ಗುರುವಾರ , ಅಕ್ಟೋಬರ್ 21, 2021
29 °C

ಕೊಳೆಗೇರಿ ನಿವಾಸಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದ ಘೋಷಿತ ಕೊಳಚೆ ಪ್ರದೇಶಗಳಿಗೆ ಹಕ್ಕುಪತ್ರ ವಿತರಣೆ, ಹೊಸದಾಗಿ ಕೊಳಚೆ ಪ್ರದೇಶಗಳ ಘೋಷಣೆ, ನಿವೇಶನ ರಹಿತ 398 ಕುಟುಂಬಗಳಿಗೆ ಭೂಮಿ ಮಂಜೂರಾತಿಗೆ ಆಗ್ರಹಿಸಿ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಎದುರು ಗುರುವಾರ ಪ್ರತಿಭಟನೆ ಮಾಡಲಾಯಿತು.

ಸ್ಲಂ ಜನಾಂದೋಲನ– ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ‘ಕೊಳೆಗೇರಿಗಳ 398 ನಿವೇಶನ ರಹಿತರಿಗೆ ನಿವೇಶನ ನೀಡಲು ಭೂಮಿ ಗುರುತಿಸುವಂತೆ ಕೊಳೆಗೇರಿ ಅಭಿವೃದ್ಧಿ ಮಂಡಳಿ ಎಂಜಿನಿಯರ್‌ಗೆ ಜಿಲ್ಲಾಧಿಕಾರಿ ಸೂಚಿಸಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ. ಮಂಡಳಿ ಅಧಿಕಾರಿಗಳು ಸ್ಲಂ ಜನರ ಹಿತಕಾಯುವ ಬದಲು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಆರೋಪಿಸಿದರು.

ಸಂಪಾದನೆ ಮಠ, ಇಸ್ಮಾಯಿಲ್‍ ನಗರ, ಭಾರತಿನಗರ, ಸತ್ಯಮಂಗಲ ಜನತಾ ಕಾಲೊನಿ, ಎ.ಕೆ.ಕಾಲೊನಿ, ಎಳ್ಳರಬಂಡೆ ಪ್ರದೇಶಗಳನ್ನು ಕೊಳಚೆ ಪ್ರದೇಶಗಳೆಂದು ಘೋಷಿಸಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 17 ಕೊಳಚೆ ಪ್ರದೇಶಗಳಿಗೆ 90 ದಿನಗಳ ಒಳಗಾಗಿ ಹಕ್ಕುಪತ್ರ ನೀಡಬೇಕು. ತಪ್ಪಿದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಕೊಳೆಗೇರಿ ಸಮಿತಿಯ ಗೌರವಾಧ್ಯಕ್ಷರಾದ ದೀಪಿಕಾ, ‘ದಿಬ್ಬೂರು ದೇವರಾಜ ಅರಸು ಬಡಾವಣೆಯ ಸ್ಲಂ ನಿವಾಸಿಗಳಿಗೆ ಕೂಡಲೇ ಹಂಚಿಕೆ ಪತ್ರ ನೀಡಬೇಕು’ ಎಂದು ಒತ್ತಾಯಿಸಿದರು.

ದೇವರಾಜ ಅರಸು ಬಡಾವಣೆಯ 1,200 ವಸತಿ ಸಮುಚ್ಚಯಗಳ ಪಲಾನುಭವಿಗಳಿಗೆ ಮನೆ ಹಂಚಿಕೆ ಪತ್ರ ನೀಡಿ, ಮೂಲಭೂತ ಸೌಕರ್ಯ ಕಲ್ಪಿಸಬೇಕು. ಕೇಂದ್ರ, ರಾಜ್ಯ ಸರ್ಕಾರಗಳ ಆಶಯದಂತೆ ಗುಡಿಸಲು ಮುಕ್ತ ನಗರವನ್ನಾಗಿಸುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಆಗ್ರಹಿಸಿದರು.

ಕಾರ್ಯದರ್ಶಿ ಅರುಣ್, ‘ಪ್ರಾಥಮಿಕ ಅಧಿಸೂಚನೆಯಾಗಿರುವ ಸ್ಲಂಗಳನ್ನು ಅಂತಿಮ ಹಂತದ ಅಧಿಸೂಚನೆ ಹೊರಡಿಸಲು ಪ್ರಸ್ತಾವ ಸಲ್ಲಿಸಬೇಕು ಮನವಿ ಮಾಡಿದರು.

ಸಹಕಾರ್ಯದರ್ಶಿ ತಿರುಮಲಯ್ಯ, ಬೀದಿ ಬದಿ ವ್ಯಾಪಾರಿಗಳ ಸಂಘದ ಬಾಬಾ, ಪದಾಧಿಕಾರಿಗಳಾದ ಶಂಕರಯ್ಯ, ಹಯಾತ್, ರಂಗನಾಥ್, ಮೋಹನ್, ಗುಲ್ನಾಜ್, ಚಕ್ರಪಾಣಿ, ಕಣ್ಣನ್, ಮಾರಿಮುತ್ತು, ಸುಬ್ಬ, ಮಂಗಳಮ್ಮ, ಹನುಮಕ್ಕ, ಸುಧಾ, ತಿಮ್ಮಕ್ಕ ಇದ್ದರು.

ಮನವಿ ಸ್ವೀಕರಿಸಿದ ಕೊಳೆಗೇರಿ ಅಭಿವೃದ್ಧಿ ಮಂಡಳಿ ಎಂಜಿನಿಯರ್ ಚೇತನ್, ‘ನಗರದ 17 ಕೊಳಚೆ ಪ್ರದೇಶಗಳ ಪೈಕಿ 6ಕ್ಕೆ ಹದ್ದುಬಸ್ತು ಪ್ರಕ್ರಿಯೆ ಪೂರ್ಣಗೊಂಡಿದ್ದು, ಪಲಾನುಭವಿಗಳ ಸಮೀಕ್ಷೆ ನಡೆಯುತ್ತಿದೆ. 398 ಮಂದಿಗೆ ನಿವೇಶನ ನೀಡಲು ಸರ್ಕಾರಿ ಭೂಮಿ ಮಂಜೂರಾತಿಗೆ ವಾರದಲ್ಲಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗುವುದು. ಅರಸು ಬಡಾವಣೆಯ ಮೂಲಭೂತ ಸೌಕರ್ಯಕ್ಕೆ ₹50 ಲಕ್ಷ ಮೊತ್ತದ ಕಾಮಗಾರಿಗೆ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು