ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾನಿಗಳ ನೆರವಿನಿಂದ ಪುಸ್ತಕ ವಿತರಣೆ

‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಸಾಮಾಜಿಕ ಜಾಲತಾಣ ಅಭಿಯಾನ
Last Updated 9 ಜೂನ್ 2018, 8:14 IST
ಅಕ್ಷರ ಗಾತ್ರ

ಹಿರಿಯಡಕ: ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆ್ಯಪ್, ಫೇಸ್‌ಬುಕ್‌ ಮೂಲಕ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಎಂಬ ಅಭಿಯಾನ ನಡೆಸಿ, ದಾನಿಗಳ ನೆರವಿನಿಂದ ಹಣ ಸಂಗ್ರಹಿಸಿ, ಶಾಲಾ ವಿದ್ಯಾರ್ಥಿಗಳಿಗೆ ಸಾವಿರಾರು ರೂಪಾಯಿ ಮೌಲ್ಯದ ನೋಟ್ ಪುಸ್ತಕಗಳನ್ನು ವಿತರಿಸಿದ ಸಾಮಾಜಿಕ ಕಳಕಳಿಯ ಘಟನೆ ಉಡುಪಿ ತಾಲ್ಲೂಕಿನ ಮರ್ಣೆಯಲ್ಲಿ ವರದಿಯಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಆಂಗ್ಲ ಮಾಧ್ಯಮದ ವ್ಯಾಮೋಹದಿಂದಾಗಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಗ್ಲಿಷ್‌ ಶಾಲೆಗಳ ಪೈಪೋಟಿಯ ನಡುವೆಯೂ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ, ಪುಸ್ತಕಗಳನ್ನು ಸರ್ಕಾರವೇ ನೀಡುತ್ತದೆ. ಖಾಸಗಿ ಶಾಲೆಗಳಲ್ಲಿ ಸರ್ಕಾರದಿಂದ ಪಠ್ಯಪುಸ್ತಕಗಳು ಮಾತ್ರ ಉಚಿತವಾಗಿ ದೊರೆಯುತ್ತವೆ. ಆದರೆ, ಸಮವಸ್ತ್ರ ಮತ್ತು ನೋಟ್ ಪುಸ್ತಕಗಳನ್ನು ವಿತರಿಸಲು ಶಾಲೆಯ ಆಡಳಿತ ಮಂಡಳಿಯವರು ದಾನಿಗಳ ಮೊರೆ ಹೋಗುವಂತಹ ಪರಿಸ್ಥಿತಿ ಇದೆ. ಇಂತಹ ಪರಿಸ್ಥಿತಿ ಎದುರಿಸುತ್ತಿರುವ ಉಡುಪಿ ತಾಲ್ಲೂಕಿನ ಮರ್ಣೆಯ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ ಜಾಲತಾ
ಣಗಳ ಮೂಲಕ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಎಂಬ ಅಭಿಯಾನ ನಡೆಸಿ ದಾನಿಗಳ ನೆರವಿನಿಂದ ಹಣ ಸಂಗ್ರಹಿಸಿ ನೋಟ್ ಪುಸ್ತಕವನ್ನು ವಿತರಿಸಲಾಗಿದೆ.

1928ರಲ್ಲಿ ಕನರಾಡಿ ದಿ.ದಾಮೋದರ ನಾಯಕ್ ಅವರಿಂದ ಸ್ಥಾಪನೆಯಾದ ಈ ಶಾಲೆಯಲ್ಲಿ ದಯಾನಂದ ನಾಯಕ್ ಅವರ ಸಂಚಾಲಕತ್ವದಲ್ಲಿ ಪ್ರಸ್ತುತ 1ರಿಂದ 7ನೇ ತರಗತಿವರೆಗೆ ಕಲಿಯಲು ಅವಕಾಶವಿದೆ. ಇಲ್ಲಿ ಈಗ 37 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸುಸಜ್ಜಿತ ಸ್ವಂತ ಕಟ್ಟಡ ಹಾಗೂ ಎಲ್ಲಾ ರೀತಿಯ ಮೂಲ ಸೌಕರ್ಯ ಹೊಂದಿರುವ ಈ ಶಾಲೆಯಲ್ಲಿ ಇಬ್ಬರು ಕಾಯಂ ಶಿಕ್ಷಕರು ಹಾಗೂ ಇಬ್ಬರು ಗೌರವ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ದಾನಿಯೊಬ್ಬರು ಉಚಿತ
ಸಮವಸ್ತ್ರ ಹಾಗೂ ನೋಟ್ ಪುಸ್ತಕಗಳನ್ನು ವಿತರಿಸುತ್ತಿದ್ದರು. ಈ ಬಾರಿ ವೈಯುಕ್ತಿಕ ಸಮಸ್ಯೆಯಿಂದ ಅವರು ನೋಟ್ ಪುಸ್ತಕವನ್ನು ವಿತರಿಸಲಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಈ ಬಾರಿ ಸಮಸ್ಯೆ ಎದುರಿಸಿದ್ದರು. ಈ ಸಮಸ್ಯೆಯನ್ನು ಮನಗಂಡ ಮರ್ಣೆಯ ‘ನಮ್ಮ ಊರು ನಮ್ಮ ಗ್ರಾಮ’ ಎಂಬ ವಾಟ್ಸ್‌ಆ್ಯಪ್ ಬಳಗದ ಅಡ್ಮಿನ್, ಮಣಿಪುರ ಗ್ರಾಮ ಪಂಚಾಯಿತಿ ಸದಸ್ಯ ಪ್ರಜ್ವಲ್ ಹೆಗ್ಡೆ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ ವಿತರಿಸಲು ಧನ ಸಹಾಯ ನೀಡುವಂತೆ ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಎಂಬ ಅಭಿಯಾನದಡಿ ತಮ್ಮ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಕೇಳಿಕೊಂಡಿದ್ದರು.

ಈ ಮನವಿಗೆ ಶಾಲೆಯ ಅಭಿಮಾನಿಗಳಿಂದ, ಊರಿನ ಯುವಕರಿಂದ ಉತ್ತಮ ಪ್ರತಿಕಿಯೆ ವ್ಯಕ್ತವಾಗಿತ್ತು. ಬಳಿಕ ತಮ್ಮ ಫೇಸ್‌ಬುಕ್‌ನಲ್ಲಿಯೂ ಮನವಿ ಸಲ್ಲಿಸಿದ್ದರು. ಪ್ರಜ್ವಲ್ ಅವರ ಮನವಿಗೆ ಸ್ಪಂದಿಸಿ ಹೊರದೇಶದಲ್ಲಿ ಇರುವ ಅನೇಕ ಸ್ನೇಹಿತರು ಕನ್ನಡ ಶಾಲೆ ಉಳಿಸುವ ಅಭಿಯಾನಕ್ಕೆ ಕೈಜೋಡಿಸಿದರು. ಊರ ಹಾಗೂ ಹೊರ ದೇಶದಲ್ಲಿರುವ ದಾನಿಗಳಾದ ಶ್ರೀಪತಿ ಪಾಟ್ಕರ್, ಪವನ್ ಶೆಟ್ಟಿ, ಅವಿನಾಶ್, ರಾಘವೇಂದ್ರ ನಾಯ್ಕ್, ಪವಿತ್ರಾ ಶೆಟ್ಟಿ, ಪವಿತ್ರಾ ಸುನಿಲ್ ಭಂಡಾರಿ, ಹರ್ಷಿತ್ ಶೆಟ್ಟಿ ಹಾಗೂ ಶಾಲಾ ಅಭಿಮಾನಿಗಳು, ಊರಿನ ಯುವಕರು ಸೇರಿ ಈ ಅಭಿಯಾನದ ಮೂಲಕ ಕೇವಲ ಒಂದು ವಾರದಲ್ಲಿ ಸಾಮಾಜಿಕ ಜಾಲತಾಣದ ಮುಖಾಂತರ ಒಟ್ಟು ₹75 ಸಾವಿರ ಸಂಗ್ರಹಿಸಿದ್ದಾರೆ. ಅದರಲ್ಲಿ ₹20 ಸಾವಿರದ ನೋಟ್ ಪುಸ್ತಕವನ್ನು ಗುರುವಾರ ದಾನಿಗಳ ಮೂಲಕವೇ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಉಳಿದ ₹55 ಸಾವಿರ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಆ ಹಣವನ್ನು ಮುಂದಿನ ವರ್ಷಕ್ಕೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲು ಬಳಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಎಂಬ ಸಾಮಾಜಿಕ ಜಾಲತಾಣದ ಅಭಿಯಾನಕ್ಕೆ ಇನ್ನೂ ಹೆಚ್ಚಿನ ಪ್ರತಿಕ್ರಿಯೆ ಬರುತ್ತಿದ್ದು, ದುಬೈ ಕನ್ನಡ ಸಂಘದ ಸದಸ್ಯರು ಸೇರಿದಂತೆ ಹಲವಾರು ದಾನಿಗಳು ಧನ ಸಹಾಯ ನೀಡುವ ಭರವಸೆ ನೀಡಿದ್ದಾರೆ. ಆ ಮೊತ್ತವನ್ನು ಗೌರವ ಶಿಕ್ಷಕರಿಗೆ ಗೌರವ ಧನ ನೀಡಲು ಮತ್ತು ಶಾಲೆಯ ಅಭಿವೃದ್ಧಿಗೆ ಬಳಸುವ ನಿರ್ಧಾರ ಕೈಗೊಳ್ಳಲಾಗಿದೆ.

ಸಹಕರಿಸಿದವರಿಗೆಲ್ಲಾ ಧನ್ಯವಾದಗಳು

‘ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕವನ್ನು ವಿತರಿಸಲು ಸಮಸ್ಯೆ ಇರುವುದರ ಕುರಿತು ಹೇಳಿಕೊಂಡಾಗ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ನಡೆಸಿ ದಾನಿಗಳ ನೆರವಿನಿಂದ ಹಣ ಸಂಗ್ರಹಿಸಿ, ಅದರಿಂದ ನೋಟ್‌ಪುಸ್ತಕಗಳನ್ನು ನೀಡುವ ಸಂಕಲ್ಪ ಮಾಡಿದೆವು. ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಕೇವಲ ಸಾಮಾಜಿಕ ಜಾಲತಾಣದ ಮೂಲಕವೇ ಇಷ್ಟು ಮೊತ್ತ ಸಂಗ್ರಹವಾಗಿದ್ದು ಸಂತಸ ತಂದಿದೆ. ಕನ್ನಡ ಶಾಲೆ ಉಳಿಸಿ ಬೆಳೆಸಲು ಸಹಕರಿಸಿದ ಎಲ್ಲಾ ದಾನಿಗಳಿಗೆ ಧನ್ಯವಾದಗಳು’ ಎನ್ನುತ್ತಾರೆ ಅಭಿಯಾನದ ರೂವಾರಿ ಪ್ರಜ್ವಲ್ ಹೆಗ್ಡೆ.

ಇತರರಿಗೂ ಮಾದರಿಯಾಗಲಿ

‘ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕವನ್ನು ವಿತರಿಸಲು ಸಮಸ್ಯೆ ಇರುವುದರ ಕುರಿತು ಊರಿನವರಲ್ಲಿ, ಶಾಲೆಯ ಹಳೆ ವಿದ್ಯಾರ್ಥಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಊರಿನ ಯುವಕರು ವಾಟ್ಸ್‌ಆ್ಯಪ್, ಫೇಸ್‌ಬುಕ್ ಮೂಲಕ ದಾನಿಗಳ ನೆರವಿನಿಂದ ದೊಡ್ಡ ಮೊತ್ತವನ್ನು ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ. ಇವರ ಕಾರ್ಯ ಇತರರಿಗೂ ಮಾದರಿಯಾಗಲಿ’ ಎಂದು ಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ನಾಯ್ಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT