ಮಂಗಳವಾರ, ಅಕ್ಟೋಬರ್ 22, 2019
22 °C

ಕೈ ಹಿಡಿದ ‘ಹಸ್ತ’: ತುಂಬಿದ ಕೆರೆಗಳು

Published:
Updated:
Prajavani

ಪಾವಗಡ: ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಸುರಿದ ಹಸ್ತ ಮಳೆಯಿಂದ ಬಹುತೇಕ ಕೆರೆಗಳು ಕೋಡಿ ಬಿದ್ದಿವೆ. ಹಲ ವರ್ಷಗಳಿಂದ ಹರಿಯದ ಹಳ್ಳಗಳೂ ಹರಿದಿವೆ.

ಉತ್ತರ ಮಳೆಯಿಂದಾಗಿ ತಾಲ್ಲೂಕಿನ ರಾಜವಂತಿ, ಕನ್ನಮೇಡಿ, ಕೊತ್ತೂರು, ಗುಂಡಾರ್ಲಹಳ್ಳಿ, ಪಳವಳ್ಳಿ ಸೇರಿದಂತೆ ಸಾಕಷ್ಟು ಕೆರೆಗಳಿಗೆ ಅಲ್ಪ ಪ್ರಮಾಣದ ನೀರು ಬಂದಿತ್ತು. ಭಾನುವಾರ ರಾತ್ರಿಯ ಮಳೆಯಿಂದಾಗಿ ರಾಜವಂತಿ, ಕನ್ನಮೇಡಿ, ಗುಂಡಾರ್ಲಹಳ್ಳಿ, ಮಲ್ಲಮ್ಮನಹಳ್ಳಿ, ನಾಗಲಮಡಿಕೆ, ಗೌಡೇಟಿ, ವೆಂಕಟಾಪುರ ಸೇರಿದಂತೆ ಬಹುತೇಕ ಕೆರೆಗಳು ತುಂಬಿವೆ.

ತಾಲ್ಲೂಕಿನ ನೇರಳೆಕುಂಟೆ ಹಳ್ಳ ದಶಕಗಳ ನಂತರ ತುಂಬಿ ಹರಿದಿದೆ. ಹಳ್ಳ ಹರಿಯುವುದನ್ನು ಸುತ್ತ ಮುತ್ತಲ ಗ್ರಾಮಸ್ಥರು ಕಣ್ತುಂಬಿಕೊಂಡರು.

ಕೆಂಚಮ್ಮನಹಳ್ಳಿ, ಗುಂಡಾರ್ಲಹಳ್ಳಿ ಕೆರೆ ಏರಿ ಒಡೆದು ಕೆರೆ ನೀರು ಹೊರ ಹರಿದಿದೆ. ಕೆರೆ ಏರಿ ಬಳಿ ಅವೈಜ್ಞಾನಿಕವಾಗಿ ಹೂಳೆತ್ತಿರುವುದು, ಅಸಮರ್ಪಕ ಕೆರೆ ನಿರ್ವಹಣೆ ಕೆರೆ ಏರಿ ಹಾಳಾಗಲು ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಕೆರೆ ತುಂಬಿ ಕೋಡಿ ಬಿದ್ದಿರುವುದನ್ನು ಗ್ರಾಮಸ್ಥರು ನೋಡಿ ಕೇಕೆ ಹಾಕಿ ಸಂತಸ ವ್ಯಕ್ತಪಡಿಸಿದರು. ರಾಜವಂತಿ ಸೇರಿದಂತೆ ಸಾಕಷ್ಟು ಗ್ರಾಮಗಳ ಕೆರೆಗಳಿಗೆ ಸಂಪ್ರದಾಯದಂತೆ ಆಯಾ ಗ್ರಾಮದ ಮುಖಂಡರು ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿದರು.

ನಾಗಲಮಡಿಕೆ ಉತ್ತರ ಪಿನಾಕಿನಿ ನದಿಗೆ ನಾಗಲಮಡಿಕೆ ಬಳಿ ನಿರ್ಮಿಸಿರುವ ಚೆಕ್ ಡ್ಯಾಂ ತುಂಬುವ ಹಂತದಲ್ಲಿದೆ.

ತಾಲ್ಲೂಕಿನ ವೀರ್ಲಗೊಂದಿಯಲ್ಲಿ ನರಸಿಂಹಯ್ಯ ಎಂಬುವರಿಗೆ ಸೇರಿದ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಕೋಳಿಗಳು ಸತ್ತು ಹೋಗಿವೆ. ಕೆಲವೆಡೆ ಟೊಮೊಟೊ ಇತ್ಯಾದಿ ಬೆಳೆಗಳಿಗೆ ಹಾನಿಯಾಗಿದೆ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)