ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಲ್ಲಿ ಗೌಡರ ಸೋಲಿಗೆ ಸೇಡು ತೀರಿಸಿಕೊಳ್ಳಿ: ಎಚ್.ಡಿ.ಕುಮಾರಸ್ವಾಮಿ

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ
Last Updated 24 ನವೆಂಬರ್ 2021, 4:00 IST
ಅಕ್ಷರ ಗಾತ್ರ

ತುಮಕೂರು: ‘ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಸೋಲಿಗೆ ಕಾರಣರಾದವರಿಗೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

‘ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ದೇವೇಗೌಡರು ಸಾಕಷ್ಟು ನೋವು ಅನುಭವಿಸಿದರು. ಮನಸ್ಸಿನ ಮೇಲೆ ಆಗಿರುವ ಆಘಾತದಿಂದ ಇನ್ನೂ ಹೊರ ಬರಲು ಸಾಧ್ಯವಾಗಿಲ್ಲ. ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಗೌಡರು ನೋವಿನಿಂದ ಹೊರ ಬರುವಂತೆ ಮಾಡಬೇಕು’ ಎಂದರು.

ಜೆಡಿಎಸ್ ಅಭ್ಯರ್ಥಿ ಆರ್‌.ಅನಿಲ್ ಕುಮಾರ್ ಪರ ಮಂಗಳವಾರ ಹಮ್ಮಿಕೊಂಡಿದ್ದ ‘ಜನತಾ ಸಂಗಮ’ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಅವರ ಹೆಸರು ಹೇಳದೆ ಪರೋಕ್ಷ ವಾಗ್ದಾಳಿ ನಡೆಸಿದರು.

‘ತುಮಕೂರು ಜಿಲ್ಲೆಯ ನೀರಾವರಿ ವಿಚಾರದಲ್ಲಿ ನಮ್ಮ ಕುಟುಂಬ ಎಂದೂ ರಾಜಕಾರಣ ಮಾಡಿಲ್ಲ. ಜಿಲ್ಲೆಗೆ ದ್ರೋಹ ಬಗೆದಿಲ್ಲ. ಆದರೆ ಈ ವಿಚಾರ ಮುಂದಿಟ್ಟುಕೊಂಡು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಗೌಡರ ಸೋಲಿಗೆ ಕಾರಣರಾದವರು ಯಾವ ರೀತಿ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ನಿಮಗೆಲ್ಲ ಗೊತ್ತಿದೆ’ ಎಂದರು.

‘ನಾವು ನಿಮಗೆ ಏನು ಅನ್ಯಾಯ ಮಾಡಿದ್ದೇವೆ. ನೀವು, ಬೆಳ್ಳಾವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಮಯದಲ್ಲಿ ದೇವೇಗೌಡರು ದೊಡ್ಡೇರಿ ಹೋಬಳಿಗೆ ಬಂದು ಅಲ್ಲಿನ ಜನರಿಗೆ ಮನವಿ ಮಾಡಿದರು. ಆ ವ್ಯಕ್ತಿಗೆ ಆ ಭಾಗದಲ್ಲಿ ಒಂದು ಸಾವಿರ ಹೆಚ್ಚು ಮತಗಳು ಬಂದು ಆಯ್ಕೆಯಾದರು. ನಿಮ್ಮ ಗೆಲುವಿಗೆ ಕಾರಣರಾದವರನ್ನೇ ಸೋಲಿಸಿದ್ದೀರಿ. ಅವರ ವಿರುದ್ಧವೇ ಸಣ್ಣ, ಕೀಳುಮಟ್ಟದ ಭಾಷೆ ಬಳಸಿ ಮಾತನಾಡುತ್ತಿದ್ದೀರಿ’ ಎಂದು ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಅವರ ಹೆಸರು ಹೇಳದೆ ಪರೋಕ್ಷ ವಾಗ್ದಾಳಿ ನಡೆಸಿದರು.

‘ನಾಯಕ ಗುರುಪೀಠದ ಸ್ವಾಮೀಜಿ ರೈಲ್ವೆ ಹಳಿ ದಾಟುವ ಸಮಯದಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅವರ ಪೂರ್ವಾಶ್ರಮದ ತಂದೆ, ತಾಯಿ ತಿಪಟೂರಿನಲ್ಲಿ ತಳ್ಳುವ ಗಾಡಿ ಎಳೆದು, ಮೂಟೆ ಹೊತ್ತು ಜೀವಿಸುತ್ತಿದ್ದರು. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ತೆರಳಿ ಸಹಾಯ ಮಾಡಿ ಬಂದೆ. ಆದರೆ ನಾಯಕ ಸಮಾಜದ ಪಿತಾಮಹ ಎಂದು ಹೇಳಿಕೊಳ್ಳುತ್ತಿರುವವರು ಅತ್ತ ಕಡೆ ತಿರುಗಿಯೂ ನೋಡಲಿಲ್ಲ. ಆಗ ಡಿಸಿಸಿ ಬ್ಯಾಂಕ್ ಇರಲಿಲ್ಲವೆ. ನಿಮ್ಮ ಕೈಯಲ್ಲಿ ಏನಾದರೂ ಸಹಾಯ ಮಾಡಲು ಆಗುತ್ತಿರಲಿಲ್ಲವೆ’ ಎಂದು ಪ್ರಶ್ನಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಿಗೆ ಡಿಸಿಸಿ ಬ್ಯಾಂಕ್ ಮೂಲಕ ಸಾಲ ಕೊಡುವುದಾಗಿ ಅರ್ಜಿ ಪಡೆದುಕೊಂಡು ಓಡಾಡುತ್ತಿದ್ದಾರೆ. ಆದರೆ ಸಾಲ ಕೊಡಲಿಲ್ಲ. ಸುಮ್ಮನೆ ಸಾಲ ಕೊಡುವುದಿಲ್ಲ. ವಾಪಸ್ ಕೊಡಬೇಕಾಗುತ್ತದೆ. ಬಡ್ಡಿಯನ್ನೂ ಕಟ್ಟಬೇಕಾಗುತ್ತದೆ. ಇವರು ಕೊಟ್ಟ ಸಾಲ ತೀರಿಸಲು ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಬೇಕಾಗುತ್ತದೆ ಎಂದರು.

ನಾಯಕ ಸಮುದಾಯಕ್ಕೆ ವಿಧಾನಸಭೆಯಲ್ಲಿ ದೇವೇಗೌಡರು ಮೀಸಲಾತಿ ಕಲ್ಪಿಸಿಕೊಟ್ಟರು. ಅಂದಿನ ಪ್ರಧಾನಿ ಚಂದ್ರಶೇಖರ್ ಮೇಲೆ ಒತ್ತಡ ತಂದು ಮೀಸಲಾತಿ ಕೊಡಿಸಲು ಕಾರಣಕರ್ತರಾದರು. ಗೌಡರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಎಲ್ಲಾ ಸಮುದಾಯಗಳಿಗೆ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ಮೀಸಲಾತಿ ಜಾರಿಗೆ ತಂದರು. ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಸಿಗಲು ಗೌಡರು ಕಾರಣ ಎಂದು ನೆನಪಿಸಿಕೊಂಡರು.

ಕಾಂಗ್ರೆಸ್ ಜತೆಗೆ ಸಮ್ಮಿಶ್ರ ಸರ್ಕಾರ ರಚನೆ ಮಾಡಲು ಒದಗಿಬಂದ ಅನಿವಾರ್ಯ ಪರಿಸ್ಥಿತಿ, ಆ ಪಕ್ಷದ ನಾಯಕರ ಅಸಹಕಾರದ ಬಗ್ಗೆ ಪ್ರಸ್ತಾಪಿಸಿದರು. ‘2018ರ ಚುನಾವಣೆ ಸಮಯದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದೆ. ಹಾಗಾಗಿ ಸರ್ಕಾರದಲ್ಲಿ ಭಾಗಿಯಾಗಬೇಕಾಯಿತು. ₹25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದೆ. ಸಾಲ ಮನ್ನಾ ಮಾಡಿದರೆ ಜೆಡಿಎಸ್‌ಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಇನ್ನಿಲ್ಲದ ಕಿರುಕುಳ ನೀಡಿದರು’ ಎಂದು ಆರೋಪಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಅಂಜನಪ್ಪ, ಶಾಸಕರಾದ ಎಂ.ವಿ.ವೀರಭದ್ರಯ್ಯ, ಡಿ.ಸಿ.ಗೌರಿಶಂಕರ್, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮುಖಂಡರಾದ ಡಿ.ನಾಗರಾಜಯ್ಯ, ಎಂ.ಟಿ.ಕೃಷ್ಣಪ್ಪ, ಸಿ.ಬಿ.ಸುರೇಶ್‌ಬಾಬು, ಕೆ.ಎಂ.ತಿಮ್ಮರಾಯಪ್ಪ, ಸುಧಾಕರಲಾಲ್, ಟಿ.ಆರ್.ನಾಗರಾಜ್, ಗೋವಿಂದರಾಜು, ಬೆಳ್ಳಿ ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT