ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: 17 ಚುನಾವಣೆಗಳಲ್ಲಿ ಈ ಬಾರಿಯದ್ದೇ ದಾಖಲೆ ಮತದಾನ !

1984ರಲ್ಲಿ ಶೇ 74 ಮತದಾನ ಬಳಿಕ ಗರಿಷ್ಠ ಮತದಾನ
Last Updated 2 ಮೇ 2019, 11:04 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ದಾಖಲೆ ಪ್ರಮಾಣದ ಮತದಾನವಾಗಿದೆ. ಶೇ 77.03ರಷ್ಟು ಮತದಾನ ಆಗಿದ್ದು, ಮತದಾನ ಜಾಗೃತಿ ಸಮಿತಿ, ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಈ ಪರಿಯ ಮತದಾನ ಹೆಚ್ಚಳಕ್ಕೆ ತಮ್ಮ ಶ್ರಮವೇ ಕಾರಣ ಎಂದು ಹೆಮ್ಮೆ ಪಡುತ್ತಿವೆ.

ಕೆಲವರು ಈ ಬಾರಿ ಚುನಾವಣೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸ್ಪರ್ಧಿಸಿದ್ದು, ಪ್ರತಿಸ್ಪರ್ಧಿ ಅಭ್ಯರ್ಥಿ ಬಿಜೆಪಿಯ ಜಿ.ಎಸ್.ಬಸವರಾಜ್ ಅವರು ತುರುಸಿನ ಸ್ಪರ್ಧಿಯಾಗಿದ್ದು, ಎರಡೂ ಕಡೆಯವರು ಮತದಾರರನ್ನು ಮತಗಟ್ಟೆಗೆ ತರಲು ಮಾಡಿದ ಸರ್ಕಸ್ ಕಾರಣ ಎಂದು ವಿಶ್ಲೇಷಿಸುತ್ತಿದ್ದಾರೆ.

ಅತ್ತ ಆಡಳಿತ ಯಂತ್ರ ಹೇಳುವುದೇ ಬೇರೆ. ನಗರ, ಪಟ್ಟಣ, ಹಳ್ಳಿಗಳಲ್ಲಿ ಮತದಾನ ಜಾಗೃತಿಯನ್ನು ಭಿನ್ನ ವಿಭಿನ್ನ ಮಾಧ್ಯಮಗಳ ಮೂಲಕ ಮನವರಿಕೆ ಮಾಡಿಕೊಟ್ಟಿದ್ದು, ಅಂಗವಿಕಲರೂ, ಅಸಹಾಯಕರು, ವೃದ್ಧರು ಮತಗಟ್ಟೆಗೆ ಬಂದು ಮತ ಚಲಾಯಿಸಲು ಕಲ್ಪಿಸಿದ ವಾಹನ, ಗಾಲಿ ಖುರ್ಚಿ ವ್ಯವಸ್ಥೆಯಂತಹ ಕ್ರಮಗಳು ಇದಕ್ಕೆ ಕಾರಣ ಎನ್ನುತ್ತಿದೆ.

1952ರಿಂದ ನಡೆದ ಯಾವ ಲೋಕಸಭಾ ಚುನಾವಣೆಯಲ್ಲೂ ತುಮಕೂರು ಕ್ಷೇತ್ರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮತದಾರರು ಉತ್ಸುಕತೆಯಿಂದ ಮತ ಚಲಾಯಿಸಿರಲಿಲ್ಲ ಎಂಬುದಕ್ಕೆ ಮತದಾನ ಪ್ರಮಾಣವೇ ಸಾಕ್ಷಿಯಾಗಿದೆ.

ಮತದಾನ ದಿನವಾದ ಗುರುವಾರ ಬೆಳಿಗ್ಗೆ 9 ಗಂಟೆಯಾದರೂ ಕೇವಲ 7.39 ರಷ್ಟು ಆಗಿದ್ದ ಮತದಾನ ಸಂಜೆ 6 ಗಂಟೆ ಹೊತ್ತಿಗೆ ಶೇ 77.03 ರಷ್ಟಾಗಿತ್ತು! ಅಲ್ಲದೇ ಮತಯಂತ್ರ, ಮತಖಾತ್ರಿ ಯಂತ್ರದಲ್ಲಿ ತಾಂತ್ರಿಕ ದೋಷ, ತುಮಕೂರು ನಗರ ಸೇರಿದಂತೆ ಸಂಜೆ 4.30ರ ಸುಮಾರು ಸುರಿದ ಮಳೆ ಸುರಿದು ಮತದಾನಕ್ಕೆ ಬರುವವರನ್ನು ಸ್ವಲ್ಪ ಹೊತ್ತು ಕಟ್ಟಿಹಾಕಿದ್ದರೂ ಮತದಾರರ ಉತ್ಸಾಹ ಮತದಾನ ಪ್ರಮಾಣ ಹೆಚ್ಚಳದಲ್ಲಿ ಎದ್ದು ಕಂಡಿದೆ.

ಮತದಾನ ದಿನವೇ ಸಂಜೆ 8 ಗಂಟೆ ಹೊತ್ತಿಗೆ ಮತದಾನ ಪ್ರಮಾಣ ನಿಖರ ಅಂಕಿ ಅಂಶ ಲಭಿಸಿದ್ದು, ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ, ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಅವರು ಖುಷಿ ವ್ಯಕ್ತಪಡಿಸಿದರು. ಉಭಯ ಮುಖಂಡರು ಶಾಂತಿಯುತ ಮತದಾನ ಆಗಿದ್ದಕ್ಕೆ, ಮತದಾನ ಪ್ರಮಾಣ ಹೆಚ್ಚಳ ಆಗಿದ್ದಕ್ಕೆ ಹಾಗೂ ಮತ ಚಲಾಯಿಸಿದವರಿಗೆ ಧನ್ಯವಾದಗಳನ್ನೂ ಸಲ್ಲಿಸಿದರು.

ತುಮಕೂರು ನಗರ ವಿಧಾನ ಸಭಾ ಕ್ಷೇತ್ರ ಹೊರತುಪಡಿಸಿ ಉಳಿದ 7 ವಿಧಾನ ಸಭಾ ಕ್ಷೇತ್ರಗಳಲ್ಲಿ ಶೇ 70ಕ್ಕಿಂತ, 80ಕ್ಕಿಂತ ಹೆಚ್ಚಿನ ಪ್ರಮಾಣದ ಮತದಾನ ಆಗಿದ್ದು, ಮತದಾರರನ್ನು ಮತಗಟ್ಟೆಗೆ ತರಲು ಪರಿಶ್ರಮಪಟ್ಟು ಬೆವರು ಹರಿಸಿದವರಿಗೆ ಒಂದಿಷ್ಟು ಸಮಾಧಾನ ತಂದಂತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ದಾಖಲೆ ಮತದಾನ ಆಗಿರುವುದು ಮತದಾನ ಜಾಗೃತಿ ಸಮಿತಿಗೆ ಸಾಧನೆಯ ಗರಿ ಇಟ್ಟಂತಾಗಿದೆ.

1984ರಲ್ಲಿ ಶೇ 74.22ರಷ್ಟು ಮತದಾನ ದಾಖಲಾಗಿದ್ದೇ ಗರಿಷ್ಠ ಮತದಾನ ಆಗಿತ್ತು. ಬಳಿಕ 1989ರಲ್ಲಿ , 1999ರಲ್ಲಿ ಶೇ 73 ಮತದಾನ ದಾಖಲಾಗಿತ್ತು. ಅದನ್ನು ಬಿಟ್ಟರೆ 2014ರಲ್ಲಿ ಶೇ 72.57ರಷ್ಟು ಮತದಾನ ಆಗಿತ್ತು. ಈಗ ಆಗಿರುವ ಶೇ 77.03 ಮತದಾನ ಕ್ಷೇತ್ರದ ಒಟ್ಟು ಚುನಾವಣೆಗಳಲ್ಲೇ ಗರಿಷ್ಠ ಮತದಾನ ಆಗಿದೆ.

ವರ್ಷ ಮತದಾನ ಪ್ರಮಾಣ

1952 59.71
1957 50.83
1962 62.12
1967 63.23
1971 68.06
1977 69.50
1980 67.86
1984 74.22
1989 73.08
1991 62.04
1996 65.18
1998 67.44
1999 73.68
2004 70.78
2009 64.80
2014 72.57
2019 77.03

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT