ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಕಾಂಗ್ರೆಸ್‌ ನಾಯಕರ ಜಟಾಪಟಿಗೆ ವಿರಾಮ?

ಜಿಲ್ಲಾ ಕಾಂಗ್ರೆಸ್‌ನಲ್ಲಿ ತಾರಕಕ್ಕೇರಿದ್ದ ಬೆಂಬಲಿಗರ ವಾಕ್ಸಮರ; ವಿಷಾದ ವ್ಯಕ್ತಪಡಿಸಿ ಕೆಎನ್‌ಆರ್ ಪತ್ರ
Last Updated 7 ಜೂನ್ 2019, 19:31 IST
ಅಕ್ಷರ ಗಾತ್ರ

ತುಮಕೂರು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹಾಗೂ ಮಾಜಿ ಶಾಸಕ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ಬೆಂಬಲಿಗರ ನಡುವಿನ ಜಟಾ‍ಪಟಿಯ ಕಾರಣಕ್ಕೆ ‘ಒಡೆದ ಮನೆ’ ಎನ್ನುವಂತಾಗಿರುವ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಈ ಜಟಾಪಟಿಗೆ ತಾತ್ಕಾಲಿಕ ವಿರಾಮ ಬಿದ್ದಂತೆ ಕಾಣುತ್ತಿದೆ.

ಇದು ತಾತ್ಕಾಲಿಕವೋ ಪೂರ್ಣ ವಿರಾಮವೋ ಮುಂದಿನ ದಿನಗಳಲ್ಲಿ ನಾಯಕರ ನಡೆಯಿಂದ ತಿಳಿಯಲಿದೆ. ಪ‍ರಮೇಶ್ವರ ಅವರ ಮೇಲೆ ಆಗಾಗ್ಗೆ ಮುಗಿಬೀಳುತ್ತಿದ್ದ ಕೆ.ಎನ್.ರಾಜಣ್ಣ, ‘ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಎಲ್ಲ ಕಹಿ ಸಂಗತಿಗಳನ್ನು ಮರೆತು ಒಂದಾಗಿ ಪಕ್ಷ ಕಟ್ಟೋಣ’ ಎಂದು ಹೇಳಿಕೆ ಬಿಡುಗಡೆ ಮಾಡುವ ಮೂಲಕ ‘ಕಹಿ’ ಸಂಗತಿಗಳನ್ನು ಮರೆಯೋಣ ಎಂದು ಆಶಿಸಿದ್ದಾರೆ.

ಮತ್ತೊಂದು ಕಡೆ ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡುವಾಗ ಡಾ.ಜಿ.ಪರಮೇಶ್ವರ ಅವರು, ರಾಜಣ್ಣ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ‘ಕಾಲ ಬಂದಾಗ ನಿಮ್ಮನ್ನು ಕರೆದೇ ಮಾತನಾಡುವೆ’ ಎಂದು ಮಾಧ್ಯಮದವರಿಗೆ ಡಿಸಿಎಂ ತಿಳಿಸಿದ್ದಾರೆ.

ಜೂನ್ 10ರಂದು ರಾಜಣ್ಣ ಬೆಂಬಲಿಗರು ಮತ್ತು 11ರಂದು ಪರಮೇಶ್ವರ ಅವರ ಬೆಂಬಲಿಗರು ನಗರದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದರು. ಅಲ್ಲದೆ ಇದು ಸಮುದಾಯಗಳ ವಿಷಯವಾಗಿಯೂ ರೂಪಾಂತರವಾಗಿತ್ತು.

ಕೆ.ಎನ್.ರಾಜಣ್ಣ ಪತ್ರದ ಸಾರಾಂಶ:ಲೋಕಸಭಾ ಫಲಿತಾಂಶದ ನಂತರ ತುಮಕೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದ್ದು ಈ ಗೊಂದಲಕ್ಕೆ ತೆರೆ ಎಳೆಯುವ ಉದ್ದೇಶದಿಂದ ನಮ್ಮ ಪಕ್ಷದ ರಾಜ್ಯ ನಾಯಕರ ಸೂಚನೆಯಂತೆ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ನಾನು ಕೆಲವು ವಿಷಯಗಳನ್ನು ಪ್ರಸ್ತಾಪಿಸಲು ಇಚ್ಛಿಸುತ್ತೇನೆ.

ತುಮಕೂರು ನಗರದಲ್ಲಿ ‘ಝೀರೊ ಟ್ರಾಫಿಕ್’ ವ್ಯವಸ್ಥೆಯಿಂದ ಸಾರ್ವಜನಿಕರು ವ್ಯಕ್ತಪಡಿಸಿದ ಆಕ್ರೋಶವನ್ನು ವಿವರಿಸುವಾಗ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಬಗ್ಗೆ ಬಳಸಿದೆ ಎನ್ನಲಾದ ಅವಾಚ್ಯ ಶಬ್ದಗಳಿಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಮತ್ತು ಅವರು ಸುಮಾರು 52 ವರ್ಷಗಳಿಂದ ಸ್ನೇಹಿತರು.

ನಾವು ಹಲವು ಬಾರಿ ಜಗಳವಾಡಿದ್ದೇವೆ. ಹಾಗೆಯೇ ಒಂದಾಗಿದ್ದೇವೆ. ಆದರೆ ಈ ಬಾರಿ ಬಳಸಿದೆ ಎನ್ನಲಾದ ಅವಾಚ್ಯ ಶಬ್ದದಿಂದ ನನ್ನ ಮನಸ್ಸಿಗೂ ನೋವಾಗಿದೆ. ಮತ್ತೊಮ್ಮೆ ಅವರ ಕುಟುಂಬ ಸದಸ್ಯರಿಗೂ ವಿಷಾದ ವ್ಯಕ್ತಪಡಿಸುತ್ತೇನೆ.

ನಾನು ಈ ಜೀವಮಾನದಲ್ಲಿ ಎಂದೂ ಮಹಿಳೆಯರ ಬಗ್ಗೆ ಅಗೌರವಯುತವಾಗಿ ನಡೆದುಕೊಂಡಿಲ್ಲ. ನಾನು ನಿರಂತರವಾಗಿ ಎಲ್ಲ ಜಾತಿಯ ಬಡವರ ಪರವಾಗಿ ಅವರ ಅಭ್ಯುದಯಕ್ಕಾಗಿ, ಬಡವರ ಸ್ವಾಭಿಮಾನ ಹಾಗೂ ಸ್ವಾವಲಂಬಿ ಜೀವನ ನಡೆಸುವ ವ್ಯವಸ್ಥೆ ಸೃಷ್ಟಿಸುವ ಬದ್ಧತೆಯ ರಾಜಕಾರಣ ಮಾಡುತ್ತಿದ್ದೇನೆ. ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಎಲ್ಲ ಕಹಿ ಸಂಗತಿಗಳನ್ನು ಮರೆತು ಒಂದಾಗಿ ಪಕ್ಷ ಕಟ್ಟೋಣ ಎಂದು ರಾಜಣ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇವನ್ನೂ ಓದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT