ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್‌ ಶಾಗೆ ದಲಿತರ ಧಿಕ್ಕಾರ

ಮೈಸೂರು: ದಲಿತ ಸಮುದಾಯದ ಮುಖಂಡರೊಂದಿಗೆ ನಡೆದ ಸಂವಾದ
Last Updated 30 ಮಾರ್ಚ್ 2018, 20:47 IST
ಅಕ್ಷರ ಗಾತ್ರ

ಮೈಸೂರು: ದಲಿತ ಸಮುದಾಯದ ಮುಖಂಡರೊಂದಿಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶುಕ್ರವಾರ ಸಂವಾದ ನಡೆಸಿದ ಸಮಯದಲ್ಲಿ ಗದ್ದಲ ಉಂಟಾಯಿತು. ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೆಲವರು ಧಿಕ್ಕಾರ ಕೂಗಿದರು.

‘ಸಂವಿಧಾನ ಬದಲಿಸಲು ಬಂದವರು ನಾವು’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಹೇಳಿಕೆ ನೀಡಿರುವುದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಶಾ ಹೇಳುತ್ತಿದ್ದಂತೆ, ದಲಿತ ಮುಖಂಡರು ಎದ್ದುನಿಂತು ಪ್ರತಿಭಟನೆ ವ್ಯಕ್ತಪಡಿಸಿದರು. ಇದರಿಂದ ವಿಚಲಿತರಾದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದವರನ್ನು ಸಭಾಂಗಣದಿಂದ ಹೊರಗೆ ಕಳುಹಿಸುವ ಪ್ರಯತ್ನ ನಡೆಸಿದರು. ಆಕ್ರೋಶದಿಂದ ಧಿಕ್ಕಾರ ಕೂಗುತ್ತಲೇ ಸಭಾಂಗಣದಿಂದ ಹೊರನಡೆದರು.

ಆರಂಭದಲ್ಲಿ ಮಾತನಾಡಿದ ಮುಖಂಡ ವಿ.ಶ್ರೀನಿವಾಸ ಪ್ರಸಾದ್, ‘ಹೆಗಡೆ ಅವರು ಸಂವಿಧಾನ ಬದಲಿಸಲು ಬಂದವರು ನಾವು’ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ದಲಿತ ವಿರೋಧಿ ಧೋರಣೆಯನ್ನು ಬಿಜೆಪಿ ಹೊಂದಿದೆ ಎಂಬ ಭಾವನೆ ಮೂಡಿದೆ. ಇದಕ್ಕೆ ತಾವು ಸ್ಪಷ್ಟೀಕರಣ ನೀಡಬೇಕು. ಬಿಜೆಪಿಯು ದಲಿತಪರ ಎಂದು ಹೇಳಬೇಕು’ ಎಂದು ಶಾ ಅವರಿಗೆ ಮನವಿ ಮಾಡಿದರು.

ಇದಕ್ಕೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಶಾ, ‘ಹೆಗಡೆ ಅವರ ಮಾತಿಗೂ ಬಿಜೆಪಿಗೂ ಸಂಬಂಧವಿಲ್ಲ’ ಎಂದರು. ಆಗ ಎದ್ದುನಿಂತ ದಲಿತ ಮುಖಂಡರು, ‘ಅವರನ್ನು ಇನ್ನೂ ಏಕೆ ಪಕ್ಷದಲ್ಲಿ ಇಟ್ಟುಕೊಂಡಿದ್ದೀರಿ ತಕ್ಷಣ ಉಚ್ಚಾಟಿಸಿ’ ಎಂದು ಕೂಗಿದರು. ಇದರಿಂದ ಸಭೆ ಗೊಂದಲದ ಗೂಡಾಗಿ ಪರಿಣಮಿಸಿತು. ಅಮಿತ್ ಶಾ ಅವರೇ ಕೋರಿಕೊಂಡರೂ ಯಾರೊಬ್ಬರೂ ಸ್ಪಂದಿಸಲಿಲ್ಲ. ಆಗ ಬಿಜೆಪಿ ಕಾರ್ಯಕರ್ತರು ಹಾಗೂ ದಲಿತ ಮುಖಂಡರ ನಡುವೆ ವಾಗ್ವಾದ ನಡೆಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.

‘ಅಂಬೇಡ್ಕರ್‌ ರಚಿಸಿದ ಸಂವಿಧಾನದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಸಚಿವರನ್ನು ಇನ್ನೂ ಮಂತ್ರಿಮಂಡಲದಲ್ಲಿ ಇಟ್ಟುಕೊಂಡಿದ್ದೀರಿ. ವೇದಿಕೆಯಲ್ಲಿ ತಮಗೂ ಅವರ ಹೇಳಿಕೆಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದೀರಿ. ನಿಮ್ಮ ಮಾತಿನ ಮೇಲೆ ನಮಗೆ ನಂಬಿಕೆಯಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

ಬಡ್ತಿ ವಿಚಾರದಲ್ಲೂ ಕೂಗು: ಶಾ ಮತ್ತೆ ಮಾತನಾಡಲು ಆರಂಭಿಸಿದಾಗ ‘ರೈಲ್ವೆ ಅಪ್ರೆಂಟಿಸ್‌ ಬಡ್ತಿ ವಿಚಾರದಲ್ಲಿ ಕರ್ನಾಟಕದ ದಲಿತರಿಗೆ ಅನ್ಯಾಯವಾಗಿದೆ. ರೈಲ್ವೆ ಇಲಾಖೆ ತಾರತಮ್ಯ ನೀತಿ ಅನುಸರಿಸುತ್ತಿದೆ’ ಎಂದು ಕೆಲವು ಯುವಕರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ಶಾ, ‘ಬಡ್ತಿ ವಿಚಾರದಲ್ಲಿ ನಾವು ಅನ್ಯಾಯ ಮಾಡುವುದಿಲ್ಲ. ಈ ಕುರಿತು ಈಗಾಗಲೇ ರೈಲ್ವೆ ಸಚಿವ ಪಿಯೂಷ್ ಗೋಯೆಲ್‌ ಜತೆಗೆ ಪ್ರಧಾನಿ ಮೋದಿ ಚರ್ಚಿಸಿ ಸಮಿತಿಯೊಂದನ್ನು ರಚಿಸಿದ್ದಾರೆ. 45 ದಿನಗಳಲ್ಲಿ ಸಮಿತಿ ವರದಿ ನೀಡಲಿದ್ದು, ಸಮಸ್ಯೆ ಇತ್ಯರ್ಥವಾಗಲಿದೆ’ ಎಂದು ಸಮಾಧಾನಪಡಿಸಿದರು.

‘ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲಿ ಕರ್ನಾಟಕದಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. 9,358 ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 809 ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದ್ದು, 358 ದಲಿತರನ್ನು ಕೊಲೆ ಮಾಡಲಾಗಿದೆ’ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಹೆಗಡೆಗೆ ಬುದ್ಧಿ ಇಲ್ವಾ?
‘ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿಕೆ ನೀಡಿದ ಅನಂತಕುಮಾರ ಹೆಗಡೆಗೆ ಬುದ್ಧಿ ಇಲ್ಲವೇ?’ ಎಂದು ಬಿಜೆಪಿ ಮುಖಂಡ ವಿ.ಶ್ರೀನಿವಾಸ ಪ್ರಸಾದ್ ಪ್ರಶ್ನಿಸಿದರು.

‘ಈ ವಿಚಾರ ಕುರಿತು ಅಮಿತ್‌ ಶಾ ಅವರೊಂದಿಗೆ ಚರ್ಚಿಸಲಾಗಿದೆ. ದಲಿತ ಸಮುದಾಯಕ್ಕೆ ಈ ಬಗ್ಗೆ ಆತಂಕವಿದೆ. ನಾನು ಇಂತಹ ವಿಚಾರಗಳನ್ನು ಪ್ರಶ್ನಿಸದೇ ಬಿಡುವುದಿಲ್ಲ’ ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೂ ಈ ಕುರಿತು ಟೀಕಿಸಿದರು. ‘ಅಪ್ರಸ್ತುತ ವಿಚಾರಗಳನ್ನು ಮಾತನಾಡಬೇಡಿ ಎಂದರೂ ಹೆಗಡೆ ಮಾತನಾಡುತ್ತಾರೆ. ನಾನೇನು ಮಾಡಲಿ’ ಎಂದರು.

ಶಾ ವಿರುದ್ಧ ಕಾಂಗ್ರೆಸ್‌ ದೂರು
ಬೆಂಗಳೂರು: ಮೈಸೂರಿನಲ್ಲಿ ಹತ್ಯೆಯಾಗಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತ ರಾಜು ಕುಟುಂಬಕ್ಕೆ ₹ 5 ಲಕ್ಷ ಪರಿಹಾರದ ಚೆಕ್‌ ನೀಡುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು ನೀಡಿದೆ.

ಅಮಿತ್‌ ಶಾ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್‌, ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಕಾಂಗ್ರೆಸ್‌ ಒತ್ತಾಯಿಸಿದೆ.

ಇದಕ್ಕೂ ಮೊದಲು ಶಾ, ಹಲವು ಬಾರಿ ಮೈಸೂರಿಗೆ ಭೇಟಿ ಕೊಟ್ಟಿದ್ದರೂ ರಾಜು ಕುಟುಂಬದ ಸದಸ್ಯರನ್ನು ಭೇಟಿ ಮಾಡಿರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಓಲೈಸುವ ಉದ್ದೇಶದಿಂದಲೇ ಭೇಟಿ ನೀಡಿ ಪರಿಹಾರದ ಚೆಕ್‌ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT