ಮಂಗಳವಾರ, ನವೆಂಬರ್ 12, 2019
27 °C

‘ಮೀಟರ್ ಬಡ್ಡಿ ದಂಧೆ: ಶೋಷಣೆಗೆ ಮುಕ್ತಿ ನೀಡಿ’

Published:
Updated:
Prajavani

ತುಮಕೂರು: ಜಿಲ್ಲೆಯಲ್ಲಿನ ಮೀಟರ್‌ ಬಡ್ಡಿ ದಂಧೆಯಿಂದ ರೈತರಿಗೆ ಆಗುತ್ತಿರುವ ಶೋಷಣೆಯನ್ನು ತಪ್ಪಿಸಬೇಕು ಎಂದು ಕರ್ನಾಟಕ ಕೃಷಿ ರೈತ ಬಂಧು ವೇದಿಕೆ ನೇತೃತ್ವದಲ್ಲಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.

ರೈತರಿಗೆ ಶೇ 10ರ ಬಡ್ಡಿದರದಲ್ಲಿ ಸಾಲವನ್ನು ನೀಡಿ, ಸಾಲ ಮರುಪಾವತಿಸಲು ಆಗದೇ ಇದ್ದಾಗ ಜಮೀನನ್ನು ಬರೆಸಿಕೊಳ್ಳುತ್ತಿದ್ದಾರೆ. ಇದರಿಂದ ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಮೇಳೆಕಲ್ಲಹಳ್ಳಿ, ಶಿರಾ ತಾಲ್ಲೂಕು ಹುಂಜನಾಳು ಗ್ರಾಮದ ಜೈಶೀಲ ಎಂಬಾಕೆ ರೈತರಿಗೆ ಸಾಲವನ್ನು ನೀಡಿ, ಬಡ್ಡಿ, ಚಕ್ರ ಬಡ್ಡಿ, ಸುಸ್ತಿ ಬಡ್ಡಿ ಎಂದು ಕಿರುಕುಳ ನೀಡಿದ್ದಾರೆ. ರೈತರ ಜಮೀನನ್ನು ಬರೆಸಿಕೊಂಡಿದ್ದಾರೆ. ಸಾಲ ತೀರುವವರೆಗೆ ರೈತರನ್ನು ಜೀತಕ್ಕೆ ಇಟ್ಟುಕೊಂಡು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗುಬ್ಬಿ ತಾಲ್ಲೂಕಿನ ಶಂಕರಮೂರ್ತಿ ಎಂಬ ರೈತನಿಗೆ ₹ 1 ಲಕ್ಷ ಸಾಲ ನೀಡಿ, ಬಡ್ಡಿ, ಚಕ್ರಬಡ್ಡಿ ಎಂದು ₹ 3 ಲಕ್ಷ ಕೊಡುವಂತೆ ಒತ್ತಾಯಿಸಿದ್ದಾರೆ. 1 ಎಕರೆ 11 ಗುಂಟೆ ಅಡಿಕೆ ತೋಟವನ್ನು ಬಡ್ಡಿ ಹಣಕ್ಕಾಗಿ ಬೆದರಿಕೆ ಹಾಕಿ ಬರೆಸಿಕೊಂಡಿದ್ದಾರೆ. ಅದೇ ರೀತಿ ಶಿರಾ ತಾಲ್ಲೂಕಿನ ಈರಣ್ಣ ಎಂಬುವರ ಕುಟುಂಬವನ್ನು ಬೆದರಿಸಿ ಮನೆಯಲ್ಲಿ ಜೀತಕ್ಕೆ ಇಟ್ಟುಕೊಂಡು ಶೋಷಣೆ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ, ‘ಮೀಟರ್ ಬಡ್ಡಿ ವ್ಯವಹಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎನ್ನುತ್ತಾರೆ. ಹೀಗಾದರೆ ನಾವು ಯಾರ ಬಳಿ ನ್ಯಾಯ ಕೇಳಬೇಕು ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಕೆ.ರಾಕೇಶ್‍ಕುಮಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಅವರು ಪ್ರತಿಭಟನಾ ನಿರತರಿಂದ ಮನವಿ ಪತ್ರ ಸ್ವೀಕರಿಸಿದರು.

ರೈತ ಬಂಧು ವೇದಿಕೆ ಅಧ್ಯಕ್ಷ ಹೊನ್ನೇಶ್‍ಗೌಡ, ಸಚಿನ್, ಶಿವಕುಮಾರ್, ಮುನಿರಾಜು, ಶಿವರಾಜು, ರಾಮಮೂರ್ತಿ, ರಾಮಸ್ವಾಮಿ, ಶ್ರೀನಿವಾಸ್, ಸುಶೀಲಮ್ಮ ಇದ್ದರು.

ಪ್ರತಿಕ್ರಿಯಿಸಿ (+)