಬರಮಾಡಿಕೊಳ್ಳುತ್ತಾರೆ. ಇದಕ್ಕಾಗಿ ದೊಡ್ಡಮಟ್ಟದಲ್ಲಿ ಸಿದ್ಧತೆಗಳು ನಡೆಯುತ್ತವೆ. ಆದರೆ ಈ ಬಾರಿ ಕೊರೊನಾದಿಂದಾಗಿ ಮಂಕುಕವಿದ ವಾತಾವರಣ ಕಂಡುಬರುತ್ತಿದೆ. ಆತಂಕದ ನಡುವೆ ಸರಳವಾಗಿ ಆಚರಿಸಲು ನಾನಾ ಕಸರತ್ತು ನಡೆಸಿದ್ದಾರೆ.

ಈಗ ರಾತ್ರಿ ಕರ್ಫೂ ಜಾರಿಮಾಡಿ ಸರ್ಕಾರ ಆದೇಶಿಸಿದೆ. ಕೋವಿಡ್ ಹಾಗೂ ರಾತ್ರಿ ಕರ್ಫೂ ಜಾರಿಯಿಂದಾಗಿ ಸರಳ ಆಚರಣೆಯೂ ಕಷ್ಟಕರವಾಗಿದೆ. ರಾತ್ರಿ 11 ಗಂಟೆ ಒಳಗೆ ಚರ್ಚ್‌ಗಳಲ್ಲಿ ಪ್ರಾರ್ಥನೆ ಮುಗಿಸಿ ಮನೆ ಸೇರಿಕೊಳ್ಳಬೇಕು. ಮಧ್ಯರಾತ್ರಿ ವರೆಗೂ ನಡೆಯುತ್ತಿದ್ದ ಪ್ರಾರ್ಥನೆ ಹಾಗೂ ಇತರ ಕಾರ್ಯಕ್ರಮಗಳಿಗೆ ತಡೆಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಚರ್ಚ್‌ಗಳತ್ತ ಬರುವುದೇ ಕಷ್ಟಕರವಾಗಿದೆ.

ಹಿನ್ನೆಲೆ: ಯೇಸು ಕ್ರಿಸ್ತ ಹುಟ್ಟಿದ ದಿನವನ್ನು ಕ್ರಿಸ್‌ಮಸ್ ಹಬ್ಬವಾಗಿ ಆಚರಣೆ ಮಾಡುತ್ತಾರೆ. ಡಿಸೆಂಬರ್ ಕಾಲಿಡುತ್ತಿದ್ದಂತೆ ಡಿ.25ಅನ್ನು ಬರಮಾಡಿಕೊಳ್ಳಲು ಸಕಲ ರೀತಿಯಲ್ಲೂ ಸಿದ್ಧತೆಗಳನ್ನು ಮಾಡಿಕೊಳ್ಳಲು ಆರಂಭಿಸುತ್ತಾರೆ. ಎರಡು ವಾರ ಮುನ್ನವೇ ಚರ್ಚ್‌ಗಳು ಹೊಸ ರೂಪ ತಾಳುತ್ತವೆ. ಸುಣ್ಣ, ಬಣ್ಣ ಬಳಿದು, ದೀಪಾಲಂಕಾರದಿಂದ ಕಂಗೊಳಿಸುತ್ತವೆ. ಕ್ರಿಶ್ಚಿಯನ್ನರ ಮನೆಗಳಲ್ಲೂ ಗೂಡುದೀಪಗಳು ಬೆಳಗಲು ಪ್ರಾರಂಭಿಸುತ್ತವೆ. ಚರ್ಚ್‌ಗಳು ಹಾಗೂ ಮನೆಗಳಲ್ಲಿ ಗೋದಲಿಗಳನ್ನು ನಿರ್ಮಿಸಲಾಗುತ್ತದೆ. ಆದರೆ ಈ ಸಲ ಹೆಚ್ಚಿನ ಸಿದ್ಧತೆಗಳು ಕಾಣುತ್ತಿಲ್ಲ. ಡಿ. 25ರಂದು ಪ್ರಾರ್ಥನೆ ಹಾಗೂ ಶುಭಾಶಯ ವಿನಿಮಯಕ್ಕೆ ಸೀಮಿತಗೊಳ್ಳಲಿದೆ.

‘ಚರ್ಚ್‌ಗಳಲ್ಲಿ ಆರಾಧನೆಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದ ಕಾರ್ಯಕ್ರಮಗಳು ಇರುವುದಿಲ್ಲ. ಸರಳವಾಗಿ ಕ್ರಿಸ್‌ಮಸ್ ಆಚರಿಸಲಾಗುತ್ತಿದೆ’ ಎಂದು ಸಿಎಸ್‌ಐ ವೆಸ್ಲಿ ಚರ್ಚ್ ತುಮಕೂರು ವಿಭಾಗದ ಮುಖ್ಯಸ್ಥರಾದ ಮಾರ್ಗನ್ ಸಂದೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT