ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆದು ಆಳುವ ನೀತಿ ಅನುಸರಿಸದಿರಿ

ನಾವು ಭಾರತೀಯರು ಜಂಟಿಕ್ರಿಯಾ ಸಮಿತಿ ಹಾಗೂ ಸಂವಿಧಾನ ಉಳಿಸಿ ವೇದಿಕೆಯಿಂದ ಪ್ರತಿಭಟನೆ
Last Updated 13 ಮಾರ್ಚ್ 2020, 11:15 IST
ಅಕ್ಷರ ಗಾತ್ರ

ತುಮಕೂರು: ಸರ್ಕಾರಗಳು ಜನರ ಆಶೋತ್ತರಗಳಿಗೆ ಸ್ಪಂದಿಸದೆ ಅಧಿಕಾರ ಭದ್ರಗೊಳಿಸಿಕೊಳ್ಳಲು ಇಂಗ್ಲೀಷರ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿವೆ ಎಂದು ಚಿಂತಕ ಕೆ.ದೊರೈರಾಜ್ ಹೇಳಿದರು.

ನಾವು ಭಾರತೀಯರು ಜಂಟಿಕ್ರಿಯಾ ಸಮಿತಿಯ ರಾಜ್ಯ ಘಟಕ ಹಾಗೂ ಸಂವಿಧಾನ ಉಳಿಸಿ ವೇದಿಕೆಯು ಮಹಾತ್ಮ ಗಾಂಧೀಜಿ 90 ವರ್ಷಗಳ ಹಿಂದೆ ನಡೆಸಿದ ದಂಡಿ ಉಪ್ಪಿನ ಸತ್ಯಾಗ್ರಹದ ಸ್ಮರಣಾರ್ಥ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಎನ್‍ಪಿಆರ್, ಎನ್‍ಆರ್‌ಸಿ ಜಾರಿ ಮಾಡುವ ಮೂಲಕ ಮೂಲನಿವಾಸಿಗಳನ್ನು ಪರಕೀಯರಂತೆ ಕಾಣುವ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಮಾತನಾಡಿ, ತ್ಯಾಗ ಬಲಿದಾನದಿಂದ ಪಡೆದ ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದಂಡಿ ಉಪ್ಪಿನ ಸತ್ಯಾಗ್ರಹವು ಸಾಮಾನ್ಯರ ಹೋರಾಟವಾಗಿ ರೂಪುಗೊಂಡು ಇಂಗ್ಲಿಷರ ಅಧಿಕಾರವನ್ನು ನಡುಗಿಸಿತ್ತು. ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ದಿಕ್ಕನ್ನು ರೂಪಿಸಿತು ಎಂದು ಸ್ಮರಿಸಿದರು.

ಪರಿಸರ ಹೋರಾಟಗಾರ ಸಿ.ಯತಿರಾಜು ಮಾತನಾಡಿ, ಕೇಂದ್ರ ಸರ್ಕಾರವು ಜನರಿಗೆ ಉತ್ತರದಾಯಿ ಆಗಬೇಕು. ಇಂದು ಹವಾಮಾನ ವೈಪರೀತ್ಯದಿಂದ ದೇಶದಲ್ಲಿ ಅಲ್ಲೋಲಕಲ್ಲೋಲ ನಡೆಯುತ್ತಿದೆ. ಇದರ ಬಗ್ಗೆ ಕಿಂಚಿತ್ತು ಚಿಂತಿಸದೆ, ಎನ್‌ಆರ್‌ಸಿ ಅಂಥ ಸಮಸ್ಯೆಗಳನ್ನು ಸೃಷ್ಟಿಸುವುದನ್ನು ನಿಲ್ಲಿಸಬೇಕು ಎಂದರು.

ಎನ್.ಪಿ.ಆರ್. ಮಾಹಿತಿ ಸಂಗ್ರಹಿಸುವ ಷಡ್ಯಂತ್ರವನ್ನು ಕೈಬಿಡಬೇಕು. ಇದರಿಂದ ಮಹಿಳೆಯರು, ಹಿಂದುಳಿದ ವರ್ಗಗಳು, ದಲಿತ ಸಮುದಾಯ, ಅಲೆಮಾರಿಗಳು, ಆದಿವಾಸಿಗಳು, ಕೊಳಗೇರಿ ನಿವಾಸಿಗಳು, ಗುಳೆ ಮತ್ತು ಕಟ್ಟಡ ಕಾರ್ಮಿಕರು, ದೇವದಾಸಿಯರು, ಪ್ರವಾಹ ಪೀಡಿತರು ಪೌರತ್ವದಿಂದ ವಂಚಿತರಾಗುತ್ತಾರೆ. ರಾಜ್ಯ ವಿಧಾನಮಂಡಲದ ಮೂಲಕ ಎನ್‍ಪಿಆರ್ ಮಾಡುವುದಿಲ್ಲವೆಂಬ ನಿರ್ಧಾರವನ್ನು ಪ್ರಕಟಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಮನವಿಯನ್ನು ಮುಖ್ಯಮಂತ್ರಿ ಕಚೇರಿಗೆ ರವಾನಿಸಲಾಯಿತು.

ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ತಾಜುದ್ದೀನ್ ಷರೀಫ್, ಸ್ಲಂ ಜನಾಂದೋಲನದ ಸಂಚಾಲಕ ಎ. ನರಸಿಂಹಮೂರ್ತಿ, ಸಿಐಟಿಯು ಮುಖಂಡ ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ, ಪ್ರಾಂತ ರೈತ ಸಂಘದ ಸಂಚಾಲಕ ಬಿ.ಉಮೇಶ್, ಯುವ ಮುಖಂಡರಾದ ಹನೀಫ್ ವುಲ್ಲಾ, ಶಮೀಲ್ ಅಹಮದ್, ಅಬ್ದುಲ್ ಖಾದರ್, ಷಫೀ ಅಹಮದ್ ಷರೀಫ್, ಮುಜ್‍ಮಿಲ್ ಪಾಷ, ಟಿಪ್ಪು ಸುಲ್ತಾನ್ ವೇದಿಕೆಯ ಸೈಯದ್ ಬುರಾನ್, ಕಲ್ಯಾಣಿ ಇದ್ದರು.

*

ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಅಧಿಕಾರ ನಡೆಸುತ್ತಿರುವವರ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕು

ಕೆ.ದೊರೈರಾಜ್, ಚಿಂತಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT