ಮಂಗಳವಾರ, ಸೆಪ್ಟೆಂಬರ್ 28, 2021
25 °C
ಮುಖ್ಯಾಧಿಕಾರಿ ವಿರುದ್ಧ ಅವ್ಯವಹಾರ ತಡೆಗೆ ವಿಫಲ– ಆರೋಪ: ವಿವಿಧ ಸಂಘ, ಸಂಸ್ಥೆಗಳಿಂದ ಪ್ರತಿಭಟನೆ

ಪ.ಪಂ ಮುಖ್ಯಾಧಿಕಾರಿ ಅಮಾನತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ಪಟ್ಟಣ ಪಂಚಾಯಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಲು ಹಾಗೂ ಸಾರ್ವಜನಿಕರಿಗೆ ಸೌಲಭ್ಯ ಒದಗಿಸಲು ಮುಖ್ಯಾಧಿಕಾರಿ ವಿಫಲರಾಗಿದ್ದಾರೆ. ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.

ಜಯಕರ್ನಾಟಕ ಸಂಘಟನೆ, ರೈತ ಸಂಘ, ಹಸಿರು ಸೇನೆ, ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ, ರಾಜ್ಯ ಕಾರ್ಮಿಕರ ಪರಿಷತ್ ಹಾಗೂ ಕನ್ನಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪಟ್ಟಣ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಆರ್.ವಿಜಯಕುಮಾರ್ ಮಾತನಾಡಿ, ಪಟ್ಟಣದ ದಬ್ಬೇಘಟ್ಟ ರಸ್ತೆ ವಿಸ್ತರಣೆಯಾಗುತ್ತಿದ್ದು, ರಸ್ತೆ ಬದಿ ಇರುವ ಕಟ್ಟಡಗಳನ್ನು ತೆರವುಗೊಳಿಸಿಲ್ಲ. ಮುಖ್ಯಾಧಿಕಾರಿ ಮಂಜುಳಾದೇವಿ ಅಂಗಡಿ ಮಾಲೀಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ದಬ್ಬೇಘಟ್ಟ ರಸ್ತೆ ವಿಸ್ತರಣೆ ಮಾಡಿಸಬೇಕು. ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಿಸಿರುವ ಶೌಚಾಲಯಗಳು ಸಾರ್ವಜನಿಕರ ಉಪಯೋಗಕ್ಕೆ ಮುಕ್ತವಾಗಬೇಕು. ಸ್ಥಗಿತಗೊಂಡಿರುವ ಪಟ್ಟಣದ ರಾಜಕಾಲುವೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಪಟ್ಟಣದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಕೋಳಿ ಅಂಗಡಿ ಹಾಗೂ ಮಾಂಸದ ಅಂಗಡಿಗಳ ತ್ಯಾಜ್ಯ ಸಾಗಿಸುವ ನೆಪದಲ್ಲಿ ಅವ್ಯವಹಾರ ನಡೆಯುತ್ತಿದೆ. ಇದನ್ನು ತಡೆಯಬೇಕು. ಕೋಳಿ, ಮಾಂಸದ ಅಂಗಡಿಗಳನ್ನು ಪಟ್ಟಣದ ಹೊರ ಭಾಗಕ್ಕೆ ಸ್ಥಳಾಂತರಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದರೂ ಪಟ್ಟಣ ಪಂಚಾಯಿತಿ ನಿರ್ಲಕ್ಷಿಸಿದೆ ಎಂದು ದೂರಿದರು.

ಇ– ಖಾತೆ, ಆಸ್ತಿ ಖರೀದಿ, ಖಾತೆ ವರ್ಗಾವಣೆ, ಹೊಸ ಬಡಾವಣೆ ಪರಿವರ್ತನೆ, ಅಂಗಡಿ, ಮನೆ ಪರವಾನಗಿಯಲ್ಲಿ ಲಂಚಗುಳಿತನ ಹೆಚ್ಚಿದೆ ಎಂದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಶಿರಸ್ತೇದಾರ್‌ ಬಸವರಾಜು ಅವರಿಗೆ ಪ್ರತಿಭಟನಾ ನಿರತರು ಮನವಿ ಸಲ್ಲಿಸಿದರು.

ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಸಮೀರ್, ಕಾರ್ಯಧ್ಯಕ್ಷ ನಂದೀಶ್, ಕಾರ್ಯದರ್ಶಿ ಕೃಷ್ಣಮೂರ್ತಿ, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಡ್ಯಾನಿಯಲ್, ಉಪಾಧ್ಯಕ್ಷ ಪುಟ್ಟರಾಜು, ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ತಾಲ್ಲೂಕು ಅಧ್ಯಕ್ಷ ಮೋಹನ್, ಸ್ವರ್ಣಕುಮಾರ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಶಿವರಾಜು, ಮುಖಂಡ ಉಗ್ರೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.