ಮಧುಗಿರಿ: ₹30 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ಲೋಕೋಪಯೋಗಿ ಇಲಾಖೆಯಿಂದ ₹15 ಕೋಟಿ ವೆಚ್ಚದಲ್ಲಿ ಪಟ್ಟಣದ ಗೌರಿಬಿದನೂರು ಗೇಟ್‌ನಿಂದ ಕೊಡಿಗೇನಹಳ್ಳಿ ರಸ್ತೆಯ ವಿಸ್ತರಣೆ, ಮಿಡಿಗೇಶಿ- ಚಂದನೂರು ರಸ್ತೆ ವಿಸ್ತರಣೆ, ₹14 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಹಾಗೂ ₹1.50 ಕೋಟಿ ವೆಚ್ಚದಲ್ಲಿ ದೊಡ್ಡೇರಿ ಕೆರೆ ಅಭಿವೃದ್ಧಿಗೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಆರ್.ರಾಜೇಂದ್ರ ಮಾತನಾಡಿ, ಈಗಾಗಲೇ ಪಟ್ಟಣದ ಅಭಿವೃದ್ಧಿಗೆ ₹25 ಕೋಟಿ ಬಿಡುಗಡೆಯಾಗಿದೆ. ಮುಂದಿನ ತಿಂಗಳಲ್ಲಿ ಟೆಂಡರ್ ಪೂರ್ಣಗೊಂಡ ನಂತರ ಪಟ್ಟಣದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ₹10 ಕೋಟಿ ವೆಚ್ಚದಲ್ಲಿ ರಾಜೀವ್ ಗಾಂಧಿ ಕ್ರೀಡಾಂಗಣವನ್ನು ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್ ಮಾತನಾಡಿ, ಪಟ್ಟಣದ ಎಲ್ಲ ವಾರ್ಡ್‌ನ ರಸ್ತೆ ಮತ್ತು ಚರಂಡಿಗಳನ್ನು ಹಂತ- ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಎನ್.ಗಂಗಣ್ಣ , ಉಪಾಧ್ಯಕ್ಷ ಸುಜಾತ ಶಂಕರನಾರಾಯಣ, ಲೋಕೋಪಯೋಗಿ ಇಲಾಖೆಯ ಇಇ ಹನುಮಂತರಾವ್ , ಎಇಇ ರಾಜಗೋಪಾಲ್, ಗುತ್ತಿಗೆದಾರರಾದ ಎಸ್.ಡಿ.ಎಲ್. ರಾಜೇಂದ್ರ, ಗಣೇಶ್, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಸದಸ್ಯರು ಹಾಜರಿದ್ದರು.