ಕೃಷಿ ಸಮಸ್ಯೆ ನಿವಾರಣೆಗೆ ಆಗ್ರಹ

7
ರೈತ, ಕಾರ್ಮಿಕ ಹಾಗೂ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

ಕೃಷಿ ಸಮಸ್ಯೆ ನಿವಾರಣೆಗೆ ಆಗ್ರಹ

Published:
Updated:
Prajavani

ತುಮಕೂರು: ಜಿಲ್ಲೆಯಲ್ಲಿ ಬರ ಮತ್ತು ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ರೈತ, ಕಾರ್ಮಿಕ ಹಾಗೂ ಪ್ರಗತಿಪರ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು.

ನಗರದ ಟೌನ್‌ಹಾಲ್‌ ವೃತ್ತದಲ್ಲಿ ಸಮಾವೇಶಗೊಂಡ ಎಲ್ಲಾ ಪ್ರತಿಭಟನಕಾರರು ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿಗೆ ತೆರಳಿ ಅಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ಜಿಲ್ಲೆಯಲ್ಲಿ ಬರದಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ರೈತರು ಪರಿತ‍ಪಿಸುತ್ತಿದ್ದಾರೆ. ತುರ್ತಾಗಿ ಗೋಶಾಲೆಗಳನ್ನು ತೆರೆದು ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ಹೇಮಾವತಿ ನಾಲೆಯ 25 ಟಿಎಂಸಿ ನೀರಿನ ಪಾಲಿನಲ್ಲಿ 15 ಟಿಎಂಸಿ ನೀರು ಹರಿಯುತ್ತಿದ್ದು ಲೆಕ್ಕದಲ್ಲಿ ಮಾತ್ರ ತೋರಿಸಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ನೀರು ಹರಿಸಿ ಜಿಲ್ಲೆಯ ಕೆರೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿದರು.

‘ಕೃಷಿ ಮತ್ತು ಕೃಷಿಕರು ಬಿಕ್ಕಟ್ಟು ಎದುರಿಸುತ್ತಿದ್ದು, ರೈತರು ಕೃಷಿಗಾಗಿ ಹೂಡಿದ ಬಂಡವಾಳವೂ ಬಾರದೆ ಸಮಸ್ಯೆಗಳ ಸುಳಿಯಲ್ಲಿದ್ದಾರೆ. ಈ ಬಗ್ಗೆ ಗಮನಹರಿಸದ ರಾಜಕಾರಣಿಗಳು ರೆಸಾರ್ಟ್ ರಾಜಕೀಯದಲ್ಲಿ ತೊಡಗಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಆರೋಪಿಸಿದರು.

ಬೆಳೆಗಳ ಸಂರಕ್ಷಣೆಗಾಗಿ 1500 ಅಡಿ ಬೋರ್‌ವೆಲ್ ಕೊರೆದರೂ ನೀರು ಸಿಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ 3.5 ಲಕ್ಷ ಮಂದಿ ರೈತರು, ಕರ್ನಾಟಕದಲ್ಲಿ 19 ಸಾವಿರ, ಜಿಲ್ಲೆಯಲ್ಲಿ 100 ಕ್ಕೂ ಹೆಚ್ಚು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಕಾರ್ಯದರ್ಶಿ ಬಿ.ಉಮೇಶ್, ಪ್ರಾಂತ ರೈತ ಸಂಘ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರೊ.ಕೆ.ದೊರೈರಾಜ್ ಮಾತನಾಡಿದರು. ಸಿಐಟಿಯು ಮುಖಂಡರಾದ ನೌಷಾದ್ ಸೆಹಗನ್, ಎನ್.ಕೆ.ಸುಬ್ರಮಣ್ಯ, ಖಲೀಲ್, ಶಂಕರಪ್ಪ, ಟಿ.ಎಂ.ಗೋವಿಂದರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !