ರಕ್ಷಣೆಗಾಗಿ ಯಾರ ಬಳಿ ಹೋಗಲಿ ಸ್ವಾಮಿ?

7
ಹುಲಿಯೂರು ದುರ್ಗ ಪೊಲೀಸರ ದೌರ್ಜನ್ಯದ ವಿರುದ್ಧ ಕಟ್ಟೆಯೊಡದ ನಾಗರಿಕರ ಆಕ್ರೋಶ

ರಕ್ಷಣೆಗಾಗಿ ಯಾರ ಬಳಿ ಹೋಗಲಿ ಸ್ವಾಮಿ?

Published:
Updated:
Deccan Herald

ಕುಣಿಗಲ್: ಕ್ಷುಲಕ ಕಾರಣಕ್ಕೆ ವ್ಯಕ್ತಿಯನ್ನು ಅಮಾನುಷವಾಗಿ ಥಳಿಸಿದ ಪೊಲೀಸರ ದೌರ್ಜನ್ಯ ಖಂಡಿಸಿ ಹುಲಿಯೂರುದುರ್ಗದಲ್ಲಿ ನಾಗರಿಕರು ಸೋಮವಾರ ಪ್ರತಿಭಟನೆ ನಡೆಸಿದರು. ಉಪತಹಶೀಲ್ದಾರ್ ರವೀಂದ್ರ ಮತ್ತು ಸಿಪಿಐ ಅಶೋಕ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ದೌರ್ಜನ್ಯಕ್ಕೆ ಒಳಗಾದ ಪದ್ಮನಾಭ್ ಅವರ ತಾಯಿ ಸೌಭಾಗ್ಯಮ್ಮ, ಸಹೋದರಿ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಲಲಿತಮ್ಮ ನೇತೃತ್ವದಲ್ಲಿ ಸಂಘಟಿತರಾದ ನಾಗರಿಕರು ಹಳೆಪೇಟೆಯ ಆಂಜನೇಯ ದೇವಾಲಯದ ವೃತ್ತದಿಂದ ನಾಡಕಚೇರಿ ಮತ್ತು ಪೊಲೀಸ್ ಠಾಣೆಯವರೆಗೆ   ಮೆರವಣಿಗೆ ನಡೆಸಿದರು.

ಗ್ರಾಮಪಂಚಾಯಿತಿ ಮಾಜಿ ಸದಸ್ಯ ನಟರಾಜ್ ಮಾತನಾಡಿ, ‘ಹೋಬಳಿಯಲ್ಲಿ ಪೊಲೀಸರು ಮತ್ತು ನಾಗರಿಕರ ನಡುವೆ ಸೌಹಾರ್ದ ಇದೆ. ಆದರೆ ಪೊಲೀಸರು ಪದ್ಮನಾಭ್ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ದೇಶದಲ್ಲಿ ಉಗ್ರಗಾಮಿಗಳನ್ನು ಬಂಧಿಸಿದಾಗ ಮಾನವೀಯತೆ ತೋರಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ನಾಡಿನಲ್ಲಿ ಯಾವ ಮಹಾಪರಾಧ ಮಾಡದ ವ್ಯಕ್ತಿಯನ್ನು ಮಧ್ಯರಾತ್ರಿ ಮನೆಗೆ ನುಗ್ಗಿ ಮನ ಬಂದಂತೆ ಥಳಿಸಿರುವುದು ಖಂಡನೀಯ. ಪದ್ಮನಾಭ್ ಅವರಿಗೆ ಚಿಕಿತ್ಸೆ ಕೊಡಿಸುವಂತೆ ನ್ಯಾಯಾಲಯವೇ ಹೇಳಿದ್ದರೂ ಪೊಲೀಸರು ನಿರ್ಲಕ್ಷ್ಯತೋರಿರುವುದು ಅಕ್ಷಮ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಲಿತಮ್ಮ ಮಾತನಾಡಿ, ‘ರಕ್ಷಣೆ ನೀಡಬೇಕಾದ ಪೊಲೀಸರೇ ಅಮಾನವೀಯವಾಗಿ ವರ್ತಿಸಿದ್ದಾರೆ. ನಾವು ನ್ಯಾಯಕ್ಕಾಗಿ ಯಾರ ಬಳಿ ಹೋಗಬೇಕು ಸ್ವಾಮಿ’ ಎಂದು ಪ್ರಶ್ನಿಸಿದರು. ಸಹೋದರನನ್ನು ಬಿಡುಗಡೆ ಮಾಡಬೇಕು, ಅನಾರೋಗ್ಯದಿಂದ ಬಳಲುತ್ತಿರುವ ಸಹೋದರನ ಚಿಕಿತ್ಸೆಗೆ ನೆರವಾಗಬೇಕು, ಮೃಗದಂತೆ ವರ್ತಿಸಿರುವ ಪೊಲೀಸರ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಸಿಪಿಐ ಅಶೋಕ್ ಕುಮಾರ್, ‘ಘಟನೆ ಬಗ್ಗೆ ಸಮಗ್ರ ತನಿಖೆ ಮಾಡಲಾಗಿದೆ’ ಎಂದರು.

ಬಲಿಜಿಗ ಸಂಘದ ಪ್ರಮುಖರಾದ ಮುಕುಂದರಾಜಪ್ಪ, ಮುರಳೀಧರ್, ಲೀಲಾ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್, ಆಟೊ ಚಾಲಕರ ಸಂಘದ ಅಧ್ಯಕ್ಷ ಭೈರಪ್ಪ, ಮಿಲಿಟರಿ ಕರಿಯಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್, ಸುರೇಶ್, ಅಣತಹಳ್ಳಿ ಕುಮಾರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !