ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣ್ಯ ಸ್ಮರಣೆಗೆ ಕಾರ್ಯಕ್ರಮಕ್ಕೆ ಸಿದ್ಧತೆ:ಮಠದತ್ತ ಹರಿದು ಬರುತ್ತಿದೆ ಪಡಿ ಪದಾರ್ಥ

ಶಿವಕುಮಾರ ಶ್ರೀ ಗದ್ದುಗೆ ದರ್ಶನಕ್ಕೆ ಸಾಲುಗಟ್ಟುತ್ತಿರುವ ಭಕ್ತರು
Last Updated 29 ಜನವರಿ 2019, 14:12 IST
ಅಕ್ಷರ ಗಾತ್ರ

ತುಮಕೂರು: ಸಿದ್ಧಗಂಗಾ ಮಠದಲ್ಲಿ ಗುರುವಾರ (ಜ.31) ನಡೆಯಲಿರುವ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆದಿವೆ. ಚಳ್ಳಕೆರೆ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮಾಗಡಿ ಹೀಗೆ ನಾನಾ ಕಡೆಗಳಿಂದ ಭಕ್ತರು, ವರ್ತಕರು ಹಾಗೂ ರಾಜಕಾರಣಿಗಳು ಕಾರ್ಯಕ್ರಮಕ್ಕೆ ಆಹಾರ ಪದಾರ್ಥಗಳನ್ನು ಕಳುಹಿಸಿಕೊಡುತ್ತಿದ್ದಾರೆ.

ಸೋಮವಾರ ಮಾಜಿ ಶಾಸಕ ಬಿ.ಸುರೇಶ್ ಗೌಡ 100 ಕ್ವಿಂಟಲ್ ಅಕ್ಕಿ ನೀಡಿದರು. ಮಂಗಳವಾರ ಶಾಸಕ ಡಿ.ಸಿ.ಗೌರಿಶಂಕರ್ ಒಂದು ಲಾರಿ ಲೋಡ್ ಅಕ್ಕಿ ತಂದರು. ಚಿತ್ರದುರ್ಗ ಎಪಿಎಂಸಿ ವರ್ತಕರು ಹಾಗೂ ಭಕ್ತರು ಎರಡು ಲಾರಿಗಳಲ್ಲಿ 200 ಕ್ವಿಂಟಲ್ ಅಕ್ಕಿ, ತಲಾ 20 ಕ್ವಿಂಟಲ್ ಸಕ್ಕರೆ, ಬೇಳೆ, ರವೆಯನ್ನು ತಂದಿದ್ದರು. ತರಕಾರಿಗಳನ್ನೂ ತರುತ್ತಲೇ ಇದ್ದರು. ಹೀಗೆ ಬೆಳಿಗ್ಗೆಯಿಂದಲೇ ಮಠಕ್ಕೆ ಭಕ್ತರು ದವಸ, ಧಾನ್ಯಗಳನ್ನು ಹೊತ್ತು ತರುತ್ತಿದ್ದರು.

ಹೀಗೆ ದಾಸೋಹದ ಮೂಲಕವೇ ನಾಡಿಗೆ ಪ್ರಸಿದ್ಧವಾಗಿರುವ ಮಠಕ್ಕೆ ಭಕ್ತರು ತಮ್ಮ ಕೈಲಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಚಿತ್ರದುರ್ಗದಿಂದ ಬಂದ ವರ್ತಕರು ಮತ್ತು ಭಕ್ತರು ಶಿವಕುಮಾರ ಸ್ವಾಮೀಜಿ ಅವರಿಗೆ ಜಯವಾಗಲಿ, ದಾಸೋಹ, ದಾಸೋಹ ಎಂದು ಘೋಷಣೆಗಳನ್ನು ಕೂಗಿದರು. ಸಿದ್ಧಲಿಂಗ ಸ್ವಾಮೀಜಿ ಅವರು ಈ ಕಾಣಿಕೆಯನ್ನು ಸ್ವೀಕರಿಸಿದರು.

ಮಕ್ಕಳಿಂದ ಸ್ವಚ್ಛತೆ: ಮಠದ ವಿದ್ಯಾರ್ಥಿಗಳ ಆವರಣವನ್ನು ಸ್ವಚ್ಛಗೊಳಿಸಿದರು. ಎಲ್ಲೆಡೆಯೂ ಮಕ್ಕಳ ಕಲರವ ಇತ್ತು. ಲಘು ಬಗೆಯಲ್ಲಿ ಓಡಾಡುತ್ತ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಕಾರ್ಯಪ್ರವೃತ್ತರಾಗಿದ್ದರು. ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನಕ್ಕೆ ಬೇರೆ ಬೇರೆ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಭಕ್ತರು ಬರುತ್ತಿದ್ದಾರೆ. ಮಂಗಳವಾರವೂ ಭಕ್ತರು ಸಾಲುಗಟ್ಟಿ ದರ್ಶನ ಪಡೆದರು.

ನಗರದ ವರಿನ್ ಅಂತರರಾಷ್ಟ್ರೀಯ ಶಾಲೆಯ ಮಕ್ಕಳು ಗುಲಾಬಿ ಹಿಡಿದು ಬಂದರು. ಗದ್ದುಗೆಗೆ ಅರ್ಪಿಸಿ ಮೆಟ್ಟಿಲುಗಳ ಮೇಲೆ ಕುಳಿತು ಪ್ರಾರ್ಥನೆ ಸಲ್ಲಿಸಿದರು. ಇದು ಭಕ್ತರ ಗಮನ ಸೆಳೆಯಿತು. ಈಗಾಗಲೇ ಮಠದ ಸುತ್ತ ಪೊಲೀಸರು ಬಂದೋಬಸ್ತ್‌ ಕೈಗೊಂಡಿದ್ದಾರೆ. ಬ್ಯಾರಿಕೇಡ್‌ಗಳನ್ನು ಅಳವಡಿಸುತ್ತಿದ್ದಾರೆ.

ಮಂಗಳವಾರ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಗೌರಿಶಂಕರ್ ಸೇರಿದಂತೆ ವಿವಿಧ ಸ್ಥಳೀಯ ರಾಜಕಾರಣಿಗಳು ಮಠಕ್ಕೆ ಭೇಟಿ ನೀಡಿದ್ದರು. ಸಿದ್ಧಲಿಂಗ ಸ್ವಾಮೀಜಿ ಅವರ ಬಳಿ ಚರ್ಚಿಸುತ್ತಿದ್ದರು. ಶಿವಕುಮಾರ ಸ್ವಾಮೀಜಿ ಅವರು ಸಾರ್ವಜನಿಕರಿಗೆ ದರ್ಶನ ನೀಡಲು ಕುಳಿತುಕೊಳ್ಳುತ್ತಿದ್ದ ಮಂಚದ ಮೇಲಿರುವ ಅವರ ಭಾವಚಿತ್ರಕ್ಕೆ ಭಕ್ತರು ನಮಿಸುತ್ತಿದ್ದರು.

ಒಂದೂವರೆಯಿಂದ ಎರಡು ಲಕ್ಷ ಜಹಂಗೀರ್ ಅನ್ನು 120 ಮಂದಿ ಬಾಣಸಿಗರು ತಯಾರಿಸಿದ್ದಾರೆ. ಇವರೆಲ್ಲ ತಮಿಳುನಾಡಿನವರು. ಈ ಜಹಂಗೀರ್‌ ಬುಧವಾರ ರಾತ್ರಿಯ ಊಟದ ಮೆನುವಿನಲ್ಲಿ ಇದೆ. ಗುರುವಾರ ಬೆಳಿಗ್ಗೆ ಬೂಂದಿ, ಮಾಲ್ದಿ (ಗೋಧಿ, ಬೆಲ್ಲ ಹಾಕಿ ತಯಾರಿಸಿರುವ ಸಿಹಿ) ಬಡಿಸಲಾಗುತ್ತದೆ.

ಗೋಸಲ ಸಿದ್ಧೇಶ್ವರ ವೇದಿಕೆಯ ಮುಂದಿನ ಸಭಾಂಗಣವನ್ನು ಕಾರ್ಯಕ್ರಮಕ್ಕೆ ಸಜ್ಜುಗೊಳಿಸಲಾಗುತ್ತಿದೆ. ಬುಧವಾರ ಬಹುತೇಕ ಸಿದ್ಧತೆಗಳೂ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಗಣ್ಯರಿಂದ ಗದ್ದುಗೆ ದರ್ಶನ

‘ಇದು ಭಕ್ತಿ ಮತ್ತು ಪ್ರೀತಿಯ ಕಾರ್ಯಕ್ರಮ. ಎಲ್ಲರೂ ಸೇವೆಯಿಂದ ಕೆಲಸ ಮಾಡುತ್ತಿದ್ದಾರೆ. ಮಠದ ಭಕ್ತರು, ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ’ ಎಂದು ಸಿದ್ಧಲಿಂಗ ಸ್ವಾಮೀಜಿ ಮಾಧ್ಯಮದವರಿಗೆ ತಿಳಿಸಿದರು.

‘ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ನಾನು ಭಕ್ತರಿಗೆ, ಪೂಜ್ಯರಿಗೆ, ಗಣ್ಯರಿಗೆ ವೈಯಕ್ತಿಕವಾಗಿ ಆಹ್ವಾನ ನೀಡಲು ಸಾಧ್ಯವಾಗಿಲ್ಲ. ನನ್ನ ಈ ಮಾತುಗಳನ್ನೇ ಆಹ್ವಾನ ಎಂದು ಪರಿಗಣಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

‘ಈಗಾಗಲೇ ದಿನ ಬೆಳಿಗ್ಗೆ ಗದ್ದುಗೆಗೆ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಪುಣ್ಯಸ್ಮರಣೆಯ ದಿನ ಬೆಳಿಗ್ಗೆ 8.30ಕ್ಕೆ ಸ್ವಾಮೀಜಿ ಅವರ ಭಾವಚಿತ್ರವನ್ನು ಗದ್ದುಗೆಯಿಂದ ಗೋಸಲ ಸಿದ್ದೇಶ್ವರ ವೇದಿಕೆಯ ವರೆಗೆ ಮೆರವಣಿಗೆ ಮಾಡಲಾಗುವುದು. ನಂತರ ಗಣ್ಯರು ಹಾಗೂ ನಾಡಿನ ವಿವಿಧ ಮಠಾಧೀಶರು ಗದ್ದುಗೆಯ ದರ್ಶನ ಪಡೆದು ಒಗ್ಗೂಡಿ ಕಾರ್ಯಕ್ರಮದ ಸ್ಥಳಕ್ಕೆ ಬರುವರು’ ಎಂದು ಹೇಳಿದರು.

ಭಕ್ತರ ಸಂಖ್ಯೆ ನೋಡಿ ಮಾರ್ಗ ಬದಲು

‘ಸಾರ್ವಜನಿಕರು ಗದ್ದುಗೆಯ ದರ್ಶನ ಮಾಡಲು, ಊಟದ ಸ್ಥಳಗಳ ಬಳಿ ಮತ್ತಿತರ ಕಡೆಗಳಲ್ಲಿ ಬಂದೋಬಸ್ತ್ ಕೈಗೊಳ್ಳಲಾಗುವುದು. ಭಕ್ತರ ಸಂಖ್ಯೆ ಆಧರಿಸಿ ಮಾರ್ಗಗಳನ್ನು ಬದಲಾವಣೆ ಮಾಡುವ ಬಗ್ಗೆ ನಿರ್ಧರಿಸಲಾಗುವುದು’ ಎಂದು ಕೇಂದ್ರ ವಲಯ ಐಜಿಪಿ ದಯಾನಂದ್ ಮಠದ ಆವರಣದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

‘ರಾಷ್ಟ್ರೀಯ ಹೆದ್ದಾರಿ 206ರಲ್ಲಿ ದೊಡ್ಡ ಸರಕು ಸಾಗಾಣಿಕೆಯ ವಾಹನಗಳಿಗೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ. ಇದನ್ನೂ ಜನರ ಸಂಖ್ಯೆ ಆಧರಿಸಿ ತೀರ್ಮಾನಿಸಲಾಗುವುದು. ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಆಗದ ರೀತಿಯಲ್ಲಿ ಕ್ರಮವಹಿಸಲಾಗುವುದು’ ಎಂದು ಹೇಳಿದರು.

ಜಹಂಗೀರ್, ಬೂಂದಿ ಸಿದ್ಧ

ಬಂಡೆ ಮಠದ ಬಸವಲಿಂಗ ಸ್ವಾಮೀಜಿ ದಾಸೋಹ ನಿರ್ವಹಣೆಯ ಹೊಣೆಯನ್ನು ಹೊತ್ತಿದ್ದಾರೆ. ಜಹಂಗೀರ್ ಮತ್ತು ಬೂಂದಿ ಸಿದ್ಧಪಡಿಸುತ್ತಿರುವ ಸ್ಥಳದಲ್ಲಿ ಅವರೇ ಖುದ್ದು ಹಾಜರಿದ್ದು ಮಾರ್ಗದರ್ಶನಗಳನ್ನು ನೀಡುತ್ತಿದ್ದಾರೆ.

‘ಅಂದಾಜು ಮೂರರಿಂದ ನಾಲ್ಕು ಲಕ್ಷ ಜನರು ಬರುವ ಸಾಧ್ಯತೆ ಇದೆ. 10 ಕಡೆ ಊಟದ ವ್ಯವಸ್ಥೆ ಮಾಡಲಾಗಿದೆ. ಒಂದೊಂದು ಕಡೆಯೂ ಒಂದರಿಂದ ಎರಡು ಸಾವಿರ ಜನರು ಊಟ ಮಾಡುವ ಅವಕಾಶ ಇದೆ. ಪ್ರತಿ ಕಡೆ ಮಠದ 70 ಸಿಬ್ಬಂದಿ ಹಾಗೂ ಮಕ್ಕಳು ಊಟದ ವ್ಯವಸ್ಥೆಯನ್ನು ನಿರ್ವಹಿಸುವರು’ ಎಂದು ಬಸವಲಿಂಗ ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ಊಟದ ಕಡೆ ಒಬ್ಬ ಸ್ವಾಮೀಜಿ ಅವರೂ ಸಹ ಹಾಜರಿರುತ್ತಾರೆ. ಎಲ್ಲ ವ್ಯವಸ್ಥೆಗಳು ಅಚ್ಚಕಟ್ಟಾಗಿ ನಡೆಯುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT