ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿ ಗೆದ್ದ ‘ಕುಡ್ಲ’ದ ಗುರು

Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಗೋಲ್ಡ್ ಕೋಸ್ಟ್‌, ಆಸ್ಟ್ರೇಲಿಯಾ: ‘ಮೊದಲ ಎರಡು ಪ್ರಯತ್ನಗಳಲ್ಲಿ ವೈಫಲ್ಯ ಕಂಡಾಗ ಕೋಚ್‌ ಎಚ್ಚರಿಸಿದರು. ಇದು ನಿನ್ನ ಜೀವನ ಪ್ರಮುಖ ಘಟ್ಟ. ಕೊನೆಯ ಪ್ರಯತ್ನದಲ್ಲಿ ಗೆದ್ದು ಬಾ ಎಂದರು. ದೇಶ ಮತ್ತು ತಾಯಿ–ತಂದೆಯನ್ನು ಮನದಲ್ಲಿ ನೆನೆದು ಪ್ರಯತ್ನಿಸಿದೆ; ಫಲ ಕಂಡೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದ ಮೊದಲ ದಿನವೇ ಭಾರತಕ್ಕೆ ಸಂಭ್ರಮ ತಂದುಕೊಟ್ಟ ರಾಜ್ಯದ ವೇಟ್‌ಲಿಫ್ಟರ್‌ ಗುರುರಾಜ್ ಪೂಜಾರಿ ಬೆಳ್ಳಿ ಪದಕ ಗೆದ್ದ ನಂತರ ಆಡಿದ ಮಾತು ಇದು. ಪುರುಷರ 56 ಕೆ.ಜಿ ವಿಭಾಗದಲ್ಲಿ ಸಾಧನೆ ಮಾಡಿದ ಗುರುರಾಜ್‌ ಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟರು.

ಭಾರತೀಯ ಕಾಲಮಾನ ಬೆಳಿಗ್ಗಿನ ಜಾವ ಐದು ಗಂಟೆಗೆ ಆರಂಭಗೊಂಡ ಪುರುಷರ ವೇಟ್‌ಲಿಫ್ಟಿಂಗ್‌ ಫೈನಲ್‌ನಲ್ಲಿ ಮಲೇಷ್ಯಾದ ಐಜರ್‌ ಅಹಮ್ಮದ್ ಮತ್ತು ಶ್ರೀಲಂಕಾದ ಚದುರಂಗ ಲಕ್ಮಲ್ ಅವರಿಂದ ಗುರುರಾಜ್‌ ಭಾರಿ ಪೈಪೋಟಿ ಅನುಭವಿಸಿದರು. ಆದರೆ ಪಟ್ಟು ಬಿಡದೆ ಮುಂದಡಿಯಿಟ್ಟ ಕುಂದಾಪುರದ ಕುವರ ಬೆಳ್ಳಿ ನಗೆ ಸೂಸಿದರು. ಐಜರ್‌ ಅಹಮ್ಮದ್ ದಾಖಲೆಯೊಂದಿಗೆ ಚಿನ್ನ ಗೆದ್ದರೆ ಲಕ್ಮಲ್‌ ಒಂದು ಕೆ.ಜಿ ಅಂತರದಲ್ಲಿ ಎರಡನೇ ಸ್ಥಾನ ಕಳೆದುಕೊಂಡರು.

ಮೊದಲು ಆತಂಕ; ನಂತರ ಸಂಭ್ರಮ
ಗುರುರಾಜ್‌ ಅವರು ಕ್ಲೀನ್ ಅಂಡ್ ಜರ್ಕ್‌ನ ಮೊದಲ ಎರಡು ಪ್ರಯತ್ನಗಳಲ್ಲಿ ವೈಫಲ್ಯ ಕಂಡರು. ಮೂರನೇ ಪ್ರಯತ್ನದಲ್ಲಿ ಉತ್ತಮ ಸಾಧನೆ ಮಾಡಿ ಪದಕ ಗೆದ್ದರು. ವೈಯಕ್ತಿಕ ಸಾಧನೆಯನ್ನು ಸಮಗಟ್ಟಿದರು.

ರಾಜಗೆ ನಿರಾಸೆ
ಮೊದಲ ದಿನ ವೇಟ್‌ಲಿಫ್ಟಿಂಗ್‌ನಲ್ಲಿ ಕಣಕ್ಕೆ ಇಳಿದ ಮೂರನೇ ಕ್ರೀಡಾಪಟು ಎಂ.ರಾಜ. 62 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ ಅವರು ನಿರಾಸೆ ಅನುಭವಿಸಿದರು. ಸ್ನ್ಯಾಚ್‌ನಲ್ಲಿ 116 ಕೆ.ಜಿ ಒಳಗೊಂಡಂತೆ ಒಟ್ಟು 266 ಕೆ.ಜಿ ಭಾರ ಎತ್ತಿದ ಅವರು ಆರನೇ ಸ್ಥಾನ ಗಳಿಸಿದರು.

ಮಲೇಷ್ಯಾದ ಮಹಮ್ಮದ್ ಅನ್ಸಿಲ್ ಬಿದಿನ್‌ (288 ಕೆ.ಜಿ) ಚಿನ್ನ ಗೆದ್ದರೆ ಪಪುವಾ ನ್ಯೂ ಗಿನಿಯ ಮೊರಿಯಾ ಬರು (286 ಕೆ.ಜಿ) ಬೆಳ್ಳಿ ಮತ್ತು ಪಾಕಿಸ್ತಾನದ ತಲ್ಹಾ ತಾಲಿಬ್‌ (283 ಕೆ.ಜಿ) ಕಂಚು ಗೆದ್ದರು.

**

ಫಿಸಿಯೊ ಅಭಾವ ಪದಕ ಗೆಲ್ಲಲು ಅಡ್ಡಿಯಾಗಲಿಲ್ಲ

ಗೋಲ್ಡ್ ಕೋಸ್ಟ್‌ (ಪಿಟಿಐ): ಭಾರತದ ವೇಟ್‌ಲಿಫ್ಟಿಂಗ್ ತಂಡದ ಜೊತೆ ಫಿಜಿಯೋಗಳು ತೆರಳಲಿಲ್ಲ. ಆದರೂ ಯಾವುದೇ ತೊಂದರೆಗೆ ಒಳಗಾಗದ ವೇಟ್‌ಲಿಫ್ಟರ್‌ಗಳು ಪದಕಗಳ ಬೇಟೆಯಾಡಿದರು. ಚಿನ್ನ ಗೆದ್ದ ಸಾಯಿಕೋಮ್‌ ಮೀರಾಬಾಯಿ ಚಾನು ಮತ್ತು ಬೆಳ್ಳಿ ಗೆದ್ದ ಗುರುರಾಜ್‌ ಪೂಜಾರಿ ಅವರಿಗೆ ಫಿಜಿಯೊಗಳು  ಇಲ್ಲ.

‘ನನ್ನೊಂದಿಗೆ ಫಿಜಿಯೊ ಇಲ್ಲ. ಅವರಿಗೆ ಇಲ್ಲಿಗೆ ಬರಲು ಅನುಮತಿ ನೀಡಲಿಲ್ಲ. ಅಗತ್ಯವಿದ್ದಾಗ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಈ ವಿಷಯವನ್ನು ಸಂಬಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಆದರೆ ಯಾರೂ ಗಮನ ನೀಡಲಿಲ್ಲ’ ಎಂದು ಚಾನು ದೂರಿದರು.

‘ನನಗೆ ವಿವಿಧ ಬಗೆಯ ನೋವುಗಳು ಕಾಣಿಸಿಕೊಂಡಿವೆ. ಆದರೆ ಫಿಜಿಯೊಗೆ ಬರಲು ಅನುವು ಮಾಡಿಕೊಡದ ಕಾರಣ ನಿರಾಸೆಯಾಗಿದೆ’ ಎಂದು ಗುರುರಾಜ್ ಪೂಜಾರಿ ಹೇಳಿದರು.

**

ಗುರುರಾಜ ಸಾಧನೆ ಕರಾವಳಿಗೆ ಮಾತ್ರವಲ್ಲದೆ ದೇಶಕ್ಕೆ ಹೆಮ್ಮೆ ತರುವಂತದ್ದು. ಈ ಸಾಧನೆಗೆ ಕೋಚ್‌ ರಾಜೇಂದ್ರ ಪ್ರಸಾದ್‌ ಕೊಡುಗೆ ದೊಡ್ಡದಿದೆ
– ಪುಷ್ಟರಾಜ ಹೆಗ್ಡೆ,, ವೇಟ್‌ಲಿಫ್ಟರ್‌

**

ಪುರುಷರ 56 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಗೆದ್ದ ಗುರುರಾಜ

ಮಲೇಷ್ಯಾದ ಐಜರ್‌ ಅಹಮ್ಮದ್‌ಗೆ ಚಿನ್ನದ ಪದಕ

ಕಂಚಿನ ಪದಕ ಗೆದ್ದ ಶ್ರೀಲಂಕಾದ ಚದುರಂಗ ಲಕ್ಮಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT