ಮಂಗಳವಾರ, ಅಕ್ಟೋಬರ್ 26, 2021
28 °C

ಶಿಷ್ಟಾಚಾರ ಉಲ್ಲಂಘನೆಯ ಆರೋಪ- ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಪಟ್ಟಣದ ಉದ್ಯಾನಗಳ ನಿರ್ವಹಣೆಯಲ್ಲಿ ಮತ್ತು ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ಬಿಜೆಪಿ ಸದಸ್ಯರು ಮತ್ತು ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಮಂಗಳವಾರ ಪ್ರತಿಭಟನೆ ನಡೆಸಿದರು.

ಸದಸ್ಯ ಕೋಟೆ ನಾಗಣ್ಣ, ಕೃಷ್ಣ, ಕುಮಾರ್ ಮತ್ತು ಗೋಪಿ ನೇತೃತ್ವದಲ್ಲಿ ಪುರಸಭೆ ಕಚೇರಿಗೆ ಬಂದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಚೇರಿಗೆ ಬೀಗ ಹಾಕಲು ಯತ್ನಿಸಿದರು. ಮುಖ್ಯಾಧಿಕಾರಿ ರವಿಕುಮಾರ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿ ವಿರುದ್ಧ ವೈಯುಕ್ತಿಕವಾಗಿ ನಿಂದಿಸಿದ ಕಾರಣ ಎರಡು ಕಡೆಯಿಂದ ವಾಗ್ವಾದ ನಡೆದು, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಹಂತದಲ್ಲಿ ಅಧ್ಯಕ್ಷ ನಾಗೇಂದ್ರ ಮತ್ತು ಪೊಲೀಸರು ಮಧ್ಯೆ ಪ್ರವೇಶಿಸಿ ‍ಪರಿಸ್ಥಿತಿ ನಿಯಂತ್ರಿಸಿದರು.

ಸದಸ್ಯ ಕೋಟೆ ನಾಗಣ್ಣ ಮಾತನಾಡಿ, ಪಟ್ಟಣದ ಉದ್ಯಾನಗಳ ಸೂಕ್ತ ನಿರ್ವಹಣೆ ಮಾಡುತ್ತಿಲ್ಲ. ನಿರ್ವಹಣೆಗೆ ಟೆಂಡರ್ ಮುಗಿದಿದ್ದರೂ, ನಿರ್ಧಾರಗಳನ್ನು ತೆಗೆದುಕೊಂಡು ಕಾರ್ಯಾದೇಶ ನೀಡದ ಕಾರಣ ಉದ್ಯಾನಗಳು ಅಧ್ವಾನದ ಕೇಂದ್ರಗಳಾಗುತ್ತಿವೆ. ಖಾತೆಗಳನ್ನು ನೀಡುವ ವಿಚಾರದಲ್ಲೂ ನಿಯಮ ಉಲಂಘನೆಯಾಗುತ್ತಿದೆ. ಸಾಮಾನ್ಯ ಸಭೆಗಳಲ್ಲಿ ಚರ್ಚೆಯಾದರೂ ಪ್ರಯೋಜನವಾಗಿಲ್ಲ ಎಂದರು.

ಸದಸ್ಯ ಕೃಷ್ಣ ಮಾತನಾಡಿ, ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಡಿ.ಕೃಷ್ಣಕುಮಾರ್ ಅವರನ್ನು ಕಡೆಗಣಿಸಲಾಗಿದೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರೊಬ್ಬರನ್ನು ವೇದಿಕೆ ಮುಂಭಾಗದಲ್ಲಿ ಗಣ್ಯರ ಜತೆ ಕುಳಿತುಕೊಳ್ಳಲು ಅವಕಾಶ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ಸದಸ್ಯರ ವಾರ್ಡ್‌ನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಉದ್ಘಾಟನೆಯಾಗಿದ್ದರೂ ಆ ಭಾಗದ ಸದಸ್ಯರನ್ನು ಕಡೆಗಣಿಸಿ ಕಾರ್ಯಕ್ರಮ ಮಾಡಲಾಗಿದೆ. ಮುಖ್ಯಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿ, ಸದಸ್ಯರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅಧ್ಯಕ್ಷ ನಾಗೇಂದ್ರ ಮತ್ತು ಮುಖ್ಯಾಧಿಕಾರಿ ರವಿಕುಮಾರ್‌ ಮಾತನಾಡಿ, ಉದ್ಯಾನಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗಿದ್ದು, ಇಬ್ಬರು ಒಂದೇ ದರಪಟ್ಟಿ ನೀಡಿರುವುದರಿಂದ ಸಮಸ್ಯೆಯಾಗಿದೆ. ಹೊಂದಾಣಿಕೆ ಮಾಡಿಕೊಂಡು ಒಬ್ಬರೆ ನಿರ್ವಹಿಸಲು ಸೂಚನೆ ನೀಡಲಾಗಿದೆ. ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗದಿದ್ದರೆ ಮರು ಟೆಂಡರ್ ಕರೆದು ನಿರ್ವಹಣೆ ಮಾಡಲಾಗುವುದು. ಅಲ್ಲಿಯವರೆಗೆ ಉದ್ಯಾನಗಳ ನಿರ್ವಹಣೆಗೆ ಕೂಡಲೇ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ರೇಣುಕಪ್ಪ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ರವಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದೇವರಾಜು, ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಯುವಮೋರ್ಚ ಕಾರ್ಯಕಾರಿಣಿ ಸದಸ್ಯ ಅನೂಪ್, ಒಬಿಸಿ ಮೋರ್ಚ ಅಧ್ಯಕ್ಷ ಸುರೇಶ್, ಎಸ್‌ಸಿ ಮೋರ್ಚ ಕಾರ್ಯದರ್ಶಿ ಲಕ್ಕಣ್ಣ, ಮುಖಂಡರಾದ ವರದರಾಜು, ಕುಣಿಗಲ್ ಶಿವಣ್ಣ, ಕನ್ನಡ ಸೇನೆ ಅಧ್ಯಕ್ಷ ಶ್ರೀನಿವಾಸ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.