ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ನಿಷೇಧಾಜ್ಞೆ ಕಟ್ಟುನಿಟ್ಟಿನ ಜಾರಿ

Last Updated 28 ಏಪ್ರಿಲ್ 2021, 6:13 IST
ಅಕ್ಷರ ಗಾತ್ರ

ತುಮಕೂರು: ಕೋವಿಡ್–19 ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ಫ್ಯೂ ಜಾರಿಮಾಡಿದ್ದು, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ತಹಶೀಲ್ದಾರ್‌ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಸೂಚನೆ ಕೊಟ್ಟರು.

ಅನಗತ್ಯವಾಗಿ ತಿರುಗಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಯಾರಿಗೂ ಪಾಸ್ ವಿತರಿಸಿಲ್ಲ. ಅನುಮತಿ ಕಲ್ಪಿಸಿರುವ ಚಟುವಟಿಕೆಗಳಿಗೆ ತೆರಳುವವರ ಗುರುತಿನ ಕಾರ್ಡ್ ನೋಡಿ ಅವಕಾಶ ಮಾಡಿಕೊಡಬೇಕು. ಮದುವೆಗೆ ತೆರಳುವವರಿಗೂ ಆಮಂತ್ರಣ ಪತ್ರದ ಆಧಾರದ ಮೇಲೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.

ಖಾಸಗಿ, ಸರ್ಕಾರಿ ಬಸ್‍ಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಲಿವೆ. ತುರ್ತು ಸೇವೆಗೆ ವಾಹನಗಳ ಸಂಚಾರಕ್ಕೆ ಅನುಮತಿಯಿದ್ದು, ಸೂಕ್ತವಾಗಿ ಪರಿಶೀಲಿಸಿ ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ದೂರುಗಳು ಕೇಳಿಬರದಂತೆ ಮಾರ್ಗಸೂಚನೆಗಳನ್ನು ಜಾರಿಗೊಳಿಸಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ರಕ್ತ ಕೊರತೆ ಆಗಬಾರದು. ರಕ್ತದಾನ ಮಾಡಲು ಅವಕಾಶ ಮಾಡಿಕೊಡಬೇಕು. ಆದರೆ ರಕ್ತದಾನ ಶಿಬಿರ ನಡೆಸಲು ಅವಕಾಶ ನೀಡಬಾರದು. ಹಾಸಿಗೆ, ಆಮ್ಲಜನಕ, ರೆಮಿಡಿಸಿವಿರ್ ಕೊರತೆ ಉಂಟಾಗದಂತೆ ಜಾಗರೂಕರಾಗಿರಬೇಕು. ಆಮ್ಲಜನಕ ಶೇ 25ರಷ್ಟು ಖಾಲಿಯಾಯಿತು ಎನ್ನುವಷ್ಟರಲ್ಲೇ ತುಂಬಿಸಿಕೊಳ್ಳುವ ಕಾರ್ಯ ಮಾಡಬೇಕು. ಆಮ್ಲಜನಕ ಸಿಗದೆ ಸೋಂಕಿತರು ಸಾವನ್ನಪ್ಪಿದರು ಎಂಬ ದೂರುಗಳು ಬರಬಾರದು. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ‘ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಪಾರ್ಸಲ್‍ಗೆ ಅವಕಾಶವಿದ್ದು, ಅವು ಕಾರ್ಯನಿರ್ವಹಿಸಲಿವೆ. ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅನುಮತಿ ಇದ್ದು, ತಡೆಯಬಾರದು. ಕಟ್ಟಡ ನಿರ್ಮಾಣ ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ಅಂಗಡಿ ತೆರೆಯುವುದಕ್ಕೂ ಅನುಮತಿ ಇದೆ. ಸೋಮವಾರದಿಂದ ಶುಕ್ರವಾರದವರೆಗೆ ಕಾಮಗಾರಿಗೆ ತೆರಳುವವರು ಸಂಚರಿಸಬಹುದು.ಕರ್ಫ್ಯೂ ದಿನಗಳಲ್ಲಿ ಕಾಮಗಾರಿ ನಡೆಯುವ ಸ್ಥಳದಲ್ಲೇ ಇದ್ದು, ಕೆಲಸ ಮಾಡಬಹುದು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ, ‘ನರೇಗಾ ಕಾಮಗಾರಿಗೆ ಅನುಮತಿ ನೀಡಲಾಗಿದೆ. ಸಾಕಷ್ಟು ಜನರು ಗ್ರಾಮಕ್ಕೆ ವಾಪಸಾಗುತ್ತಿದ್ದು, ನರೇಗಾ ಕಾಮಗಾರಿ ಅನುಷ್ಠಾನಕ್ಕೆಪಿಡಿಒಗಳು ಒತ್ತು ನೀಡುವಂತೆ’ ತಿಳಿಸಿದರು.

ಉಪವಿಭಾಗಾಧಿಕಾರಿ ಅಜಯ್, ಡಿಎಚ್‌ಒ ಡಾ.ನಾಗೇಂದ್ರಪ್ಪ, ಜಿಲ್ಲಾ ಔಷಧ ನಿಯಂತ್ರಕಿ ಮಮತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT