ಆ.9: ರೈತ, ಕೃಷಿ ಕಾರ್ಮಿಕರ ಪ್ರತಿಭಟನೆ

7

ಆ.9: ರೈತ, ಕೃಷಿ ಕಾರ್ಮಿಕರ ಪ್ರತಿಭಟನೆ

Published:
Updated:

ತುಮಕೂರು: ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸುವುದು, ರೈತರಿಗೆ ಸಾಲ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಗುರುವಾರ (ಆಗಸ್ಟ್ 9) ಮಧ್ಯಾಹ್ನ 12.30ಕ್ಕೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಸಿ.ಬೈಯಾರೆಡ್ಡಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಕಚೇರಿ ಮುಂದೆ ಜಿಲ್ಲೆಯ ಸಾವಿರಾರು ರೈತರು ಹಾಗೂ ಕೃಷಿ ಕಾರ್ಮಿಕರು ಸೇರಿ ಧರಣಿಯನ್ನು ಮಾಡಲಾಗುವುದು ಎಂದರು.

'ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ ಮನವಿಯನ್ನು ಸ್ವೀಕರಿಸಬೇಕು. ಸ್ವೀಕರಿಸದೆ ಇದ್ದರೆ ಮುಂದೆ ತೀವ್ರ ಹೋರಾಟ ಮಾಡಲಾಗುವುದು' ಎಂದು ತಿಳಿಸಿದರು.

ದೆಹಲಿಯಲ್ಲಿ ಸಪ್ಟೆಂಬರ್ 5 ರಂದು ಸುಮಾರು 5 ಲಕ್ಷ ರೈತರು ಹಾಗು ಕೃಷಿ ಕಾರ್ಮಿಕರು ಸೇರಿ 'ರೈತ ಕಾರ್ಮಿಕರ ದೆಹಲಿ ಚಲೋ ಚಳವಳಿ'ಯನ್ನು ನಡೆಸಲಾಗುವುದು ಎಂದರು.

ಆತ್ಮಹತ್ಯೆ ಹಾದಿಯನ್ನು ಹಿಡಿದಿರುವ ರೈತರ ರಕ್ಷಣೆಗಾಗಿ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು. ಸರ್ಕಾರ ಉತ್ಪಾದನಾ ವೆಚ್ಚದ ಮೇಲೆ ಶೇ 50ರಷ್ಟು ಲಾಭಾಂಶವನ್ನು ಸೇರಿಸಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ತಿಳಿಸಿದರು.

ರೈತರು ಹೊರಗಡೆ ಸಾಲ ಪಡೆದು, ಅವುಗಳ ಬಡ್ಡಿಯನ್ನೇ ಕಟ್ಟಲು ಆಗದೆ ಸಂಕಷ್ಟದಲ್ಲಿದ್ದಾರೆ. ಬ್ಯಾಂಕುಗಳಲ್ಲಿ ಸಾಲ ಪಡೆಯಬೇಕೆಂದು ಹೋದರೆ ಅಲ್ಲಿಯೂ ಸಾಲ ಸಿಗದೆ ನಿರಾಸೆಗೆ ಒಳಗಾಗಿದ್ದಾರೆ ಎಂದು ತಿಳಿಸಿದರು.

ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಮತ್ತೆ ಅವರಿಗೆ ಸಾಲ ನೀಡಬೇಕು ಎಂದು ಅವರು ಮನವಿ ಮಾಡಿದರು. 

ಬಗರ್ ಹುಕುಂ ಸಾಗುವಳಿದಾರರ ಸ್ವಾಧೀನದಲ್ಲಿರುವ ಅರಣ್ಯ ಭೂಮಿಯನ್ನು ರೈತರ ಪರವಾಗಿ ಇತ್ಯರ್ಥ ಪಡಿಸಲು ಸರ್ಕಾರದ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸುಮಾರು 8-9 ಲಕ್ಷ ಎಕರೆ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಲು ಈಗಾಗಲೇ ತಯಾರಿಯನ್ನು ಮಾಡಿಕೊಳ್ಳಲಾಗಿದ್ದು, ಇದನ್ನು ಬೇಗನೇ ಜಾರಿಗೆ ತರಬೇಕು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಘಟಕ ಸಂಚಾಲಕರಾದ ಸಿ.ಅಜ್ಜಪ್ಪ ಹಾಗೂ ಬಿ.ಉಮೇಶ್, ಜಿಲ್ಲಾ ಪೌರ ಕಾರ್ಮಿಕರ ಸಂಘದ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, 'ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್'ನ ರಾಜ್ಯ ಘಟಕದ ಕಾರ್ಯದರ್ಶಿ ಸೈಯದ್ ಮುಜೀಬ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !