ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ‘ಕಲ್ಯಾಣ’ ಮರೆತ ಇಲಾಖೆ

ಕೆಡಿಪಿ ಸಭೆಯಲ್ಲಿ ಅಧಿಕಾರಿ ವಿರುದ್ಧ ಗುಡುಗಿದ ಸಚಿವ ಜೆ.ಸಿ. ಮಾಧುಸ್ವಾಮಿ
Last Updated 24 ಜುಲೈ 2021, 4:30 IST
ಅಕ್ಷರ ಗಾತ್ರ

ತುಮಕೂರು: ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಭಿವೃದ್ಧಿ ಕೆಲಸಗಳು ಸಕಾಲಕ್ಕೆ ನಡೆಯದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಶುಕ್ರವಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೆಡಿಪಿ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಹಾಸ್ಟೆಲ್‌ಗಳ ಕಟ್ಟಡ, ಸಮುದಾಯ ಭವನಗಳ ನಿರ್ಮಾಣ, ಸ್ಮಶಾನಗಳಿಗೆ ತಂತಿ ಬೇಲಿ ಹಾಕಿ ಭದ್ರತೆ ಒದಗಿಸದಿರುವ ವಿಚಾರ ಪ್ರಸ್ತಾಪವಾಯಿತು.

‘ಇಲಾಖೆಯಲ್ಲಿ ಕೋಟಿಗಟ್ಟಲೆ ಹಣವಿದ್ದರೂ ಖರ್ಚುಮಾಡಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಹಾಸ್ಟೆಲ್, ಸಮುದಾಯ ಭವನಗಳನ್ನು ಪೂರ್ಣಗೊಳಿಸಲು ಇನ್ನೂ ಎಷ್ಟು ವರ್ಷಗಳು ಬೇಕಾಗುತ್ತವೆ. ಸ್ಮಶಾನಗಳ ರಕ್ಷಣೆಯೂ ಸಾಧ್ಯವಾಗಿಲ್ಲ. ಪರಿಶಿಷ್ಟರು, ಬಡವರು ನೆಮ್ಮದಿಯಿಂದ ಶವ ಸಂಸ್ಕಾರ ಮಾಡಲೂ ಅವಕಾಶ ಕಲ್ಪಿಸಿಲ್ಲ’ ಎಂದು ಸಚಿವರು ಇಲಾಖೆ ಅಧಿಕಾರಿ ಪ್ರೇಮ ಅವರನ್ನು ಪ್ರಶ್ನಿಸಿದರು. ‘ಇಲಾಖೆಯಲ್ಲಿ ನನಗಿಂತ ನಿಮಗೆ ಹೆಚ್ಚು ಪ್ರಭಾವ ಇದೆ. ಪ್ರಗತಿ ಸಾಧ್ಯವಾಗದಿದ್ದರೆ ಇಲಾಖೆಯಲ್ಲಿ ನಿಮ್ಮ ಕೆಲಸ ಏನು? ಪ್ರಜ್ಞೆ ಇಲ್ಲದೆ ಕೆಲಸ ಮಾಡುತ್ತಿದ್ದೀರಿ, ಇದು ಕೆಲಸ ಮಾಡುವ ರೀತಿಯೇ? ಎಲ್ಲಿಗೆ ಹೋಗುತ್ತಿದೆ ಆಡಳಿತ? ನಾನು ಕುರ್ಚಿಯಿಂದ ಎದ್ದು ಬಂದರೆ ಏನಾಗುತ್ತದೆ ಗೊತ್ತಾ?’ ಎಂದು ಎಚ್ಚರಿಕೆ ನೀಡಿದರು.

ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಅಧಿಕಾರಿಯನ್ನು ನಿಲ್ಲಿಸಿಕೊಂಡು ತರಾಟೆಗೆ ತೆಗೆದು
ಕೊಂಡರು. ಪಾವಗಡಕ್ಕೆ ಉಪಮುಖ್ಯ
ಮಂತ್ರಿ ಗೋವಿಂದ ಕಾರಜೋಳ ಅವರನ್ನು ಕರೆಸಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ಕೊಡಿಸಿದ್ದೀರಿ. ಈವರೆಗೂ ನಿರ್ಮಾಣ ಕೆಲಸ ಆರಂಭವಾಗಿಲ್ಲ. ಈಗ ನೋಡಿದರೆ ನಿವೇಶನ ವಿವಾದದಿಂದಾಗಿ ಕೆಲಸ ಪ್ರಾರಂಭಿಸಲು ತಡವಾಯಿತು ಎಂದು ಹೇಳುತ್ತೀರಿ. ಚಾಲನೆ ಕೊಡಿಸುವ ಮುನ್ನ ಸಮಸ್ಯೆ ಬಗೆಹರಿಸಲು ಏನು ಮಾಡುತ್ತಿದ್ದೀರಿ ಎಂದು ಪಾವಗಡ ತಹಶೀಲ್ದಾರ್ ಸಹಿತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಗುಡುಗಿದರು.

ಗಿಡ ನೆಡಿ: ಹೆದ್ದಾರಿ ನಿರ್ಮಾಣ, ವಿಸ್ತರಣೆ ಸಮಯದಲ್ಲಿ ಮರಗಳನ್ನು ಕಡಿಯಲಾಗಿದೆ. ಆದರೆ ಮತ್ತೆ ಅಲ್ಲಿ ಸಸಿಗಳನ್ನು ನೆಟ್ಟಿಲ್ಲ. ಆ ಕೆಲಸವನ್ನು ತಕ್ಷಣ ಮಾಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT