ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಅಲ್ಪಸಂಖ್ಯಾತರ ಕಡೆಗಣನೆ, ಅಸಮಾನತೆ ತುಂಬಿ ತುಳುಕುತ್ತಿದೆ: ನಟ ಚೇತ‌ನ್

ಪದವಿ ಕಾಲೇಜುಗಳಿಗೆ ಕನ್ನಡ ಸಾಹಿತ್ಯ ಪುಸ್ತಕ ವಿತರಣೆ
Last Updated 31 ಜನವರಿ 2023, 15:32 IST
ಅಕ್ಷರ ಗಾತ್ರ

ತುಮಕೂರು: ‘ದೇಶದಲ್ಲಿ ಮುಸ್ಲಿಮರು, ಕ್ರೈಸ್ತರು, ಧಾರ್ಮಿಕ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದ್ದು, ಇಂತಹ ಸಿದ್ಧಾಂತ ನಮಗೆ ಬೇಕಾಗಿಲ್ಲ. ಸಮಾಜದಲ್ಲಿ ಅಸಮಾನತೆ ತುಂಬಿ ತುಳುಕುತ್ತಿದೆ’ ಎಂದು ನಟ ಚೇತನ್‌ ಅಹಿಂಸಾ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ನಟ ಚೇತನ್ ಅಹಿಂಸಾ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಪದವಿ ಕಾಲೇಜುಗಳಿಗೆ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಕೊಡುಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರಸ್ತುತ ಸಮಾಜದಲ್ಲಿ ಬುದ್ಧ, ಬಸವಣ್ಣ, ಕುವೆಂಪು ಅವರ ವಿಚಾರಗಳನ್ನು ಹಿಂಬದಿಗೆ ಸರಿಸಿ, ಉದಾರವಾದಿ, ಯಥಾಸ್ಥಿತಿವಾದವನ್ನು ಮುನ್ನೆಲೆಗೆ ತರಲಾಗುತ್ತಿದೆ. ಸರ್ಕಾರದಿಂದ ಬರುವ ಪುಸ್ತಕಗಳಲ್ಲಿ ಅನೇಕ ವಿಚಾರಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಬಂಡವಾಳ ಶಾಹಿ, ಬ್ರಾಹ್ಮಣಶಾಹಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಲು, ಹೋರಾಟ ರೂಪಿಸಲು ಸಂಘಟನೆ ಅಗತ್ಯ. ದೇಶದ ಭವಿಷ್ಯಕ್ಕಾಗಿ ಸೈದ್ಧಾಂತಿಕ ಹೋರಾಟ ಮುಖ್ಯ’ ಎಂದು ಹೇಳಿದರು.

ಇಂದಿನ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ದೊರೆಯದಾಗಿದೆ. 48 ವರ್ಷಗಳಿಂದ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಇಷ್ಟು ವರ್ಷಗಳ ಕಾಲ ಪುರುಷರು ಗೌರವಧನಕ್ಕೆ ಕೆಲಸ ಮಾಡಿಕೊಂಡಿದ್ದರೆ ಅವರಿಗೆ ಸರ್ಕಾರ ನಿಗದಿತ ವೇತನ ನೀಡುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.

ಲೇಖಕ ರವಿಕುಮಾರ್ ನೀಹ, ‘ಪ್ರಸ್ತುತ ಪುಸ್ತಕಗಳನ್ನು ಓದುವುದರಿಂದ ವಿಮುಖರಾಗುತ್ತಿದ್ದಾರೆ. ಮೊಬೈಲ್‌ ಮುಖ್ಯ ಎನಿಸುತ್ತಿದೆ. ಮುದ್ರಿತ ಪುಸ್ತಕ ಕೊಡುವ ಸಂವೇದನೆ ಯಾವುದೇ ಆಧುನಿಕ ಆವಿಷ್ಕಾರ ಕೊಡಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

ವೈದ್ಯ ಅಮರ್, ‘ಸಂವಿಧಾನ ನಮಗೆ ನೀಡಿರುವ ರಾಜಕೀಯ ಸಮಾನತೆಯನ್ನು ಬಂಡವಾಳ ಶಾಹಿಗಳು, ಅಧಿಕಾರದಲ್ಲಿ ಇರುವವರು ಕದಿಯಲು ಮುಂದಾಗಿದ್ದಾರೆ. ನಾವು ಎಚ್ಚೆತ್ತುಕೊಳ್ಳಬೇಕಿದೆ’ ಎಂದು ತಿಳಿಸಿದರು.

ಸರ್ವೋದಯ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಸುಬ್ಬರಾವ್‌, ಉಪನ್ಯಾಸಕ ಎಂ‌.ಎಸ್.ಶ್ರೀವತ್ಸ, ಶ್ರೀಕೃಷ್ಣ ವಿದ್ಯಾಸಂಸ್ಥೆ ಕಾರ್ಯದರ್ಶಿ ಮರಿಚೆನ್ನಮ್ಮ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಗ್ರಂಥಾಲಯದ ಹಿರಿಯ ಗ್ರಂಥ ಪಾಲಕ ಕೃಷ್ಣಮೂರ್ತಿ, ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜಿ.ಕೆ.ನಾಗಣ್ಣ, ವಕೀಲ ರಂಗಧಾಮಯ್ಯ ಇತರರು ಇದ್ದರು.

ಬಣ್ಣ ಬಳಿಯುವುದರಲ್ಲಿ ಮುಳುಗಿದ ಸರ್ಕಾರ
‘ಪಠ್ಯ ಪುಸ್ತಕ ಪರಿಷ್ಕರಣೆ, ಧರ್ಮ, ಜಾತಿ, ಶಾಲೆಗಳಿಗೆ ಬಣ್ಣ ಬಳಿಯುವ ವಿಷಯದಲ್ಲಿ ಸರ್ಕಾರ ಮುಳುಗಿ ಹೋಗಿದೆ. ಕಾಲೇಜುಗಳ ಸುಧಾರಣೆಗೆ ಒತ್ತು ನೀಡುತ್ತಿಲ್ಲ. ಕೆ.ಬಿ.ಸಿದ್ದಯ್ಯ, ಕನ್ನಡದ ಅಸ್ಮಿತೆ ಬರಗೂರು ರಾಮಚಂದ್ರಪ್ಪ ಅವರು ಹುಟ್ಟಿದ ನಾಡು. ಇಂತಹ ಜಿಲ್ಲಾ ಕೇಂದ್ರದ ಪದವಿ ಕಾಲೇಜುಗಳಿಗೆ ಪುಸ್ತಕ ಅಭಾವವಿದೆ ಎಂದರೆ ಏನೆಂದು ತಿಳಿಯಬೇಕು’ ಎಂದು ಹೋರಾಟಗಾರ ಉಜ್ಜಜ್ಜಿ ರಾಜಣ್ಣ ಪ್ರಶ್ನಿಸಿದರು.

ಆಡಳಿತ ವ್ಯವಸ್ಥೆ, ಜನಪ್ರತಿನಿಧಿಗಳನ್ನು ಪ್ರಶ್ನಿಸಲು ಉತ್ತಮ ಪುಸ್ತಕಗಳನ್ನು ಓದಬೇಕು. ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಾಹಿತ್ಯದ ಓದುಗರಾಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT