ಭಾನುವಾರ, ಅಕ್ಟೋಬರ್ 24, 2021
25 °C

ರಸ್ತೆ ಒತ್ತುವರಿ ತೆರವಿಗೆ ಕರ್ನಾಟಕ ಮಹಾಜನ್ ಪರಿವಾರ ಸಮಿತಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಭಾರತೀನಗರದಿಂದ ಎಸ್ಐಟಿ ಮುಂಭಾಗದ ಮುಖ್ಯರಸ್ತೆ ಸಂಪರ್ಕಿಸುವ 40 ಅಡಿ ಸಂಪರ್ಕ ರಸ್ತೆ ಒತ್ತುವರಿಯಾಗಿದ್ದು, ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಮಹಾಜನ್ ಪರಿವಾರ ಸಮಿತಿ ವತಿಯಿಂದ ಎಸ್ಐಟಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಪರಿವಾರ ಸಮಿತಿ ಅಧ್ಯಕ್ಷ ಹಂಚಿಹಳ್ಳಿ ರಾಮಸ್ವಾಮಿ, ‘ಎಸ್ಐಟಿ ಮುಂಭಾಗದಿಂದ ಹನುಮಂತಪುರ, ವಿದ್ಯಾನಗರ ಮತ್ತಿತರ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದೆ. ದಾಖಲೆಗಳ ಪ್ರಕಾರ 40 ಅಡಿ ರಸ್ತೆ ಇದೆ. ಆದರೆ ರಸ್ತೆಯ ಎರಡು ಬದಿ ಒತ್ತುವರಿಯಾಗಿ ಈಗ 20 ಅಡಿಗೆ ಇಳಿದಿದೆ. ಒತ್ತುವರಿ ತೆರವು ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಮಹಾನಗರ ಪಾಲಿಕೆ ಕ್ರಮ ಕೈಗೊಂಡಿಲ್ಲ. ಈಗ ಏಕಾಏಕಿ 20 ಅಡಿ ರಸ್ತೆಯನ್ನೇ ಅಭಿವೃದ್ಧಿಪಡಿಸಲು ಕಾಮಗಾರಿ ಆರಂಭಿಸಲಾಗುತ್ತಿದೆ. ಮೊದಲು ಒತ್ತುವರಿ ತೆರವುಗೊಳಿಸಿ, ನಂತರ ಕಾಮಗಾರಿ ಆರಂಭಿಸಬೇಕು’ ಎಂದು ಆಗ್ರಹಿಸಿದರು.

ಪರಿವಾರದ ಗೌರವಾಧ್ಯಕ್ಷ ಎಂ.ವಿ.ರಾಘವೇಂದ್ರಸ್ವಾಮಿ, ‘ಕೆಲವು ಪ್ರಭಾವಿಗಳು ರಸ್ತೆ ಒತ್ತುವರಿ ಮಾಡಿಕೊಂಡಿದ್ದು, 20 ಅಡಿಗೆ ಇಳಿದಿದೆ. ಪಾಲಿಕೆ ಒತ್ತುವರಿ ತೆರವು ಮಾಡದೆ ಕಾಮಗಾರಿ ನಡೆಸಲು ಮುಂದಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.

ಪರಿವಾರದ ಮುಖಂಡ ಇ.ಟಿ.ನಾಗರಾಜು, ‘ರಸ್ತೆ ಅತ್ಯಂತ ಕಿರಿದಾಗಿದ್ದು, ದೊಡ್ಡ ವಾಹನಗಳ ಸಂಚಾರ ಕಷ್ಟಕರವಾಗಿದೆ. ಅಪಘಾತಗಳು ಸಂಭವಿಸುತ್ತಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದರು.

ಪರಿವಾರ ಸಮಿತಿ ಮುಖಂಡರಾದ ಮಂಜುನಾಥ್, ಮಧುಸೂದನ್, ಶಾರದಮ್ಮ, ಗಂಗಮ್ಮ, ನಾಗರತ್ನ, ಕಮಲಮ್ಮ, ದೇವಮ್ಮ, ಮಂಜು ಮತ್ತಿತರರು ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು