ಬಿಸಿಯೂಟ ತಯಾರಕರಿಂದ ಪ್ರತಿಭಟನಾ ರ‍್ಯಾಲಿ

7
ಕೆಲಸ ಕಾಯಂಗೊಳಿಸಬೇಕು, ಕನಿಷ್ಠ ₹ 10,500 ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ

ಬಿಸಿಯೂಟ ತಯಾರಕರಿಂದ ಪ್ರತಿಭಟನಾ ರ‍್ಯಾಲಿ

Published:
Updated:
Deccan Herald

ತುಮಕೂರು: ಬಿಸಿಯೂಟ ತಯಾರಕರ ಕೆಲಸ ಕಾಯಂಗೊಳಿಸಬೇಕು ಮತ್ತು ಕನಿಷ್ಠ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಗರದ ಟೌನ್ ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಪ್ರತಿಭಟನಾ ರ‍್ಯಾಲಿ ನಡೆಸಿದರು.

ನೂರಾರು ಬಿಸಿಯೂಟ ತಯಾರಕರು ಪ್ರತಿಭಟನಾ ರ‍್ಯಾಲಿ ಮೂಲಕ ಹೋಗಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

2002ರಿಂದ ನಿರಂತರ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರಿಗೆ ನೀಡುತ್ತಿರುವ ₹ 2600 ವೇತನದಲ್ಲಿ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಹಾಗಾಗಿ ಕನಿಷ್ಠ ₹ 10,500 ವೇತನ ನೀಡಬೇಕೆಂದು ಒತ್ತಾಯಿಸಿದರು.

ಕೆಲಸದ ಹಾಗೂ ಜೀವನ ಭದ್ರತೆ ಇಲ್ಲದೆ ನಿರಂತರ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರಿಗೆ ಕಾರ್ಮಿಕ ಆರೋಗ್ಯ ವಿಮೆ (ಇಎಸ್ಐ) ಹಾಗೂ ಭವಿಷ್ಯ ನಿಧಿ (ಪಿಎಫ್) ಜಾರಿಗೆ ಮಾಡಬೇಕು ಎಂದು ಮನವಿ ಮಾಡಿದರು.

ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣವನ್ನು ನೀಡಿ ಬಿಸಿಯೂಟ ತಯಾರಕರಿಗೆ ಕೆಲಸದಿಂದ ತೆಗೆದು ಹಾಕಬಾರದು. ಅಲ್ಲದೆ ಮಾಸಿಕ ₹ 3000 ನಿವೃತ್ತಿ ಪಿಂಚಣಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಯಾವುದೇ ರೀತಿಯಲ್ಲಿ ಮರಣ ಹೊಂದಿದಲ್ಲಿ ₹ 2 ಲಕ್ಷ ಪರಿಹಾರ ಮತ್ತು ಅಂತ್ಯಕ್ರಿಯೆಗಾಗಿ ₹ 20 ಸಾವಿರ ನೀಡಬೇಕು. ಪ್ರತಿ ವರ್ಷ ಸಮವಸ್ತ್ರವನ್ನು ನೀಡಬೇಕು ಹಾಗೂ ವಾರ್ಷಿಕ 20 ದಿನಗಳ ರಜೆ ಘೋಷಿಸಬೇಕು ಎಂದು ಮನವಿ ಮಾಡಿದರು.

ಫೆಡರೇಷನ್ ರಾಜ್ಯ ಘಟಕದ ಕಾನೂನು ಸಲಹೆಗಾರ ಎನ್.ಶಿವಣ್ಣ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸುಳ್ಳು ಭರವಸೆಗಳನ್ನು ನೀಡಿಕೊಂಡು ಬರುತ್ತಿದ್ದಾರೆ. ಆದರೆ ಅವುಗಳ ಈಡೇರಿಕೆಗೆ ಮಾತ್ರ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.

ಬಿಸಿಯೂಟ ತಯಾರಕ ಹೆಣ್ಣುಮಕ್ಕಳ ಕಣ್ಣೀರನ್ನು ಒರೆಸಲು ಯಾವೊಂದು ಸರ್ಕಾರದಿಂದಲೂ ಆಗದೇ ಇರುವುದು ನಾಚಿಕೆಗೇಡಿನ ವಿಷಯ ಎಂದು ವಿಷಾದಿಸಿದರು. 

ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಜಿಲ್ಲಾ ಸಂಚಾಲಕರಾದ ಸಿ.ಎಸ್.ಸತ್ಯನಾರಾಯಣ, ಕಾಂತರಾಜು, ಆಶ್ವತ್ಥ್ ನಾರಾಯಣ ಹಾಗೂ ನಾಗಣ್ಣ, ವನಜಾಕ್ಷಮ್ಮ, ಉಮಾದೇವಿ, ರಾಧಮ್ಮ, ಪುಷ್ಪಾವತಿ, ಸಾವಿತ್ರಮ್ಮ, ಶಶಿಕಾಂತ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !