ತುಮಕೂರು: 3 ತಿಂಗಳಿಂದ ವೇತನ ನೀಡದ ಪಾಲಿಕೆ, ಆಯುಕ್ತರ ಕಚೇರಿ ಎದುರೇ ಪ್ರತಿಭಟನೆ

7
ಕಟ್ಟೆಯೊಡೆದ ಪೌರ ಕಾರ್ಮಿಕರ ಆಕ್ರೋಶ

ತುಮಕೂರು: 3 ತಿಂಗಳಿಂದ ವೇತನ ನೀಡದ ಪಾಲಿಕೆ, ಆಯುಕ್ತರ ಕಚೇರಿ ಎದುರೇ ಪ್ರತಿಭಟನೆ

Published:
Updated:
Deccan Herald

ತುಮಕೂರು: ಕಳೆದ ಮೂರು ತಿಂಗಳಿಂದ ವೇತನ ನೀಡದ ಮಹಾನಗರ ಪಾಲಿಕೆ ಕ್ರಮ ಖಂಡಿಸಿ ಪೌರಕಾರ್ಮಿಕರು ಸೋಮವಾರ ಪಾಲಿಕೆಯ ಆಯುಕ್ತ ಕಚೇರಿಗೆ ಮುತ್ತಿಗೆ ಹಾಕಿದರು. ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.

ಬೆಳಿಗ್ಗೆಯೇ ಪಾಲಿಕೆಯ ಎದುರು ಸಮಾವೇಶಗೊಂಡ 200ಕ್ಕೂ ಹೆಚ್ಚು ಪೌರ ಕಾರ್ಮಿಕರು ವೇತನ ನೀಡದ ಕಾರಣ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಮನೆ ಬಾಡಿಗೆ ಕಟ್ಟಿಲ್ಲ. ಮಾಲೀಕರು ಮನೆ ಖಾಲಿ ಮಾಡುವಂತೆ ಹೇಳುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ. ಕರೆಂಟ್ ಬಿಲ್ ಕೂಡ ಕಟ್ಟಲು ಸಾಧ್ಯವಾಗಿಲ್ಲ ಎಂದು ಅಳಲನ್ನು ತೊಡಿಕೊಳ್ಳುತ್ತಲೇ, ಕೂಡಲೇ ವೇತನ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಪಿಎಫ್, ಇಎಸ್‌ಐ ಸಮಸ್ಯೆ ಪರಿಹರಿಸಲು ಸಭೆ ಕರೆಯುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ ಇದುವರೆಗೂ ಸಭೆ ಕರೆದಿಲ್ಲ. ಕುರಿಪಾಳ್ಯದ ಆರಕ್ಕೂ ಹೆಚ್ಚು ಪೌರಕಾರ್ಮಿಕರು ನಿವೃತ್ತಿ ಹೊಂದಿದ್ದಾರೆ. ಅವರಿಗೆ ಪಿಂಚಣಿ ನೀಡಿಲ್ಲ’ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ. ಸುಬ್ರಮಣ್ಯ ಮಾತನಾಡಿ, ‘ಪೌರಕಾರ್ಮಿಕರನ್ನು ಅಧಿಕಾರಿಗಳು ವಿಭಾಗಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಪ್ರತಿ ಕಾರ್ಮಿಕರು ಹೊಸ ಸಂಘಕ್ಕೆ ₹ 500 ನೀಡುವಂತೆ ಒತ್ತಾಯಿಸಲಾಗುತ್ತಿದೆ. ಹಣ ನೀಡದ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಕೆಲವು ಪರಿಸರ ಎಂಜಿನಿಯರ್ ಮತ್ತು ಕೆಲ ಆರೋಗ್ಯ ನಿರೀಕ್ಷಕರು ಈ ಕೃತ್ಯದಲ್ಲಿ ತೊಡಗಿದ್ದಾರೆ’ ಎಂದು ದೂರಿದರು.

‘ಪೌರಕಾರ್ಮಿಕರನ್ನು ಬೇರೆ ಬೇರೆ ವಾರ್ಡ್‌ಗಳಿಗೆ ಬದಲಾವಣೆ ಮಾಡಲಾಗುತ್ತಿದ್ದು ಈ ನೀತಿ ಕೈಬಿಡಬೇಕು. ವಾರದಲ್ಲಿ ಒಂದು ದಿನ ಪೂರ್ಣಾವಧಿ ರಜೆ ನೀಡಬೇಕು. ಪ್ರತಿಯೊಂದು ರಾಷ್ಟ್ರೀಯ ಹಬ್ಬಗಳಲ್ಲಿಯೂ ರಜೆ ನೀಡಬೇಕು. ಆದರೆ ಈಗ ರಾಷ್ಟ್ರೀಯ ಹಬ್ಬಗಳ ದಿನದಂದು ಕೂಡ ದುಡಿಸಿಕೊಳ್ಳಲಾಗುತ್ತಿದೆ. ಇದು ಅವೈಜ್ಞಾನಿಕ ಮತ್ತು ಕಾನೂನುಬಾಹಿರ’ ಎಂದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ‘ವಾರದ ಎಲ್ಲ ದಿನ ದುಡಿಸಿಕೊಳ್ಳುವ ನೀತಿಯನ್ನು ಕೈಬಿಡಬೇಕು. ಗುತ್ತಿಗೆ ಪದ್ಧತಿಯಡಿ ದುಡಿಯುವ ಎಲ್ಲರಿಗೂ ತಿಂಗಳ 10ನೇ ತಾರೀಕಿನ ಒಳಗೆ ಸಂಬಳ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಪಾಲಿಕೆ ಸದಸ್ಯರಾದ ನಯಾಜ್ ಅಹಮದ್, ಹಫೀಜ್, ರವಿಕುಮಾರ್, ಕುಮಾರ್, ಲಲಿತಾ ಗಂಗಹನುಮಯ್ಯ, ಮಹೇಶ್ ಪೌರಕಾರ್ಮಿಕರನ್ನು ವಾರ್ಡ್‌ಗಳಿಂದ ಬದಲಾವಣೆ ಮಾಡಬಾರದು. ಹೊಸಬರು ಬಂದು ಸ್ಥಳದಲ್ಲಿ ಹೊಂದಿಕೊಂಡು ಕೆಲಸ ಮಾಡಲು ಹಲವು ತಿಂಗಳು ಬೇಕಾಗುತ್ತದೆ ಎಂದರು.

ಮಾತಿನ ಚಕಮಕಿ

ಬೆಳಗ್ಗೆ 6ರಿಂದ 11ರವರೆಗೆ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು. ಈ ವೇಳೆ ಆಯುಕ್ತರು ಸ್ಥಳಕ್ಕೆ ಬರಲಿಲ್ಲ. ಇದನ್ನು ಖಂಡಿಸಿ ಆಯುಕ್ತ ಕಚೇರಿಯ ಬಳಿಯೇ ತೆರಳಿ ಧರಣಿ ನಡೆಸಿದರು. ಧಿಕ್ಕಾರದ ಘೋಷಣೆ ಕೂಗಿದರು.

ಪಾಲಿಕೆ ಸದಸ್ಯರು ಹಾಗೂ ಆರೋಗ್ಯಾಧಿಕಾರಿ ನಡುವೆ ಮಾತಿನ ಚಕಮುಕಿ ನಡೆಯಿತು. ಪೊಲೀಸರು ಹಾಗೂ ಪ್ರತಿಭಟನಾಕಾರರು ಆಯುಕ್ತರನ್ನು ಸಂಪರ್ಕಿಸಲು ಯತ್ನಿಸಿದರು. ಆಯುಕ್ತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು. ಈ ವೇಳೆ ಸ್ಥಳಕ್ಕೆ ಬಂದ ಹಣಕಾಸು ವಿಭಾಗದ ಶಿವಣ್ಣ ಅವರಿಗೆ ಸೈಯದ್ ಮುಜೀಬ್ ಸಮಸ್ಯೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಈ ವೇಳೆ ಕಾರ್ಮಿಕರು ಆಕ್ರೋಶವನ್ನು ಹೊರಹಾಕುತ್ತಿದ್ದರು. ವೇತನ ಬಿಡುಗಡೆ ಮಾಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !