ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆ ಕೇಳದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ

ಕೆ.ಎನ್.ರಾಜಣ್ಣ, ರಾಜೇಂದ್ರ ಹೇಳಿಕೆಗೆ ಜೆಡಿಎಸ್ ಮುಖಂಡರ ಆಕ್ರೋಶ
Last Updated 27 ಮೇ 2019, 14:47 IST
ಅಕ್ಷರ ಗಾತ್ರ

ತುಮಕೂರು: ‘ಮಾಜಿ ಶಾಸಕ ಕೆ.ಎನ್.ರಾಜಣ್ಣ ಒಕ್ಕಲಿಗ ಸಮುದಾಯವನ್ನು ದಕ್ಕಲಿಗ ಎಂದು ಹೇಳಿ ಕೀಳಾಗಿ ಮಾತನಾಡಿದ್ದಾರೆ. ಅವರ ಮಗ ಆರ್. ರಾಜೇಂದ್ರ ಶಾಸಕ ಡಿ.ಸಿ.ಗೌರಿಶಂಕರ್ ಹಣ ಪಡೆದು ಪಕ್ಷಾಂತರ ಮಾಡಿದ್ದರು ಎಂದು ಆಧಾರ ರಹಿತ ಆರೋಪ ಮಾಡಿದ್ದಾರೆ. ಈ ಬಗ್ಗೆ ತಂದೆ ಮಕ್ಕಳಿಬ್ಬರೂ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಜೆಡಿಎಸ್ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಿದೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಕೆಂಪರಾಜು ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೈತ್ರಿ ಅಭ್ಯರ್ಥಿ ದೇವೇಗೌಡರಿಗೆ ಜಿಲ್ಲೆಯ ಹಲವು ಕಡೆ ಕಾಂಗ್ರೆಸ್‌ ಪಕ್ಷದ ಮುಖಂಡರು ಬೆಂಬಲ ಕೊಡಲಿಲ್ಲ. ಮಧುಗಿರಿಯಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲ. ಅಂತಹ ಕಡೆ ಬಿಜೆಪಿಗೆ ಹೆಚ್ಚು ಮತಗಳು ಬರುತ್ತವೆ ಎಂದರೆ ಅಲ್ಲಿ ಏನೋ ಷಡ್ಯಂತ್ರ ನಡೆದಿದೆ ಎಂದೇ ಅರ್ಥ. ಕಾಂಗ್ರೆಸ್ ಮುಖಂಡರ ಕುತಂತ್ರ ರಾಜಕಾರಣದಿಂದ ದೇವೇಗೌಡರು ಸೋಲು ಅನುಭವಿಸಿದರು’ ಎಂದು ಆರೋಪಿಸಿದರು.

ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಹಾಲನೂರು ಅನಂತ್‌ಕುಮಾರ್ ಮಾತನಾಡಿ, ‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಆಗದವರು ನಮ್ಮ ನಾಯಕರ ಬಗ್ಗೆ ಮಾತನಾಡುತ್ತಿದ್ದಾರೆ. ರಾಜೇಂದ್ರ ಅವರು ಇನ್ನು ಚಿಕ್ಕ ಹುಡುಗ. ಅವರಿಗೇನೂ ಗೊತ್ತಿಲ್ಲ. ರಾಜಣ್ಣ ಅವರು ಚನ್ನಿಗಪ್ಪ ಅವರಿಂದ ₹ 1 ಕೋಟಿ ಪಡೆದಿದ್ದರು. ಅದರಲ್ಲಿ ಇನ್ನೂ ₹ 15 ಲಕ್ಷ ಚನ್ನಿಗಪ್ಪ ಅವರಿಗೆ ಕೊಟ್ಟಿಲ್ಲ’ ಎಂದು ಹೇಳಿದರು.

‘ಚನ್ನಿಗಪ್ಪ ಅವರ ಕುಟುಂಬ ಬಡವರಿಗೆ ಉಚಿತ ಶಿಕ್ಷಣ ನೀಡುತ್ತಿದೆ. ದೇವೇಗೌಡರ ಸೂಚನೆಯಂತೆ ಎಂಜಿನಿಯರಿಂಗ್ ಕಾಲೇಜಿನ ಹೆಸರನ್ನು ಬದಲಾವಣೆ ಮಾಡಲಾಗಿದೆ. ಇದರ ಬಗ್ಗೆ ಏನೂ ಗೊತ್ತಿಲ್ಲದೆ ಮನ ಬಂದಂತೆ ಹೇಳಿಕೆ ನೀಡಿರುವುದು ಸರಿಯಲ್ಲ’ ಎಂದು ತಿಳಿಸಿದರು.

ಬೆಳಗುಂಬ ವೆಂಕಟೇಶ್, ಹಿರೇಹಳ್ಳಿ ಮಹೇಶ್, ವೈ.ಟಿ.ನಾಗರಾಜು, ಸತೀಶ್ ಚಂದ್ರ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT