ಶನಿವಾರ, ನವೆಂಬರ್ 23, 2019
22 °C

ಸಮರ್ಪಕ ಮಾಸಾಶನಕ್ಕೆ ಆಗ್ರಹ

Published:
Updated:
Prajavani

ತುಮಕೂರು: ವೃದ್ಧಾಪ್ಯ, ಅಂಗವಿಕಲ ಮತ್ತು ವಿಧವಾ ವೇತನವನ್ನು ಸಮರ್ಪಕವಾಗಿ ವಿತರಿಸುವಂತೆ ಆಗ್ರಹಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಷ್ಟ್ (ಎಸ್‌ಯುಸಿಐ–ಸಿ) ಕಾರ್ಯಕರ್ತರು ಹಾಗೂ ಪಿಂಚಣಿದಾರರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.

ತುಮಕೂರು ತಾಲೂಕಿನಾದ್ಯಂತ ಸಾವಿರಾರು ಜನ ಈ ಸೌಲಭ್ಯಗಳ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಆದರೆ ಅವರಿಗೆ ಪ್ರತಿ ತಿಂಗಳು ಮಾಸಾಶನ ಬರುತ್ತಿಲ್ಲ. ಇದರಿಂದ ಅವರ ಬದುಕು ಕಷ್ಟವಾಗಿದೆ. ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

‌ಎಸ್‌ಯುಸಿಐ (ಸಿ) ಜಿಲ್ಲಾ ಸಂಘಟಕಿ ಎಂ.ವಿ.ಕಲ್ಯಾಣಿ, ವೃದ್ಧರು, ವಿಧವೆಯರು ಮತ್ತು ಅಂಗವಿಕಲರ ಪಿಂಚಣಿ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಕಳೆದ ವರ್ಷದಿಂದ ಪಿಂಚಣಿಯನ್ನು 3ರಿಂದ 10 ತಿಂಗಳವರೆಗೆ ನೀಡಿಲ್ಲ. ಇದು ಖಂಡನಾರ್ಹ. ಪಿಂಚಣಿ ಪಡೆಯದೆ ಜನರು ದಿನ ನಿತ್ಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ದೂರಿದರು.

ಸಂಘಟಕಿ ಮಂಜುಳಾ ಗೊನಾವರ, ‘60 ವರ್ಷದ ಮೇಲಿನ ವಯೋವೃದ್ಧರು ದುಡಿಯುವ ಶಕ್ತಿ ಕಳೆದುಕೊಂಡಿರುತ್ತಾರೆ. ಅವರಿಗೆ ನೆರವಾಗುವುದು ಪ್ರತಿ ಸರ್ಕಾರದ ಕರ್ತವ್ಯ. ಪಿಂಚಣಿ ಅವಂಬಿಸಿದ ಸಾವಿರಾರು ಜನರು ನಿತ್ಯ ಅಂಚೆ ಕಚೇರಿ, ಉಪ ಖಜಾನೆಗೆ ಅಲೆಯುವಂತಾಗಿದೆ. ತುಮಕೂರಿನ ಸುಮಾರು ಹಳ್ಳಿಗಳಲ್ಲಿ ಫಲಾನುಭವಿಗಳಿಗೆ ಕಳೆದ ಏಳೆಂಟು ತಿಂಗಳಿಂದ ವೇತನ ಬಂದಿಲ್ಲ’ ಎಂದರು.

ತಹಶೀಲ್ದಾರ್ ಯೋಗಾನಂದ, 15 ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ರತ್ನಮ್ಮ, ಅಶ್ವಿನಿ, ವೀರೇಶ್, ಸಾಗರ್ ಮತ್ತು ಪಿಂಚಣಿದಾರರು ಭಾಗಹಿಸಿದ್ದರು.

ಪ್ರತಿಕ್ರಿಯಿಸಿ (+)