ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ತಿ ಮೀಸಲು ಕಾಯ್ದೆ ಜಾರಿಗೆ ಒತ್ತಾಯ

Last Updated 21 ಅಕ್ಟೋಬರ್ 2018, 15:41 IST
ಅಕ್ಷರ ಗಾತ್ರ

ತುಮಕೂರು: ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಕಾಯ್ದೆ– 2017 ಅನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪರಿಶಿಷ್ಟ ಜಾತಿ, ‍ಪಂಗಡದ ನೌಕರರ ಸಮನ್ವಯ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಡಿ.ಶಿವಕುಮಾರ್‌ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎರಡೂ ಸದನದಲ್ಲಿ ಬಹುಮತ ಪಡೆದು ಬಡ್ತಿ ಮತ್ತು ಜೇಷ್ಠತೆ ಕಾಯ್ದುಕೊಳ್ಳುವ ಬಡ್ತಿ ಮೀಸಲಾತಿ ಕಾಯ್ದೆಯನ್ನು ಇದೇ ಜೂನ್‌ನಲ್ಲಿ ಜಾರಿಗೆ ತಂದಿದ್ದು, ಇದಕ್ಕೆ ರಾಷ್ಟ್ರಪತಿಗಳ ಅಂಕಿತ ದೊರೆತಿದೆ. ಆದರೆ ಕೆಲ ನಿವೃತ್ತ ಅಧಿಕಾರಿಗಳ ಮಾತುಗಳನ್ನು ಕೇಳಿ ಮುಖ್ಯಮಂತ್ರಿಯವರು ಈ ಕಾಯ್ದೆ ಜಾರಿಗೆ ತರಲು ಮೀನಮೇಷ ಎಣಿಸುತ್ತಿದ್ದಾರೆ ಎಂದರು.

ಮುಖ್ಯಮಂತ್ರಿಯವರ ಈ ದಲಿತ ವಿರೋಧಿ ನೀತಿ ವಿರುದ್ದ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಈಗಾಗಲೇ ಈ ಕುರಿತು ಕಳೆದ ವಾರ ರಾಮನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಸದ್ಯದಲ್ಲೇ ಹಾಸನ ಮತ್ತು ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿ.ಕೆ.ಪವಿತ್ರ ಪ್ರಕರಣ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ 2002ರ ಬಡ್ತಿ ಮೀಸಲಾತಿ ಕಾಯ್ದೆಯ 3 ಮತ್ತು 4ನೇ ಕಲಂ ಅನ್ನು ರದ್ದು ಪಡಿಸಿದ್ದರಿಂದ ಹಿಂಬಡ್ತಿ ಹೊಂದಿದ ಹಲವಾರು ನೌಕರರು ಒತ್ತಡಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ 2018ರ ಜೂನ್ 14ರಂದು ಜಾರಿಗೆ ತಂದ ಬಡ್ತಿ ಮೀಸಲಾತಿ ಕಾಯ್ದೆ- 2018ನ್ನು ಪ್ರಶ್ನಿಸಿ ಕೆಲವರು ಸುಪ್ರಿಂಕೋರ್ಟಿನ ಮೆಟ್ಟಿಲು ಹತ್ತಿದ್ದು, ಅವರ ಅರ್ಜಿಗಳು ಇನ್ನೂ ನ್ಯಾಯಾಲಯದಲ್ಲಿ ಸ್ವೀಕೃತವೇ ಆಗಿಲ್ಲ. ಆದರೂ ನ್ಯಾಯಾಲಯದಲ್ಲಿ ಪ್ರಕರಣಗಳಿವೆ ಎಂದು ಮುಖ್ಯಮಂತ್ರಿಯವರು ಹೇಳುವ ಮೂಲಕ ದಲಿತ ನೌಕರರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಘೋಷಿಸಿರುವ ಶೇ 18ರ ಪ್ರಮಾಣದ ಮೀಸಲಾತಿಯು ಇದುವರೆಗೂ ಪರಿಶಿಷ್ಟ ಜಾತಿ, ಪಂಗಡದ ವರ್ಗಗಳಿಗೆ ಲಭಿಸಿಲ್ಲ. ಜೊತೆಗೆ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರು ಸಹ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯುತ್ತಿದ್ದು, ಆದರೆ ಬಡ್ತಿ ಮೀಸಲಾತಿ ಮಾತ್ರ ಹಿಂದುಳಿದ ವರ್ಗಗಳಿಗೆ ದೊರೆತಿಲ್ಲ ಎಂದು ಅವರು ಹೇಳಿದರು.

ಒಂದು ವರ್ಷದಿಂದ ಪರಿಶಿಷ್ಟ ಜಾತಿ, ಪಂಗಡದ ನೌಕರರ ಸಮನ್ವಯ ಸಮಿತಿ ಓಬಿಸಿ ನೌಕರರಿಗೂ ಬಡ್ತಿ ಮೀಸಲಾತಿ ಜಾರಿಗೆ ಒತ್ತಾಯಿಸುತ್ತಾ ಬಂದಿದೆ. ಈ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದೆ ಕೆಲವರು ನೌಕರರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ಕಿರಿಕಾಡಿದರು.

ಸಮಿತಿಯ ಹಿರಿಯ ಉಪಾಧ್ಯಕ್ಷ ಆರ್.ಮೋಹನ್, ಪ್ರಧಾನ ಕಾರ್ಯದರ್ಶಿ ಡಾ.ಎಸ್.ವಿಜಯ ಕುಮಾರ್, ಗೌರವಾಧ್ಯಕ್ಷ ವೈ.ಟಿ.ತಿಮ್ಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತರಾಯಪ್ಪ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT