ಬುಧವಾರ, ಅಕ್ಟೋಬರ್ 16, 2019
28 °C

ಕಾರ್ಮಿಕರ ಪ್ರತಿಭಟನೆ: ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ಒತ್ತಾಯ

Published:
Updated:

ತುಮಕೂರು: ನಗರದ ಅಂತರಸನಹಳ್ಳಿಯ ಕಾಳೇಶ್ವರಿ ರೀಫೈನರಿ ಸಂಸ್ಥೆಯಲ್ಲಿ 10–12 ವರ್ಷಗಳಿಂದ ದುಡಿದ ಕಾರ್ಮಿಕರನ್ನು ಏಕಾಏಕಿ ಹೊರಹಾಕಿರುವುದನ್ನು ಪ್ರತಿಭಟಿಸಿ ಕಾರ್ಖಾನೆ ಮುಂದೆ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶನಿವಾರ 15ನೇ ದಿನ ಪೂರ್ಣಗೊಳಿಸಿದೆ. ಆದರೂ ಕಾರ್ಖಾನೆಯ ಮಾಲೀಕರು ಸಮಸ್ಯೆ ಬಗೆಹರಿಸಲು ಮುಂದೆ ಬರುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಹತ್ತು ಹನ್ನೆರಡು ವರ್ಷಗಳಿಂದ ದುಡಿಯುತ್ತಿದ್ದರೂ ಕಾಯಂಗೊಳಿಲ್ಲ. ಅಲ್ಪ ಸಂಬಳದಲ್ಲಿ ಸುಳ್ಳು ಗುತ್ತಿಗೆದಾರರ ಮೂಲಕ ದುಡಿಸಿಕೊಳ್ಳುತ್ತಿರುವ ಬಗ್ಗೆ ಮೊಕದ್ದಮೆಗಳು ನ್ಯಾಯಾಲಯದಲ್ಲಿ ದಾಖಲಾಗಿದೆ. ಕಾರ್ಮಿಕರ ಪರವಾಗಿ ತೀರ್ಪು ಬರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿ ಆಡಳಿತ ಮಂಡಳಿಯು ಏಕಾಏಕಿ 70 ಜನರನ್ನು ಕೆಲಸದಿಂದ ತೆಗೆದಿದೆ ಎಂದು ಆರೋಪಿಸಿದರು.

ಕಳೆದ ಒಂದು ತಿಂಗಳಿಂದಲೂ ವೇತನ ನೀಡಿಲ್ಲ. ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಮನೆ ಬಾಡಿಗೆ ಕಟ್ಟಲು ತೊಂದರೆ ಆಗಿದೆ. ಮಕ್ಕಳ ಶಿಕ್ಷಣಕ್ಕೂ ಅಡ್ಡಿಯಾಗಿದೆ. ಸಾಲಗಳನ್ನು ತೀರಿಸಲು ಆಗುತ್ತಿಲ್ಲ. ಈ ಕೆಲಸ ಬಿಟ್ಟರೆ ಬೇರೆ ಯಾವುದೇ ಆದಾಯದ ಮೂಲವೂ ಇಲ್ಲ. ಇದನ್ನೇ ನಂಬಿ ಬದುಕುತ್ತಿದ್ದೇವೆ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.

ಕೂಡಲೇ ಕಾರ್ಮಿಕ ಇಲಾಖೆ ಮತ್ತು ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕು. ಕಂಪನಿಯ ಮಾಲಿಕರು, ಜಿಲ್ಲಾಡಳಿತ ಮತ್ತು ಕಾರ್ಮಿಕ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ ಕಾರ್ಮಿಕರ ಹಿತಕಾಯಬೇಕು ಎಂದು ಆಗ್ರಹಿಸಿದರು.

Post Comments (+)