ಮಂಗಳವಾರ, ನವೆಂಬರ್ 19, 2019
28 °C
ಭಾರತೀಯ ಕಮ್ಯುನಿಸ್ಟ್‌ ಪಕ್ಷದ ಪ್ರತಿಭಟನೆ: ಉದ್ಯೋಗ ಸೃಷ್ಟಿಗೆ ಒತ್ತಾಯ

‘ಕೋಮುಭಾವನೆಗೆ ಕೇಂದ್ರದ ಪೋಷಣೆ’

Published:
Updated:
Prajavani

ತುಮಕೂರು: ಕೇಂದ್ರ ಸರ್ಕಾರ ದೇಶವನ್ನು ಅಭಿವೃದ್ಧಿ ದಾರಿಯಲ್ಲಿ ಮುನ್ನಡೆಸದೆ, ಕೇವಲ ಕೋಮುಭಾವನೆ ಕೆರಳಿಸುವ ಮೂಲಕ ಸಮಾಜದಲ್ಲಿ ವಿಷ ಬೀಜವನ್ನು ಬಿತ್ತುತ್ತಿದೆ ಎಂದು ಭಾರತೀಯ ಕಮ್ಯುನಿಸ್ಟ್‌ ಪಕ್ಷದ (ಸಿಪಿಐ) ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರೋಪಿಸಿದರು.

ಬಿಎಸ್‍ಎನ್‍ಎಲ್ ಕಚೇರಿ ಎದುರು ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರ ವಿರುದ್ಧ ಎಡಪಕ್ಷಗಳ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರದ ಆರ್ಥಿಕ ನೀತಿಗಳು ಕಾರ್ಮಿಕರಿಗೆ ಕೆಲಸವಿಲ್ಲದಂತೆ ಮಾಡಿವೆ. ಜೈ ಶ್ರೀರಾಮ್ ಘೋಷಣೆ ಕೂಗಿಲ್ಲವೆಂದು ಗುಂಪುಹಲ್ಲೆಗಳು ನಿರಂತರವಾಗಿ ನಡೆಯುತ್ತಿವೆ. ಅದನ್ನು ನಿಯಂತ್ರಿಸಲು ಸರ್ಕಾರ ಮುಂದಾಗುತ್ತಿಲ್ಲ. ಇಂತಹ ಹಲ್ಲೆಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

5 ವರ್ಷಗಳಲ್ಲಿ ಅಂಬಾನಿ ಸಂಪತ್ತು ₹ 1 ಲಕ್ಷ ಕೋಟಿಯಿಂದ ₹ 3.58 ಲಕ್ಷ ಕೋಟಿಗೆ ಹೆಚ್ಚಿದೆ. ₹4,000 ಕೋಟಿ ಇದ್ದ ಅದಾನಿ ಸಂಪತ್ತು ಈಗ ₹1.10 ಲಕ್ಷ ಕೋಟಿ ಆಗಿದೆ. ಹಿಂದೆ ಮುಚ್ಚಿದ್ದ ರಿಲಯನ್ಸ್ ಪೆಟ್ರೋಲ್ ಬಂಕ್ ಇಂದು ಲಾಭ ಮಾಡುತ್ತಿದೆ. ಆದರೆ, ಲಾಭದಲ್ಲಿದ್ದ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಯ ಬಂಕ್‌ಗಳು ನಷ್ಟದ ಹಾದಿ ಹಿಡಿದಿದೆ. ಇದು ಮೋದಿ ಮಾಡಿರುವ ದೇಶದ ಅಭಿವೃದ್ಧಿ ಎಂದು ಲೇವಡಿ ಮಾಡಿದರು.

ಸಿಪಿಎಂ ಮುಖಂಡ ಸೈಯದ್ ಮುಜೀಬ್, ಕೇಂದ್ರ ಸರ್ಕಾರ ಆರ್ಥಿಕ ನೀತಿಯನ್ನು ನಿರೂಪಿಸಲು ಎಡವಿದ್ದರಿಂದಲೇ ಇಂದು ಕಾರ್ಮಿಕರ ಕೈಗಳಿಗೆ ಕೆಲಸವಿಲ್ಲ. ಕೇವಲ ಕಾರ್ಪೊರೇಟ್‌ ಸಂಸ್ಥೆಗಳ ಕೈಗೊಂಬೆಯಂತೆ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಕಾರ್ಮಿಕರಿಗೆ, ರೈತರಿಗೆ ಅನುಕೂಲ ಆಗುವಂತಹ ಯೋಜನೆಗಳನ್ನು ತರುತ್ತಿಲ್ಲ. ಇದರಿಂದಾಗಿ ನಿರುದ್ಯೋಗದ ಪ್ರಮಾಣ ಹೆಚ್ಚಳವಾಗುತ್ತಿದೆ. ಮುಂದಿನ ದಿನಗಳಲ್ಲಿ ನಿರುದ್ಯೋಗ ಭತ್ಯೆ ನೀಡಬೇಕಾದ ಅನಿವಾರ್ಯತೆ ಬರಬಹುದು ಎಂದರು.

ಸಿಪಿಐ(ಎಂ)ನ ಸುಬ್ರಮಣ್ಯ, ಉಮೇಶ್, ಕಂಬೇಗೌಡ, ಸಿಐಟಿಯು ಖಜಾಂಚಿ ಲೋಕೇಶ್, ಕಟ್ಟಡ ಕಾರ್ಮಿಕ ಮುಖಂಡರಾದ ಕಲೀಲ್, ನಾಗರಾಜ್, ರಾಮಮೂರ್ತಿ, ರಾಮಕೃಷ್ಣ, ಸತೀಶ್, ಆಟೊ ಬಾಬು, ಇಂತಿಯಾಜ್, ಶೀಷಾತಾಜ್, ಕಾಂತರಾಜ್, ನರಸಿಂಹಮೂರ್ತಿ, ರಾಜಶೇಖರ್, ರವಿಶಂಕರ್, ನಾಗರತ್ನಮ್ಮ, ನಾಗಣ್ಣ, ಕುಪ್ಪೂರು ಅಮರ್ ಇದ್ದರು.

ಪ್ರತಿಕ್ರಿಯಿಸಿ (+)