ಶುಕ್ರವಾರ, ಡಿಸೆಂಬರ್ 2, 2022
23 °C

ಗುಬ್ಬಿ: ರಕ್ಷಾ ಬಂಧನ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ಭಯೋತ್ಪಾದನೆಯು ಇಡೀ ವಿಶ್ವಕ್ಕೆ ದೊಡ್ಡ ಪಿಡುಗಾಗಿದ್ದು, ಅದರ ಅಟ್ಟಹಾಸ ದೇಶಕ್ಕೂ ಅಪಾಯ ತರುವ ಸಾಧ್ಯತೆ ಇದೆ. ಇದರ ವಿರುದ್ಧ ನಾವು ಜಾಗೃತರಾಗಬೇಕಿದೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಸ್. ಪಂಚಾಕ್ಷರಿ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಬಳಿಯ ಅಶ್ವತ್ಥಕಟ್ಟೆ ಬಳಿ ವಿವಿಧ ಸಂಘಟನೆಗಳಿಂದ ಭಾನುವಾರ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಆಚರಣೆಯಲ್ಲಿ ಮಾತನಾಡಿದರು.

ದೇಶಕ್ಕೆ ಅಪಾಯ ಇರುವ ಕಾರಣ ದೇಶ ರಕ್ಷಣೆಯ ಪಣತೊಟ್ಟು ಈ ರಕ್ಷಾ ಬಂಧನ ಹಬ್ಬವನ್ನು ಆಚರಿಸೋಣ. ಪ್ರಾಚೀನ ಇತಿಹಾಸ ಹೊಂದಿರುವ ಈ ಪವಿತ್ರ ಆಚರಣೆಗೆ ವಿಶೇಷ ಅರ್ಥವಿದೆ. ಬಾಂಧವ್ಯಕ್ಕೆ ಗೌರವ ನೀಡುವ ಈ ಹಬ್ಬದಲ್ಲಿ ರಾಖಿಯನ್ನು ಪರಸ್ಪರ ಕೈಗೆ ಕಟ್ಟಿಕೊಂಡು ರಕ್ಷಣೆಯ ಸಂಕಲ್ಪ ತೊಡಬೇಕಿದೆ. ಈ ಬಾರಿ ಕೊರೊನಾ ಓಡಿಸುವ ಜತೆಗೆ ಭಯೋತ್ಪಾದನೆ ವಿರುದ್ಧದ ಸಮರಕ್ಕೂ ಸಿದ್ಧರಾಗಬೇಕಿದೆ ಎಂದರು.

ಚನ್ನಬಸವೇಶ್ವರ ಕ್ರೀಡಾ ಸಂಘದ ಶಂಕರ್‌ಕುಮಾರ್ ಮಾತನಾಡಿ, ವಾತ್ಸಲ್ಯ ಮತ್ತು ಬಾಂಧವ್ಯ ಬಿಂಬಿಸುವ ಗುರುತರ ರಕ್ಷೆಯು ಈ ದಿನ ಎಲ್ಲರ ಕೈಯಲ್ಲಿ ಪವಿತ್ರವಾಗಿ ಅಲಂಕರಿಸಲಿದೆ. ಶ್ರಾವಣ ಮಾಸದಲ್ಲಿನ ಹಬ್ಬಗಳ ಸಾಲು ಸಾಲು ಆಚರಣೆ ಮಧ್ಯೆ ಈ ರಕ್ಷಾ ಬಂಧನ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ ಎಂದು ಹೇಳಿದರು.

ಜನಸೇವಾ ವೇದಿಕೆ ಅಧ್ಯಕ್ಷ ಎಚ್.ಟಿ. ಭೈರಪ್ಪ ಮಾತನಾಡಿ, ಸಹೋದರತ್ವದ ಸಂಕೇತವಾದ ಈ ರಕ್ಷಾ ಬಂಧನ ಹಬ್ಬಕ್ಕೆ ದೇಶವೇ ಶ್ರದ್ಧೆ ತೋರುತ್ತದೆ. ಧಾರ್ಮಿಕ ಆಚರಣೆಯಲ್ಲಿ ಕಂಕಣ ತೊಡುವುದು ಒಂದು ಸಂಕಲ್ಪದ ಸಂಕೇತ. ಅದೇ ಮಾದರಿಯಲ್ಲಿ ಪ್ರೀತಿ, ಬಾಂಧವ್ಯವನ್ನು ಎತ್ತಿ ಹಿಡಿಯಲು ಈ ಹಬ್ಬ ಆಚರಿಸಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪ.ಪಂ. ಅಧ್ಯಕ್ಷ ಜಿ.ಎನ್. ಅಣ್ಣಪ್ಪಸ್ವಾಮಿ, ಸದಸ್ಯರಾದ ಜಿ.ಆರ್. ಶಿವಕುಮಾರ್, ಜಿ.ಸಿ. ಕೃಷ್ಣಮೂರ್ತಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಯತೀಶ್‌ಕುಮಾರ್, ಯುವ ಮೋರ್ಚಾ ಅಧ್ಯಕ್ಷ ಭರತ್‌ಕುಮಾರ್, ಮುಖಂಡರಾದ ಸಿದ್ದರಾಮಯ್ಯ, ಬಿ. ಲೋಕೇಶ್, ಚೇತನ್, ಕೆ. ಸಂಜಯ್, ಜಿ.ಆರ್. ರಮೇಶ್‌ಗೌಡ, ಅಖಿಲೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು