ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಮಳೆ ಹೊತ್ತು ತಂದ ಉತ್ತರಾ

ಕೆರೆಗಳಂತೆ ಗೋಚರಿಸಿದ ರೈಲ್ವೆ ಕೆಳ ಸೇತುವೆಗಳು, ತಗ್ಗು ಪ್ರದೇಶದ ರಸ್ತೆಗಳು ಜಲಾವೃತ
Last Updated 24 ಸೆಪ್ಟೆಂಬರ್ 2019, 9:57 IST
ಅಕ್ಷರ ಗಾತ್ರ

ತುಮಕೂರು: ಬರೀ ಸೋನೆ ಮಳೆ ಕಂಡಿದ್ದ ತುಮಕೂರು ನಗರದಲ್ಲಿ ಸೋಮವಾರ ಸಂಜೆ ಸುಮಾರು ಒಂದೂವರೆ ತಾಸು ಧಾರಾಕಾರ ಮಳೆ ಸುರಿಯಿತು.

ಗಾಳಿ, ಗುಡುಗಿನ ಸದ್ದಿಲ್ಲದೇ ಸಂಜೆ 5 ರ ಹೊತ್ತಿಗೆ ಮಳೆಯ ಸಿಂಚನವಾಯಿತು. ಸ್ವಲ್ಪ ಹೊತ್ತಿನಲ್ಲಿಯೇ ಧಾರಾಕಾರವಾಗಿ ಸುರಿಯಲು ಆರಂಭಿಸಿತು.

ಕಳೆದ ತಿಂಗಳಿಂದ ಹೀಗೆ ಬಂದು ಹಾಗೆ ಹೋಗುವ ಸೋನೆ ಮಳೆ ಎಂದು ಭಾವಿಸಿದ್ದವರು ರಭಸದ ಮಳೆ ಕಂಡು ಬೆರಗಾದರು.

ಅರ್ಧ ಗಂಟೆ, ಒಂದು ಗಂಟೆ ಬಿಟ್ಟು ನಿಲ್ಲಬಹುದು ಎಂದು ಭಾವಿಸಿದರೂ ಒಂದೂವರೆ ತಾಸು ಕಳೆದರೂ ಮಳೆ ನಿಲ್ಲಲ್ಲಿಲ್ಲ. ಅಷ್ಟು ಹೊತ್ತಿಗೆ ನಗರದ ಪ್ರಮುಖ ರಸ್ತೆಗಳು, ಬಡಾವಣೆಯಲ್ಲಿ ಗುಂಡಿಗಳಲ್ಲಿ, ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿ ಜನರನ್ನು ಹೈರಾಣು ಮಾಡಿತು.

ಶೆಟ್ಟಿಹಳ್ಳಿ ರೈಲ್ವೆ ಕೆಳ ಸೇತುವೆ, ಕುಣಿಗಲ್ ರಸ್ತೆ ರೈಲ್ವೆ ಕೆಳ ಸೇತುವೆ, ಭೀಮಸಂದ್ರ ರೈಲ್ವೆ ಕೆಳ ಸೇತುವೆಗಳಲ್ಲಿ ಮಳೆ ನೀರು ನಿಂತು ಕೆರೆಗಳಂತೆ ಗೋಚರಿಸಿದವು. ಈ ನೀರಿನಲ್ಲಿಯೇ ದ್ವಿಚಕ್ರವಾಹನ ಸವಾರರು, ಕಾರು ಚಾಲಕರು ಅಪಾಯ ಲೆಕ್ಕಿಸದೆಯೇ ವಾಹನ ಚಲಾಯಿಸಿದರು.

ಸಿದ್ಧರಾಮೇಶ್ವರ ಬಡಾವಣೆ, ಮಂಜುನಾಥನಗರ, ಕೋತಿತೋಪು ವೃತ್ತ, ಸಿದ್ಧಗಂಗಾ ಬಡಾವಣೆ, ಆರ್.ಟಿ.ನಗರ ಬಡಾವಣೆ, ನಂದಿಶ್ ಲೇಔಟ್, ಮುನ್ಸಿಪಲ್ ಲೇ ಔಟ್ ಸೇರಿದಂತೆ ವಿವಿಧ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು.

ಕೋತಿತೋಪು ವೃತ್ತ, ಸಿದ್ಧರಾಮೇಶ್ವರ ಬಡಾವಣೆಯ ಸಂಕ್ರಾಂತಿ ಡಿಪಾರ್ಟ್‌ ಮೆಂಟಲ್ ಸ್ಟೋರ್ ಮುಂಭಾಗದ ರಸ್ತೆ ಕೆರೆಯಂತಾಗಿತ್ತು. ಬಿ.ಎಚ್. ರಸ್ತೆ, ಶಿರಾ ರಸ್ತೆ, ಗುಬ್ಬಿ ರಸ್ತೆ, ಅಶೋಕ ರಸ್ತೆಯಲ್ಲೂ ಮಳೆ ನೀರು ನುಗ್ಗಿ ಹರಿಯಿತು.

ಸಂಚಾರಕ್ಕೆ ತೊಂದರೆ: ಸ್ಮಾರ್ಟ್ ಸಿಟಿ, ಗ್ಯಾಸ್ ಪೈಪ್‌ ಲೈನ್, 24X7 ಕುಡಿಯುವ ನೀರು ಪೂರೈಕೆ ಯೋಜನೆಯಡಿ ಪೈಪ್‌ ಲೈನ್ ಕಾಮಗಾರಿ, ಜಿಯೊ ಕೇಬಲ್ ಅಳವಡಿಕೆಗೆ ಕಂಡಲ್ಲೆಲ್ಲ ಗುಂಡಿ ಅಗೆದಿದ್ದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಯಿತು.

ಕಾಮಗಾರಿ ಕೈಗೊಂಡ ಸ್ಥಳದಲ್ಲಿ ಮರು ದುರಸ್ತಿ ಸಮರ್ಪಕವಾಗಿ ಮಾಡದೇ ಇರುವುದರಿಂದ ಮಳೆ ನೀರಿನ ರಭಸಕ್ಕೆ ನೆಲ ಕುಸಿದಿತ್ತು. ಕೆಲ ಕಡೆ ಗುಂಡಿಗಳು ಬಿದ್ದು ಅಪಾಯಕ್ಕೆ ಆಹ್ವಾನ ನೀಡಿದವು.

ರಾತ್ರಿ ಇಡೀ ಜಿಟಿಜಿಟಿ ಮಳೆ

ಗುಬ್ಬಿ: ಪಟ್ಟಣವು ಸೇರಿದಂತೆ ತಾಲ್ಲೂಕಿನ ಪ್ರಭುವನಹಳ್ಳಿ, ಜಿ.ಹೊಸಹಳ್ಳಿ, ಸಿಂಗೋನಹಳ್ಳಿ, ಲಕ್ಕೇನಹಳ್ಳಿ, ಹೇರೂರು, ಕಿಟ್ಟದಕುಪ್ಪೆ, ನಿಟ್ಟೂರು ಗ್ರಾಮಗಳಲ್ಲಿ ಭಾನುವಾರ ಸಂಜೆ ಸತತ ಒಂದು ತಾಸಿನವರೆಗೆ ಮಳೆ ಸುರಿದಿದೆ. ನಂತರ ರಾತ್ರಿ ಇಡೀ ಜಿಗುಟು ಮಳೆಯಾಯಿತು.

ಸೆ.1ರಿಂದ 23ರವರೆಗೆ ಗುಬ್ಬಿ ಕಸಬಾ ಹೋಬಳಿಯಲ್ಲಿ 68 ಮಿ.ಮೀ, ಚಂದ್ರಶೇಕರ್ ಪುರ 75 ಮಿ.ಮೀ, ಚೇಳೂರು 58 ಮಿ.ಮೀ, ಹಾಗಲವಾಡಿಯಲ್ಲಿ 69 ಮಿ.ಮೀ, ಕಡಬ 65 ಮಿ.ಮೀ, ನಿಟ್ಟೂರು 75 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT