ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಚಾರದ ಅಬ್ಬರ: ಕೋವಿಡ್‌ ಭೀತಿ ಉಬ್ಬರ

ಚುನಾವಣೆಯಿಂದಾಗಿ ಹಾಟ್‌ಸ್ಪಾಟ್ ಆಗಲಿದೆಯೇ ಶಿರಾ
Last Updated 18 ಅಕ್ಟೋಬರ್ 2020, 6:00 IST
ಅಕ್ಷರ ಗಾತ್ರ

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ ಕಾರಣದಿಂದ ಶಿರಾ ತಾಲ್ಲೂಕು ಕೊರೊನಾ ಹಾಟ್‌ಸ್ಪಾಟ್‌ ಆಗುವ ಭೀತಿ ಎದುರಾಗಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಮೊದಲ ಪ್ರಕರಣ ಕಂಡು ಬಂದಿದ್ದೇ ಶಿರಾದಲ್ಲಿ. ಶಿರಾ ಕೊರೊನಾ ವಿಚಾರದಲ್ಲಿ ಹಾಟ್‌ಸ್ಪಾಟ್ ಎನಿಸಿತ್ತು. ಉಪಚುನಾವಣೆ ಕಾವು ಕೊರೊನಾವನ್ನು ಮತ್ತಷ್ಟು ಪಸರಿಸುವ ಭಯವನ್ನು ಮೂಡಿಸಿದೆ. ಇಲ್ಲಿಯವರೆಗೆ ಶಿರಾದಲ್ಲಿ ಒಟ್ಟು 1,486 ಮಂದಿಗೆ ಕೊರೊನಾ ಸೋಂಕು ತಗುಲಿದೆ. ತಾಲ್ಲೂಕಿನಲ್ಲಿ 163 ಸಕ್ರಿಯ ಸೋಂಕಿತರಿದ್ದು, ಒಟ್ಟು 22 ಜನರು ಮೃತಪಟ್ಟಿದ್ದಾರೆ.

ಕೊರೊನಾ ಪರೀಕ್ಷೆಯ ಸಮಯದಲ್ಲಿ ಚುನಾವಣೆ ನಡೆಸುವುದೇ ಸವಾಲಿನ ಕೆಲಸ. ಹಾಗಾಗಿ ಚುನಾವಣಾ ಆಯೋಗ ಮುನ್ನೆಚ್ಚರಿಕಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಆದರೆ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳೂ ಅಬ್ಬರದ ಪ್ರಚಾರದ ಗುಂಗಿನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಮರೆತಿರುವುದು ಆತಂಕಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಾಮಪತ್ರ ಸಲ್ಲಿಕೆಯ ಮೆರವಣಿಗೆಗೆ ರಾಜ್ಯ ಮಟ್ಟದ ಮುಖಂಡರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕನಿಷ್ಠ ಅಂತರ ಸಹ ಕಾಯ್ದುಕೊಳ್ಳದೆ ಒತ್ತೊತ್ತಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಹೆಚ್ಚಿನವರು ಹೆಸರಿಗೆ ಮಾತ್ರ ಮಾಸ್ಕ್ ಧರಿಸಿದ್ದರು. ಕೆಲವರು ಧರಿಸಿಯೇ ಇರಲಿಲ್ಲ.

ಬಿಜೆಪಿಯೂ ಹೊರತಲ್ಲ: ‘ಕಾಂಗ್ರೆಸ್ ರ‍್ಯಾಲಿ ವೇಳೆ ಕೋವಿಡ್–19 ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿಲ್ಲ. ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ. ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷೆಯನ್ನು ಅಪಾಯಕ್ಕೆ ದೂಡಿದೆ’ ಎಂದು ಆರೋಗ್ಯ ಸಚಿವ ಡಾ.ಎಂ.ಸಿ.ಸುಧಾಕರ್ ಟ್ವೀಟ್‌ ಮಾಡಿದ್ದರು.

ಆದರೆ, ಅವರದ್ದೇ ಪಕ್ಷದ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‌ಗೌಡ ಶುಕ್ರವಾರ ನಾಮಪತ್ರ ಸಲ್ಲಿಸುವಾಗ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ ಹಾಜರಿದ್ದರು. ಅಲ್ಲೂ ಬಿಜೆಪಿ ಕಾರ್ಯಕರ್ತರು ಒತ್ತೊತ್ತಾಗಿಯೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು!

ಪ್ರಚಾರದ ವೇಳೆ ಮರೆತ ಅಂತರ:

ಹೆಚ್ಚು ಜನರನ್ನು ಸೇರಿಸಿ ಬಲಾಬಲ ಪ್ರದರ್ಶಿಸಬೇಕು ಎನ್ನುವುದಷ್ಟೇ ಮೂರು ಪಕ್ಷಗಳ ಮುಖಂಡರ ಉದ್ದೇಶ ಎನ್ನುವುದು ಈ ಜನಸ್ತೋಮದಿಂದ ಸಾಬೀತಾಗಿದೆ.

ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಧರಿಸಿ ಎಂದು ಬಹಿರಂಗವಾಗಿ ಜನರಿಗೆ ತಿಳಿ ಹೇಳುವ ರಾಜಕೀಯ ನಾಯಕರು ಮತ್ತು ಸಚಿವರು, ಶಿರಾ ಕ್ಷೇತ್ರಕ್ಕೆ ಬಂದಾಗ ಮಾತ್ರ ಈ ಮಾರ್ಗಸೂಚಿ ಬಗ್ಗೆ ಸೊಲ್ಲು ಎತ್ತುತ್ತಿಲ್ಲ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಗೂ ಗ್ರಾಸವಾಗಿದೆ.

ಹಳ್ಳಿಗಳಲ್ಲಿ ನಡೆಯುವ ಪ್ರಚಾರ ಸಭೆಗಳು, ಪಕ್ಷ ಸೇರ್ಪಡೆ, ಜಾತಿ, ಪಂಗಡಗಳ ಸಭೆಗಳು... ಹೀಗೆ ಹಳ್ಳಿ ರಾಜಕಾರಣದಲ್ಲಿಯೂ ಮೂರು ಪಕ್ಷಗಳ ಮುಖಂಡರು ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT