ಶುಕ್ರವಾರ, ಜನವರಿ 24, 2020
21 °C

ರಂಗಭೂಮಿ ಎಂದಿಗೂ ನಶಿಸದು: ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಭೀಮಸೇನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜನಪದರು ಕಷ್ಟಪಟ್ಟು ಕಲಿತು, ಪ್ರಯೋಗಿಸಿದ ಫಲವಾಗಿ ಇಂದು ನಾಟಕರಂಗ ಉಳಿದುಕೊಂಡಿದೆ. ರಂಗಭೂಮಿ ಎಂದಿಗೂ ನಶಿಸುವುದಿಲ್ಲ ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಪ್ರೊ.ಭೀಮಸೇನ್ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ನಾಟಕಮನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಕೃಷ್ಣ ಸಂಧಾನ ಹಾಸ್ಯ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿಗೂ ಹಳ್ಳಿಗಾಡಿನ ಜನರು ಯಾವುದೇ ಫಲಾಪೇಕ್ಷೆಯಿಲ್ಲದೇ ನಾಟಕ ಪ್ರದರ್ಶಿಸುತ್ತಿರುವುದರಿಂದ ನಾಟಕರಂಗ ಉಳಿದಿದೆ. ಇಂತಹ ಪ್ರೋತ್ಸಾಹ ಇರುವವರೆಗೆ ನಾಟಕರಂಗ ನಶಿವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಕೃಷ್ಣ ಸಂಧಾನ ಜನರ ಮನಸ್ಸಿನಲ್ಲಿರುವ ನಾಟಕದ ಬಗೆಗೆ ಕೌತುಕ ತಣಿಸುವಂತಹ ಪ್ರಯೋಗವಾಗಿದ್ದು, ಇಂತಹ ಪ್ರಯೋಗವನ್ನು ತುಮಕೂರಿನ ಜನರಿಗೆ ತೋರುತ್ತಿರುವ ನಾಟಕ ಮನೆಯ ಕಾರ್ಯ ಅಭಿನಂದನೀಯ. ಹಳ್ಳಿಗರ ತ್ಯಾಗ ಪರಿಶ್ರಮದಿಂದಲೇ ಇಂದು ನಾವು ಇಲ್ಲಿ ನಿಂತಿದ್ದೇವೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ‘ಸಂಗೀತ, ನಾಟಕ, ಸಾಹಿತ್ಯ ಮನುಷ್ಯರನ್ನು ಮನುಷ್ಯರನ್ನಾಗಿ ಉಳಿಸುವ ಸಾಧನಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಈ ಬಗ್ಗೆ ಆಸಕ್ತಿ ಕಡಿಮೆ ಆಗುತ್ತಿರುವುದರಿಂದ ಸಮಾಜ ಅವನತಿಯತ್ತ ಸಾಗುತ್ತಿದೆ. ಇಂತಹ ಆಸಕ್ತಿಯನ್ನು ಉಳಿಸಿಕೊಂಡರೆ ಮಾತ್ರ ಸಮಾಜ ಉಳಿಯುತ್ತದೆ’ ಎಂದು ಹೇಳಿದರು.

ಒತ್ತಡದ ಜೀವನದಲ್ಲಿ ಹಾಸ್ಯ ನವೋಲ್ಲಾಸ ಒದಗಿಸುವುದರಿಂದ ಇಂದು ಜನರು ಹಾಸ್ಯ ನಾಟಕಗಳನ್ನು ನೋಡಲು ಮುಂದಾಗುತ್ತಿದ್ದಾರೆ. ಇಂತಹ ಚಟುವಟಿಕೆಗಳು ಹೆಚ್ಚಾಗಬೇಕಿದೆ. ದೃಶ್ಯ ಮಾಧ್ಯಮಗಳ ಪ್ರಭಾವಳಿಯಿಂದ ನಾಟಕ ರಂಗ ಕೈಯಲ್ಲಿಯೇ ದೊರೆಯುವಂತಾಗಿದೆ. ಜಿಲ್ಲೆಯಲ್ಲೂ ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾಗಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ನಾಟಕ ಮನೆ ಮಹಾಲಿಂಗು, ಮೆಳೇಹಳ್ಳಿ ದೇವರಾಜು, ಸಿದ್ದರಾಜು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು