ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳಿಯಾರು ಪಟ್ಟಣದ ಸುತ್ತ ಬಿರುಗಾಳಿ: ಧರೆಗುರುಳಿದ ಮರ

Last Updated 22 ಮೇ 2019, 19:48 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಗು, ಚಾಮರಾಜನಗರ, ಚಿಕ್ಕಮಗಳೂರು, ತುಮಕೂರು ಹಾಗೂ ವಿಜಯಪುರ ಜಿಲ್ಲೆಯ ವಿವಿಧೆಡೆ ಬುಧವಾರ ಉತ್ತಮ ಮಳೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ.

ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ಯರಕ್ಯಾಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಿಡಿಲು ಬಡಿದು ರೈತ ಸೋಮಣ್ಣ ಬಿರಾದಾರ (32) ಮೃತಪಟ್ಟಿದ್ದಾರೆ.

ಕಲಬುರ್ಗಿ ಜಿಲ್ಲೆ ಸೇಡಂ ತಾಲ್ಲೂಕು ಕಾನಗಡ್ಡಾದಲ್ಲಿ ಬಿರುಗಾಳಿ ಸಹಿತ ಮಳೆಗೆ ಮನೆ ಕುಸಿದು, ರಾಜಶ್ರೀ ರವಿಕುಮಾರ (32), ಸಮೃದ್ಧ ಮೋಹನರೆಡ್ಡಿ (11) ಮೃತಪಟ್ಟಿದ್ದಾರೆ. ಸಹನಾ ಮೋಹನರೆಡ್ಡಿಗೆ ಗಾಯಗಳಾಗಿವೆ.

ಕೊಡಗು ಜಿಲ್ಲೆ ತೊರೆನೂರು ಸಮೀಪದ ಚಿಕ್ಕನಾಯಕನ ಹೊಸಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಹತ್ತು ಕುರಿಗಳು ಬಲಿಯಾಗಿವೆ. ಕುರಿಗಾಹಿ ರಂಗಶೆಟ್ಟಿ ಗಾಯಗೊಂಡಿದ್ದಾರೆ.

ಕುಶಾಲನಗರ, ಕೂಡಿಗೆ, 7ನೇ ಹೊಸಕೋಟೆ, ದುಬಾರೆ, ಸುಂಟಿಕೊಪ್ಪ, ವಿರಾಜಪೇಟೆ ಸುತ್ತಮುತ್ತ ಭಾರಿ ಮಳೆ ಸುರಿದಿದೆ. ಕುಶಾಲನಗರದ ಪಾಲಿಟೆಕ್ನಿಕ್‌ ಕಾಲೇಜು ಎದುರು ಮರದ ರೆಂಬೆಯೊಂದು ಹೆದ್ದಾರಿಯಲ್ಲಿ ಬಿದ್ದು, ಮಡಿಕೇರಿ– ಮೈಸೂರು ರಸ್ತೆಯಲ್ಲಿ ಅರ್ಧ ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಚಾಮರಾಜನಗರದಲ್ಲಿ ಅರ್ಧತಾಸು ಬಿರುಸಿನ ಮಳೆಯಾಗಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಪಟ್ಟಣದ ಸುತ್ತಮುತ್ತಲ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಸೋನೆಮಳೆ ಆಗಿದೆ.

ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹಾಗೂ ಮಂಚಲದೊರೆ ಪಂಚಾಯಿತಿ ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿ ಸಾಧಾರಣ ಮಳೆಯಾಗಿದೆ.

ವರ್ಷಧಾರೆ: ವಿಜಯಪುರ ಜಿಲ್ಲೆಯ ವಿವಿಧೆಡೆ ಬುಧವಾರವೂ ವರ್ಷಧಾರೆ ಮುಂದುವರೆದಿದ್ದು, ಮಂಗಳವಾರ ಸಿಡಿಲಿನ ಅಬ್ಬರಕ್ಕೆ ಇಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.

ತಿಕೋಟಾ ತಾಲ್ಲೂಕಿನ ರತ್ನಾಪುರ ಗ್ರಾಮದ ಕುರಿಗಾಹಿ ಕರೆಪ್ಪ ವಿಠ್ಠಲ ಹಿರೇಕುರುಬರ (30), ಮುದ್ದೇಬಿಹಾಳ ತಾಲ್ಲೂಕಿನ ಡೊಂಕಮಡು ಗ್ರಾಮದ ತೋಟದ ವಸತಿಯ ರೇಣುಕಾ ಶಿವರಾಯಪ್ಪ ಕೂಡಲಗಿ (35) ಮೃತಪಟ್ಟವರು. ವಿಜಯಪುರ ತಾಲ್ಲೂಕಿನ ದ್ಯಾಬೇರಿ ಗ್ರಾಮದ ಕೃಷ್ಣ ಮಾರುತಿ ತರಸೆ, ಸಿಂದಗಿಯ ಸಿರಾಜ ಬಾ. ಮರ್ತೂರ ಸಿಡಿಲು ಬಡಿದು ಗಾಯಗೊಂಡಿದ್ದಾರೆ. ಜಿಲ್ಲೆಯ 27 ಮನೆಗಳಿಗೆ ಹಾನಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ತರೀಕೆರೆ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಿದೆ.

ಕೊಟ್ಟಿಗೆಹಾರ ಬಳಿ ಚಂದುವಳ್ಳಿ ಸಮೀಪ ರಸ್ತೆಗೆ ಅಡ್ಡಲಾಗಿ ಮರವೊಂದು ಉರುಳಿದೆ.

ಕಲಬುರ್ಗಿ, ಸೇಡಂ ಮತ್ತು ಚಿಂಚೋಳಿ ಪಟ್ಟಣದ ಹಲವೆಡೆ ಗುಡುಗು ಸಹಿತ ಮಳೆ ಸುರಿಯಿತು. ಚಿತ್ತಾಪುರ ತಾಲ್ಲೂಕು ವಾಡಿ ಪಟ್ಟಣದ ಸುತ್ತಮುತ್ತ 40ಕ್ಕೂ ಅಧಿಕ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT