ಶನಿವಾರ, ಅಕ್ಟೋಬರ್ 16, 2021
29 °C
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿರುದ್ಧವೂ ಆರೋಪಿಸಿದ ಪ್ರತಿಭಟನಾಕಾರರು

ಹೆಚ್ಚಿದ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ಪೊಲೀಸ್ ದೌರ್ಜನ್ಯ ಹೆಚ್ಚುತ್ತಿದೆ. ರಕ್ಷಣೆ ನೀಡಬೇಕಾದ ಪೊಲೀಸರೇ ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ‘ದಲಿತ ಹಕ್ಕುಗಳ ಸಮಿತಿ– ಕರ್ನಾಟಕ’ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.

ಸಮಿತಿ ಸಂಚಾಲಕ ಗೋಪಾಲಕೃಷ್ಣ ಹರಳೂರು, ‘ಕುಣಿಗಲ್ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿಯ ಮಹಿಳೆ ಮಾಯಮ್ಮ, ಸೌಭಾಗ್ಯಮ್ಮ ಉಳುಮೆ ಮಾಡುತ್ತಿರುವ ಭೂಮಿಯಲ್ಲಿ ಬೆಳೆದಿದ್ದ ಫಸಲನ್ನು ಅಕ್ರಮವಾಗಿ ಮೇಲ್ವರ್ಗದವರು ಕಡಿದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ಠಾಣೆಗೆ ಹೋದರೆ ಅವರ ಮೇಲೆಯೇ ದೌರ್ಜನ್ಯ ನಡೆಸುತ್ತಾರೆ’ ಎಂದು ಆರೋಪಿಸಿದರು.

ಯಡಿಯೂರು ಹೋಬಳಿ ಬ್ಯಾಲದಕೆರೆ ಸೌಭಾಗ್ಯಮ್ಮ, ಅಮೃತೂರು ಹೋಬಳಿ ಕುರುಬರ ಶೆಟ್ಟಿಹಳ್ಳಿ ಮಾಯಮ್ಮ ಕಳೆದ 20 ವರ್ಷಗಳಿಂದಲೂ ಸರ್ಕಾರಿ ಭೂಮಿಯನ್ನು ಉಳುಮೆ ಮಾಡುತ್ತಿದ್ದಾರೆ. ಸೌಭಾಗ್ಯಮ್ಮ 15 ಗುಂಟೆ ಜಾಗದಲ್ಲಿ ಬೆಳೆದಿದ್ದ ಹೆಬ್ಬೇವಿನ ಮರಗಳನ್ನು ತಿಮ್ಮಪ್ಪ ಎಂಬುವರು ಅಕ್ರಮವಾಗಿ ತೆರವುಗೊಳಿಸಿದ್ದಾರೆ ಎಂದು ದೂರಿದರು.

ಬುದ್ಧಿಮಾಂದ್ಯ ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ಮಾಯಾಮ್ಮ ಹಾಗೂ ಅವರ ಮಕ್ಕಳ ಮೇಲೆ ಹಲ್ಲೆ ನಡೆಸಿ, ಜಮೀನಿನಿಂದ ಹೊರ ಹಾಕಲಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರವಾಡ್ ಅವರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಎಸ್ಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆಗ್ರಹ: ಜಿಲ್ಲೆಯಲ್ಲಿ ಬಗರ್ ಹುಕುಂ ಸಮಿತಿ ರಚನೆ ಮಾಡಿ, ಭೂಮಿ ವಿತರಣೆ ಮಾಡಬೇಕು. ಪರಿಶಿಷ್ಟ ಜಾತಿಯವರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟಬೇಕು. ರಕ್ಷಣೆ ನೀಡದ ಎಸ್ಪಿಯನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಸಮಿತಿ ಮುಖಂಡರಾದ ರಾಜು ವೆಂಕಟಪ್ಪ, ಎಚ್.ಜಿ. ನಾಗಣ್ಣ, ಪ್ರಕಾಶ್‍ಕುಮಾರ್, ಶಂಕರ್, ಪ್ರಶಾಂತ್, ಸತೀಶ್, ಕೃಷ್ಣಮೂರ್ತಿ, ಸದಾಶಿವಯ್ಯ, ಶಿವರಾಜು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.