ಜಲಾಮೃತ ಯೋಜನೆಯ ಅನುಷ್ಠಾನಕ್ಕೆ ಆಗ್ರಹ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542

ಶಿರಾದಲ್ಲಿ ನಡೆಯುತ್ತಿರುವ ಬರಮುಕ್ತ ಕರ್ನಾಟಕ ಆಂದೋಲನ ತರಬೇತಿ ಶಿಬಿರ

ಜಲಾಮೃತ ಯೋಜನೆಯ ಅನುಷ್ಠಾನಕ್ಕೆ ಆಗ್ರಹ

Published:
Updated:
Prajavani

ಶಿರಾ: ರಾಜ್ಯವನ್ನು ಶಾಶ್ವತವಾಗಿ ಬರಮುಕ್ತಗೊಳಿಸಲು ಸರ್ಕಾರ ಈಗಾಗಲೇ ರೂಪಿಸಿರುವ ‘ಜಲಾಮೃತ ಯೋಜನೆ’ಯನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಜಲ ತಜ್ಞ ಡಾ.ರಾಜೇಂದ್ರ ಸಿಂಗ್ ಒತ್ತಾಯಿಸಿದರು.

ನಗರದ ಹೊರವಲಯದ ಗುಮ್ಮನಹಳ್ಳಿ ಗೇಟ್‌ನಲ್ಲಿರುವ ಡಾ.ರಾಮಮನೋಹರ್ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ, ತುಮಕೂರು ವಿಜ್ಞಾನ ಕೇಂದ್ರ, ತುಮಕೂರು ಧಾನ್ಯ ಕೇಂದ್ರ, ಸಹಜ ಸಮೃದ್ಧ, ಸ್ಕೂಲ್ ಆಫ್ ನ್ಯಾಚುರಲ್ ಫಾರ್ಮಿಂಗ್, ಕೋಲಾರ ಶಾಶ್ವತ ನೀರಾವರಿ ಹೋರಾಟ ಸಮಿತಿ, ಚಾಮರಾಜಪೇಟೆ ದೀನಬಂಧು ಆಶ್ರಮ ಮತ್ತು ಜೀವನಾಡಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ರಾಜ್ಯಮಟ್ಟದ ಬರಮುಕ್ತ ಕರ್ನಾಟಕ ಆಂದೋಲನ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಲಾಮೃತ ಕಾರ್ಯಕ್ರಮ ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಇದುವರೆಗೂ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಈ ಬಗ್ಗೆ ಪ್ರತಿಯೊಬ್ಬರು ಜಾಗೃತರಾಗುವ ಮೂಲಕ ಸರ್ಕಾರವನ್ನು ಮಣಿಸುವ ಕೆಲಸವಾಗಬೇಕು. ಇದಕ್ಕಾಗಿ ನೀವೇ ಸಮಿತಿಯನ್ನು ರಚಿಸಿಕೊಂಡು ಹೋರಾಟ ನಡೆಸಬೇಕು ಎಂದರು.

ನಗರಕ್ಕೆ ವಲಸೆ: ಅಂತರ್ಜಲ ಮಟ್ಟ ಕುಸಿತದಿಂದಾಗಿ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದು, ಯುವಜನರು ನಗರದ ಕಡೆ ವಲಸೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಬದುಕನ್ನು ಕಟ್ಟಿಕೊಳ್ಳಲು ವ್ಯವಸಾಯ ಹಾಗೂ ನೀರು ಪ್ರಮುಖ ಪಾತ್ರ ವಹಿಸುತ್ತವೆ. ಹಾಗೇ ರಾಜ್ಯವನ್ನು ಬರಮುಕ್ತವನ್ನಾಗಿಸಲು ಸರ್ಕಾರ ಏನು ಕ್ರಮಗಳನ್ನು ಕೈಗೊಂಡಿದೆ ಎಂದು ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕಾಗಿದೆ ಎಂದರು.

ಮಹಾರಾಷ್ಟ್ರದಲ್ಲಿ ಅನುಷ್ಠಾನ: ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಯಾರೇ ಒಳ್ಳೆಯ ಕೆಲಸ ಮಾಡಿದರು ಅವರನ್ನು ಅಭಿನಂದಿಸುತ್ತೇನೆ. ಮಹಾರಾಷ್ಟ್ರ ಸರ್ಕಾರ ಬರದ ನಿರ್ವಹಣೆಯ ಬಗ್ಗೆ ನಾನು ನೀಡಿದ ವರದಿಯಂತೆ ಜಲಸಾಕ್ಷರತಾ ಆಂದೋಲನ ಕೈಗೊಂಡಿರುವುದು ಶ್ಲಾಘನೀಯ ಎಂದರು.

ಅಂತರ್ಜಲ ಅಭಿವೃದ್ಧಿಯ ಬಗ್ಗೆ ಮಾತನಾಡಿದ ನಿವೃತ್ತ ಭೂಗರ್ಭ ವಿಜ್ಞಾನಿ ಸಿ.ಸಾಹುಕಾರ್, ಜಗತ್ತಿನಲ್ಲಿ ಅತಿ ಹೆಚ್ಚು ಮಳೆಯಾಗುವ 2ನೇ ದೇಶ ಭಾರತವಾಗಿದ್ದರು ಸಹ ಇಲ್ಲಿ ಮಳೆ ಬಂದರು ಬರವನ್ನು ನೋಡುವಂತಾಗಿದೆ. ನೀರಿನ ನಿರ್ವಹಣೆಯ ತಂತ್ರಗಾರಿಕೆಯಲ್ಲಿ ನಾವು ವಿಫಲವಾಗಿರುವುದರಿಂದ ನೀರಿನ ಸಮಸ್ಯೆ ನಮ್ಮನ್ನು ಕಾಡುತ್ತಿದೆ. ನಮ್ಮಲ್ಲಿ ಶೇ 60ರಷ್ಟು ನೀರು ಸಮುದ್ರದ ಪಾಲಾಗುತ್ತಿದೆ. ನದಿಯಲ್ಲಿ ಹರಿದು ಹೋಗುವ ನೀರಿನ ಲೆಕ್ಕ ಮಾತ್ರ ನಮಗೆ ದೊರೆತಿದೆ. ಆದರೆ, ಅಂತರ್ಜಲದ ಮೂಲಕ ಹರಿಯುವ ನೀರಿನ ಲೆಕ್ಕ ದೊರೆತಿಲ್ಲ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್, ನಾವು ನೀರಿನ ಬಳಕೆ ಬಗ್ಗೆ ಜಾಗೃತರಾಗದಿದ್ದರೆ ಮುಂದೆ ನೀರಿಗಾಗಿಯೇ ಮಹಾಯುದ್ಧ ನಡೆಯುವ ದಿನಗಳು ದೂರವಿಲ್ಲ. ಡಾ.ರಾಜೇಂದ್ರ ಸಿಂಗ್ ಹೇಳುವಂತೆ ನಮಗೆ ಸಿಮೆಂಟ್ ಮತ್ತು ಕಬ್ಬಿಣದ ಕಟ್ಟಡಗಳಲ್ಲಿರುವ ದೇವರು ಬೇಕಿಲ್ಲ. ನೈಸರ್ಗಿಕವಾಗಿ ಹರಿದು ಹೋಗುತ್ತಿರುವ ನಿಜವಾದ ದೇವರಾದ ಗಂಗಮ್ಮನನ್ನು ಆರಾಧಿಸುವ ಕೆಲಸವಾಗಬೇಕು ಎಂದರು.

ಶಿಬಿರದಲ್ಲಿ ರಾಜ್ಯದ 14 ಜಿಲ್ಲೆಗಳಿಂದ 250ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ.

ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ.ಯತಿರಾಜು, ವಾಲ್ಮಿ ನಿರ್ದೇಶಕ ಪ್ರೊ.ರಾಜೇಂದ್ರ ಪೋದಾರ್, ಪ್ರೊ.ಮಹಲಿಂಗಯ್ಯ, ತಮಿಳುನಾಡಿನ ರೈತ ಮುಖಂಡ ಗುರುಮೂರ್ತಿ, ನಿವೃತ್ತ ಐಜಿಪಿ ಅರಕೇಶ್, ಅಭಾ ಶರ್ಮ, ಅಭಿ ಮಂಡೇಲಾ ಇದ್ದರು.

ಜಲಾಮೃತ ಎಂದರೇನು?

ಮೂರು ವರ್ಷದ ಹಿಂದೆ ಬಿಜಾಪುರದಲ್ಲಿ ರಾಜೇಂದ್ರ ಸಿಂಗ್ ನೇತೃತ್ವದಲ್ಲಿ ‘ಬರ ಮುಕ್ತ ಭಾರತ’ ಘೋಷವಾಕ್ಯದಡಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಲಾಮೃತ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ ಗ್ರಾಮೀಣ ಜಲಮೂಲಗಳ ಪುನಶ್ಚೇತನ ಹಾಗೂ ನಿರ್ಮಾಣ ಪರಿಣಾಮಕಾರಿ ಜಲನಿರ್ವಹಣೆ, ಅರಣ್ಯೀಕರಣ ಹಾಗೂ ಜಲ ಸಾಕ್ಷರತಾ ಆಂದೋಲನಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.

ಹೂಳೆಯತ್ತಲು ಚಾಲನೆ

ಶಿಬಿರ ಪ್ರಾರಂಭಕ್ಕೆ ಮೊದಲು ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ನೆಲದಿಮ್ಮನಹಳ್ಳಿ ಚಿನ್ನೇನಹಳ್ಳಿ ಹಾಗೂ ಕಾಳೇನಹಳ್ಳಿ ಗ್ರಾಮಗಳ ಸಮೀಪದ ಗಂಗಮ್ಮನ ಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !