ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಮನೆ ಮೇಲೆ ದಾಳಿಗೆ ಅಸಮಾಧಾನ

ಮಾದಿಗ ಸಮುದಾಯದಿಂದ ಸಚಿವ ಜೆ.ಸಿ. ಮಾಧುಸ್ವಾಮಿಗೆ ಸನ್ಮಾನ
Last Updated 30 ಮಾರ್ಚ್ 2023, 4:39 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಪರಿಶಿಷ್ಟರ ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ಯಾರಿಗೆ ಅನುಕೂಲವಾಗಿತ್ತೋ ಅವರೇ ಇಂದು ಬಿ.ಎಸ್‌. ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ಹೊಡೆಯುತ್ತಿದ್ದಾರೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಸದಾಶಿವ ವರದಿ ಜಾರಿ ಕುರಿತು ನೇಮಕವಾಗಿದ್ದ ಸಂಪುಟ ಉಪ ಸಮಿತಿ ಅಧ್ಯಕ್ಷರಾಗಿ ತೆಗೆದುಕೊಂಡ ತೀರ್ಮಾನ ಸ್ವಾಗತಿಸಿ ಮಾದಿಗ ದಂಡೋರ ಸಮಿತಿ, ಮಾದಿಗ ಮೀಸಲು ಹೋರಾಟ ಸಮಿತಿ, ಛಲವಾದಿ ಮಹಾಸಭಾ ಹಾಗೂ ಪರಿಶಿಷ್ಟ ಸಮುದಾಯದ ಮೂವರು ಸ್ವಾಮೀಜಿಗಳು ಹಾಗೂ ಮುಖಂಡರು ಬುಧವಾರ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಎಲ್ಲರೂ ಸಮಾನರೆಂಬ ಭಾವನೆ ಸಮಾಜದಲ್ಲಿ ಬರುವವರೆಗೂ ಶಕ್ತಿ ಇಲ್ಲದವರಿಗೆ ಮೀಸಲಾತಿ ಅನಿವಾರ್ಯ. ನಿಜವಾದ ಅವಕಾಶ ವಂಚಿತರನ್ನು ಒಂದು ಹೆಜ್ಜೆ ದಾಟಿಸಿದರೆ ಮುಂದೆ ಹೋಗುತ್ತಾರೆ. ಇಂಥವರನ್ನು ಮುಂದಕ್ಕೆ ಕರೆದೊಯ್ಯುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರದ ಒಳಮೀಸಲು ತೀರ್ಮಾನದಿಂದ ಶೋಷಿತ ಸಮುದಾಯಕ್ಕೆ ಸೇರಬೇಕಾದುದು ಸೇರಿದೆ. ಇದರಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಗೋವಿಂದ ಕಾರಜೋಳ ಅವರ ಪಾತ್ರ ದೊಡ್ಡದಿದೆ. ನನ್ನ ಪಾತ್ರವೇನೂ ಇಲ್ಲ. ಸಂವಿಧಾನ ಹೇಳಿದಂತೆ ಸಮಸ್ಯೆ ಪರಿಹರಿಸುವ ಕೆಲಸ ಮಾಡಿದ್ದೇನೆ’ ಎಂದರು.

ರಾಜ್ಯ ಸರ್ಕಾರದ ಕ್ರಮಕ್ಕೆ ಸಂವಿಧಾನದ ರಕ್ಷಣೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸಚಿವ ನಾರಾಯಣಸ್ವಾಮಿ ಕೇಂದ್ರ ಮಟ್ಟದಲ್ಲಿ ಪ್ರಯತ್ನ ಮಾಡಬೇಕು. ಜತೆಗೆ ಎಲ್ಲರೂ ಸೇರಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ಅಡಚಣೆಗೆ ಅವಕಾಶವಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಚಿತ್ರದುರ್ಗದ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, 40 ವರ್ಷಗಳ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಸಚಿವ ಮಾಧುಸ್ವಾಮಿ ಅವರ ಬದಲು ಬೇರೆಯವರಿಗೆ ಜವಾಬ್ದಾರಿ ವಹಿಸಿದ್ದರೆ ಈ ಕೆಲಸ ಕಷ್ಟವಾಗುತ್ತಿತ್ತು. ಸಚಿವರು ತೆಗೆದುಕೊಂಡ ನಿರ್ಣಯ ಸರಿಯಾಗಿದೆ. ಸಂಘ ಪರಿವಾರದ ನಾಯಕರು, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ತುಂಬು ಹೃದಯದಿಂದ ಬೆಂಬಲ ನೀಡಿದ್ದಾರೆ. ಇದೊಂದು ಐತಿಹಾಸಿಕ ತೀರ್ಮಾನ ಎಂದು ಬಣ್ಣಿಸಿದರು.

ಕೋಡಿಹಳ್ಳಿ ಆದಿಜಾಂಬವ ಪೀಠದ ಷಡಕ್ಷರ ಮುನಿ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವ ನಾಗೀದೇವ ಸ್ವಾಮೀಜಿ ಮಾತನಾಡಿ, ಸರ್ಕಾರ ಕೈಗೊಂಡಿರುವ ಐತಿಹಾಸಿಕ ತೀರ್ಮಾನವನ್ನು ಸ್ವಾಗತಿಸಿ ಸಚಿವರನ್ನು ಮುಕ್ತ ಕಂಠದಿಂದ ಪ್ರಶಂಸಿದರು.

ಸಮುದಾಯದ ಮುಖಂಡರಾದ ಗಂಗಹನುಮಯ್ಯ, ವೈ.ಎಚ್‌. ಹುಚ್ಚಯ್ಯ, ವೆಂಕಟರಾಮಯ್ಯ, ವೆಂಕಟೇಶ್‌, ಮಾದಿಗ ದಂಡೋರ ರಾಜ್ಯ ಪ್ರಧಾನ ‌ಕಾರ್ಯದರ್ಶಿ ಪ್ರಕಾಶ್‌, ದಂಡೋರದ ರಾಜ್ಯ ಜಂಟಿ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT