ಶನಿವಾರ, ನವೆಂಬರ್ 16, 2019
21 °C

ಮೀಟರ್ ಬಡ್ಡಿ ದಂಧೆ; ಸಮಜಾಯಿಷಿಗೆ ನೋಟಿಸ್

Published:
Updated:

ತುಮಕೂರು: ₹ 4 ಲಕ್ಷ ಸಾಲ ನೀಡಿ ಶೇ 10ರಷ್ಟು ಬಡ್ಡಿ ವಸೂಲಿ ಮಾಡಿದ್ದೀರಿ. ಇದು ಕಾನೂನು ಉಲ್ಲಂಘನೆ ಆಗುತ್ತದೆ. ಈ ಬಗ್ಗೆ ಲಿಖಿತ ಸಮಜಾಯಿಷಿ ನೀಡಲು ಅ.15ರಂದು ಬೆಳಿಗ್ಗೆ 11ಕ್ಕೆ ಖುದ್ದಾಗಿ ಕಚೇರಿಗೆ ಹಾಜರಾಗಬೇಕು ಎಂದು ಜಿಲ್ಲಾ ಲೇವಾದೇವಿ ನಿಬಂಧಕರು ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ ಹುಂಜನಾಳು ಗ್ರಾಮದ ಜೈಶೀಲ ಎಂಬುವವರಿಗೆ ನೋಟಿಸ್ ನೀಡಿದ್ದಾರೆ.

ಹಿನ್ನೆಲೆ: ಗುಬ್ಬಿ ತಾಲ್ಲೂಕು ಇಡಕನಹಳ್ಳಿ ಗ್ರಾಮದ ಐ.ಎಸ್.ಶಂಕರಲಿಂಗಪ್ಪ ಎಂಬುವವರು ಇದೇ ಗ್ರಾಮದ ಲಿಂಗಣ್ಣ ಹಾಗೂ ಅವರ ಪುತ್ರಿ ಹುಂಜನಾಳು ಗ್ರಾಮದ ಜೈಶೀಲ ಅವರಿಂದ ₹ 4 ಲಕ್ಷ ಸಾಲ ಪಡೆದಿದ್ದರು. ಈ ಸಾಲಕ್ಕೆ ಶೇ 10ರಷ್ಟು ಬಡ್ಡಿ ವಿಧಿಸಿದ್ದರು. ಶಂಕರಲಿಂಗಪ್ಪ ಬಡ್ಡಿ, ಸುಸ್ತಿ ಬಡ್ಡಿ, ದಂಡವನ್ನು ಕಟ್ಟಲು ತನ್ನ ಜಮೀನನ್ನೇ ಕಳೆದುಕೊಂಡರು ಎಂದು ಕರ್ನಾಟಕ ಕೃಷಿ ರೈತ ಬಂಧು ವೇದಿಕೆ ಆರೋಪಿಸಿ ರಾಜ್ಯ ರೈತ ಸಂಘಟನೆ ಹಾಗೂ ಜಿಲ್ಲಾ ಲೇವಾದೇವಿ ನಿಬಂಧಕರು ಹಾಗೂ ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ನೀಡಿತ್ತು.

ಈ ದೂರು ಆಧರಿಸಿ ಖುದ್ದು ಹಾಜರಾಗುವಂತೆ ಶಂಕರಲಿಂಗಪ್ಪ ಹಾಗೂ ಜೈಶೀಲ ಅವರಿಗೆ ಉಪನಿಬಂಧಕರು ಸೂಚಿಸಿದ್ದಾರೆ.

ಜೈಶೀಲ ಹಾಗೂ ಲಿಂಗಣ್ಣ, ರೈತರಿಗೆ ಬಡ್ಡಿ ರೂಪದಲ್ಲಿ ಹಣ ನೀಡಿ ಅವರ ಜಮೀನುಗಳನ್ನು ಕಬಳಿಸಿದ್ದಾರೆ. ಶಿರಾ ತಾಲ್ಲೂಕಿನ ಗೊಲ್ಲರಹಟ್ಟಿ ಗ್ರಾಮದ ಈರಣ್ಣ ಅವರ ಜಮೀನು ಸಹ ಕಬಳಿಸಿದ್ದಾರೆ. 3 ವರ್ಷ ಅವರನ್ನು ಜೀತಕ್ಕೆ ಇಟ್ಟುಕೊಂಡಿದ್ದರು. ಬಡ್ಡಿ ಕಟ್ಟಿರುವ ದಾಖಲೆಗಳು, ಸಾಕ್ಷ್ಯಗಳು ಲಭ್ಯ ಇವೆ ಎಂದು ಕರ್ನಾಟಕ ಕೃಷಿ ರೈತ ಬಂಧು ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಮೇಳೆಕಲ್ಲಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)