ಬುಧವಾರ, ಆಗಸ್ಟ್ 21, 2019
28 °C
ಬುಕ್ಕ ಪಟ್ಟಣ ಅರಣ್ಯ ಪ್ರದೇಶದಲ್ಲಿ ತುಮಕೂರಿನ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆ ತಂಡಕ್ಕೆ ಸಿಕ್ಕ ಹಾವು

ಅಪರೂಪದ ಮೊಟ್ಟೆ ಭಕ್ಷಕ ಪ್ರಭೇದದ ಹಾವು ಪತ್ತೆ

Published:
Updated:
Prajavani

ತುಮಕೂರು: ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಬುಕ್ಕಪಟ್ಟಣ ಅರಣ್ಯ ಪ್ರದೇಶದಲ್ಲಿ 2 ಅಡಿ ಉದ್ದದ ಮೊಟ್ಟೆ ಭಕ್ಷಕ ಹಾವು (ಇಂಡಿಯನ್ ಎಗ್ಗ್ ಈಟರ್ ಸ್ನೇಕ್) ಇದರ ವೈಜ್ಞಾನಿಕ ಹೆಸರು 'ಎಲಾಚಿಸ್ಟೊಡಾನ್ ವೆಸ್ಟರ್ಮನ್ನಿ' ಮೊದಲ ಬಾರಿಗೆ ತುಮಕೂರಿನ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆ(ವಾರ್ಕೊ)ಯ ಸಚಿನ್, ಅಕ್ಷಯ್ ಹೇರಳೆ ಮತ್ತು ತಂಡದವರಿಗೆ ಪತ್ತೆಯಾಗಿದೆ.

ವಿಷಕಾರಿಯಲ್ಲದ ಈ ಹಾವು ಬಾಂಗ್ಲಾದೇಶ, ನೇಪಾಳ, ಮಧ್ಯ ಮತ್ತು ಪಶ್ಚಿಮ ಭಾರತ ಭಾಗದ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಮಾತ್ರ ಕಂಡು ಬರುತ್ತದೆ. ಈ ಹಾವುಗಳು ಕುರುಚಲು ಹಾಗೂ ಎಲೆ ಉದುರುವ ಒಣ ಕಾಡುಗಳ ಎತ್ತರದ ಮರದ ಪೋಟರೆಯಲ್ಲಿ, ಕಲ್ಲು ಬಂಡೆಗಳ ಸಂದಿಗಳಲ್ಲಿ ವಾಸವಾಗಿರುತ್ತವೆ.

ಮೊಟ್ಟೆ ಭಕ್ಷಕ ಹಾವು ಹಗಲು ಮತ್ತು ರಾತ್ರಿ ಸಂಚರಿಸುತ್ತವೆ. ಈ ಪ್ರಭೇದದ ಹಾವುಗಳು ಮರದಲ್ಲಿರುವ ಪಕ್ಷಿಗಳ ಮೊಟ್ಟೆಗಳನ್ನು ಮಾತ್ರ ತಿಂದು ಜೀವಿಸಿ 2 ರಿಂದ 2.5 ಅಡಿ ಉದ್ದ ಬೆಳೆಯುತ್ತದೆ ಎಂದು ತಂಡದ ಸದಸ್ಯರು ಹೇಳುತ್ತಾರೆ.

ಅಪಾಯದ ಅಂಚಿನಲ್ಲಿರುವ ಈ ಹಾವು ವನ್ಯಜೀವಿ ಸಂರಕ್ಷಣಾ ಕಾಯ್ದೆಯ (ಶೆಡ್ಯೂಲ್ 1)ರ ಅಡಿಯಲ್ಲಿ ಬರುತ್ತದೆ. ತುಮಕೂರು ಜಿಲ್ಲೆಯಲ್ಲಿ ಈವರೆಗೆ 30ಕ್ಕೂ ಹೆಚ್ಚು ಹಾವುಗಳಿದ್ದು ಇದು ಹೊಸದಾಗಿ ಸೇರ್ಪಡೆಯಾಗಿದ್ದಕ್ಕೆ ವನ್ಯಜೀವಿ ಪ್ರಿಯರಿಗೆ ಸಂತಸ ತಂದಿದೆ.

ಬುಕ್ಕಪಟ್ಟಣ ಅರಣ್ಯವನ್ನು ಇತ್ತೀಚೆಗಷ್ಟೇ ಚಿಂಕಾರ ವನ್ಯಜೀವಿಧಾಮ ಎಂದು ಘೋಷಿಸಲಾಗಿತ್ತು.ಈ ಪ್ರದೇಶದಲ್ಲಿ ಚಿಂಕಾರ, ಕತ್ತೆ ಕಿರುಬ, ಚಿರತೆ, ಕರಡಿ, ಕೃಷ್ಣಮೃಗ ಹಾಗೂ ಇನ್ನಿತರ ವನ್ಯ ಜೀವಿಗಳ ಆಶ್ರಯ ತಾಣವಾಗಿದೆ ಎಂದು ವಾರ್ಕೊ ಸಂಸ್ಥೆಯ ತಂಡದವರು ತಿಳಿಸಿದ್ದಾರೆ.

Post Comments (+)