ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ದುರಂತ: ರಮೇಶ್‌ಗೌಡ ಅಂತ್ಯಕ್ರಿಯೆ ವೇಳೆ ಮುಗಿಲು ಮುಟ್ಟಿದ ಆಕ್ರಂದನ

ನಾಗಮಂಗಲ ತಾಲ್ಲೂಕಿನ ಬೆಟ್ಟದಕೋಟೆಯಲ್ಲಿ ರಮೇಶ್ ಗೌಡ ಅಂತ್ಯಕ್ರಿಯೆ
Last Updated 24 ಏಪ್ರಿಲ್ 2019, 16:27 IST
ಅಕ್ಷರ ಗಾತ್ರ

ತುಮಕೂರು: ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ದುರ್ಮರಣ ಹೊಂದಿದ್ದ ನಗರದ ಉದ್ಯಮಿ ರಮೇಶ್‌ ಗೌಡ ಅವರ ಮೃತದೇಹ ಬುಧವಾರ ಸಂಜೆ ಅವರ ಕುಟುಂಬವನ್ನು ತಲುಪಿತು. ರಮೇಶ್ ಗೌಡ ಅವರ ತಾಯಿ, ಪತ್ನಿ, ಪುತ್ರಿ ಹಾಗೂ ಸಂಬಂಧಿಕರು ತೀವ್ರವಾಗಿ ಗೋಳಿಟ್ಟರು.

ಬುಧವಾರ ಮಧ್ಯಾಹ್ನ ಶ್ರೀಲಂಕಾದಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ದೇಹ ನೆಲಮಂಗಲ ಮಾರ್ಗವಾಗಿ ತುಮಕೂರು ಸರಸ್ವತಿ ಪುರಂನಲ್ಲಿರುವ ಅವರ ನಿವಾಸಕ್ಕೆ ತಲುಪಿತು.

ಒಂದು ಗಂಟೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಮೇಶ್‌ ಮೃತ ದೇಹವನ್ನು ನೋಡಲು ನಗರದ ಜನರು ಕಿಕ್ಕಿರಿದು ಬಂದಿದ್ದರು. ರಮೇಶ್‌ ಪತ್ನಿ ಮಂಜುಳಾ, ಮಗಳು ದೀಕ್ಷಾ ಅವರ ದುಃಖದಿಂದ ಎಲ್ಲರ ಕಣ್ಣಾಲಿಗಳಲ್ಲಿ ನೀರು ಜಿನುಗಿತು.

ಈ ವೇಳೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಸಚಿವ ಎಸ್‌.ಆರ್‌.ಶ್ರೀನಿವಾಸ್‌, ಬಿಜೆಪಿ ಹಿರಿಯ ಮುಖಂಡ ಎಸ್‌.ಶಿವಣ್ಣ, ಮಾಜಿ ಶಾಸಕ ರಫೀಕ್‌ ಅಹಮ್ಮದ್‌, ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ, ಜೆಡಿಎಸ್‌ ಮುಖಂಡ ಬೆಳ್ಳಿ ಲೋಕೇಶ್‌, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್‌, ಜಿಲ್ಲಾ ‍ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶೋಭಾರಾಣಿ ಇದ್ದರು.

ಅಲ್ಲಿಂದ ಕುಣಿಗಲ್‌ನ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ನಂತರ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಸ್ವಗ್ರಾಮದ ಬೆಟ್ಟದಕೋಟೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ರಮೇಶ್‌ ಗೌಡ ಮಗ ಶೋಭಿತ್‌ ಅವರು ಓದುತ್ತಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಬುಧವಾರ ಶೋಕಾಚರಣೆ ಆಚರಿಸಲಾಯಿತು.

ರಮೇಶ್‌ ಆತ್ಮಕ್ಕೆ ಶಾಂತಿ ಸಿಗಲಿ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ‘ರಮೇಶ್‌ಗೌಡ ಉತ್ಸಾಹಿ ಯುವಕರಾಗಿದ್ದರು. ಆದರೆ ಇಂದು ನಮ್ಮಿಂದ ದೂರವಾಗಿದ್ದಾರೆ’ ಎಂದರು.

‘ಅವರ ಕುಟುಂಬ ಹಾಗೂ ನಮ್ಮೆಲ್ಲರಿಗೂ ನೋವಿನ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಈ ನಷ್ಟವನ್ನು ತಡೆದುಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ನೀಡಲಿ’ ಎಂದು ನುಡಿದರು.

ದುರ್ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ. ಈ ಬಗ್ಗೆ ಸರ್ಕಾರ ನಿರ್ಧಾರ ತೆಗದುಕೊಳ್ಳಬೇಕು ಒಬ್ಬರ ತೀರ್ಮಾನಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT