ಶುಕ್ರವಾರ, ಜುಲೈ 30, 2021
25 °C

ಪ್ಯಾಕೇಜ್‌ಗೆ ಖಾಸಗಿ ಶಾಲಾ ಶಿಕ್ಷಕರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಖಾಸಗಿ ಅನುದಾನ ರಹಿತ ಶಾಲೆಗಳ ಶಿಕ್ಷಕರು, ಸಿಬ್ಬಂದಿಗೆ ವೇತನವಿಲ್ಲದೆ ಸಂಕಷ್ಟದಲ್ಲಿದ್ದು, ಶಾಲೆಗಳು ಪ್ರಾರಂಭವಾಗುವವರೆಗೂ ವಿಶೇಷ ಪ್ಯಾಕೇಜ್ ನೀಡುವಂತೆ ಆಗ್ರಹಿಸಿ ಜಿಲ್ಲಾ ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟ ಟ್ರಸ್ಟ್‌ನ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ಕೋವಿಡ್‌ನಿಂದಾಗಿ ಶಾಲೆಗಳು ಮುಚ್ಚಿದ್ದು, ಶಾಲೆಗಳ ಆಡಳಿತ ಮಂಡಳಿಗಳು ವೇತನ ನೀಡಿಲ್ಲ. ಶಿಕ್ಷಕರು, ಸಿಬ್ಬಂದಿ ತಮ್ಮ ಕುಟುಂಬ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ರಾಜ್ಯ ಸರ್ಕಾರ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಶಾಲೆಗಳು ಮುಚ್ಚಿದ್ದು, ಶಿಕ್ಷಕರಿಗೆ ವೇತನ ಸಿಗದೆ ಅವರ ಜೀವನ ಬೀದಿಗೆ ಬಂದಿದೆ’ ಎಂದು ಒಕ್ಕೂಟದ ಅಧ್ಯಕ್ಷ ಡಾ.ಹಾಲನೂರು ಲೇಪಾಕ್ಷ್ ಹೇಳಿದರು.

ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಸಿಬ್ಬಂದಿ ಉನ್ನತ ಶಿಕ್ಷಣ ಪಡೆದು ಸಿಕ್ಕ ಶಿಕ್ಷಕ ಹುದ್ದೆಯನ್ನು ನಂಬಿ ಸಾಲಮಾಡಿದ್ದಾರೆ. ಇನ್ನೂ ಕೆಲವರು ವಿವಾಹವಾಗಿ ಇಡೀ ಕುಟುಂಬದ ಜವಾಬ್ದಾರಿ ಹೊಣೆ ಹೊತ್ತಿದ್ದಾರೆ. ಲಕ್ಷಾಂತರ ಸಿಬ್ಬಂದಿ ಗೋಳು ಹೇಳತೀರದಾಗಿದೆ ಎಂದರು.

ಖಾಸಗಿ ಅನುದಾನ ರಹಿತ ಶಾಲಾ ಸಿಬ್ಬಂದಿಗಳನ್ನು ಕೊರೊನಾ ವಾರಿಯರ್ಸ್‌ ಎಂದು ಪರಿಗಣಿಸಿ ಆರೋಗ್ಯ ವಿಮೆ ನೀಡಬೇಕು. 2019-20ನೇ ಸಾಲಿನ ಬಾಕಿ ಶುಲ್ಕವನ್ನು ಪಾವತಿಸುವಂತೆ ಪೋಷಕರಿಗೆ ಆದೇಶ ನೀಡಬೇಕು. ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗೆ ಶಿಕ್ಷಕರು ಮತ್ತು ಶಾಲೆಯ ಹಿತರಕ್ಷಣೆಗೆ ₹20ರಿಂದ 30 ಲಕ್ಷಗಳವರೆಗೆ ಬಡ್ಡಿ ರಹಿತ ಸಾಲಸೌಲಭ್ಯ ನೀಡಬೇಕು. ರಾಜ್ಯದ ಎಲ್ಲಾ ಖಾಸಗಿ ಅನುದಾನಿತ ಶಾಲೆಗಳಿಗೆ 2021-22ನೇ ಶೈಕ್ಷಣಿಕ ವರ್ಷದವರೆಗೆ ಮಾನ್ಯತೆ ನವೀಕರಣದ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.

ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳು ಬಾಕಿ ಇರುವ ಶಾಲಾ ಶುಲ್ಕವನ್ನು ಪೂರ್ಣ ಪಾವತಿಮಾಡಿ ವರ್ಗಾವಣೆ ಪತ್ರ ಪಡೆಯುವಂತೆ ಆದೇಶಿಸಬೇಕು. 2020-21ನೇ ಸಾಲಿಗೆ ಪಠ್ಯಪುಸ್ತಕವನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ವಿತರಿಸಬೇಕು, ಖಾಸಗಿ ಅನುದಾನರಹಿತ ಶಾಲೆಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ತಡೆಗಟ್ಟಲು ಸೂಕ್ತ ಕಾಯ್ದೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಟ್ರಸ್ಟ್ ಉಪಾಧ್ಯಕ್ಷ ಎಸ್.ಶಿವಪ್ರಕಾಶ್, ಎನ್.ಬಿ.ಪ್ರದೀಪ್‌ಕುಮಾರ್, ಕಾರ್ಯದರ್ಶಿ ಜಿ.ವಿ.ಶ್ರೀನಿವಾಸ್‌ರಾವ್, ಜಂಟಿ ಕಾರ್ಯದರ್ಶಿ ಎಚ್.ಎನ್.ಮಂಜುನಾಥ್ ದೇವ್ಯಾ, ಖಜಾಂಚಿ ಟಿ.ಚಂದ್ರಶೇಖರ್, ಟ್ರಸ್ಟಿಗಳಾದ ಜೆ.ಆರ್.ಚನ್ನಬಸವೇಶ್ವರಸ್ವಾಮಿ, ನಿಖಿಲ್ ಎಸ್.ಮಿರ್ಜಿ ಮತ್ತಿತರರಿದ್ದರು.

ಮೌಲ್ಯಮಾಪನ ಬಹಿಷ್ಕಾರ

ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಜುಲೈ 13ರಿಂದ ಪ್ರಾರಂಭವಾಗುವ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಾ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸದೆ ಬಹಿಷ್ಕರಿಸಲಾಗುವುದು ಹಾಲನೂರು ಲೇಪಾಕ್ಷ್ ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮನವಿ ಸ್ವೀಕರಿಸಿದರು. ನಂತರ ಉಪವಿಭಾಗಾಧಿಕಾರಿ ಅಜಯ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು