ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಬಂದ್ ಮಾಡಿದರೆ ನಿಮಗೇ ಅಪಾಯ

ವೈದ್ಯಕೀಯ ಸೇವೆಗೆ ಅಡ್ಡಗಾಲು ಆಗಬಹುದೆಂದು ಊರು ದಾರಿಯ ಬಂದ್‌
Last Updated 30 ಮಾರ್ಚ್ 2020, 16:53 IST
ಅಕ್ಷರ ಗಾತ್ರ

ತುಮಕೂರು: ಕೊರೊನಾ ಸೋಂಕಿತರು, ಅಪರಿಚಿತರು ಊರು ಪ್ರವೇಶಿಸಬಾರದು ಎಂದು ಸಾಕಷ್ಟು ಗ್ರಾಮಗಳಲ್ಲಿ ತಳೆದಿರುವ ರಸ್ತೆ ಬಂದ್‌ ನಿರ್ಣಯಗಳು ಸ್ಥಳೀಯರಿಗೇ ಕಂಟಕವಾಗುವ ಸಾಧ್ಯತೆ ಇದೆ.

‘ಹೊರಗಿನವರು ಊರೊಳಗೆ ಬರಬಾರದು, ಒಳಗಿನವರು ಹೊರಗೆ ಹೋಗಬಾರದು’ ಎಂದು ಈಗಾಗಲೇ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ರಸ್ತೆಗೆ ಮುಳ್ಳುಬೇಲಿ ಹಾಕಿದ್ದಾರೆ. ಕಲ್ಲು, ಮಣ್ಣು ಸುರಿದು ರಸ್ತೆ ಮುಚ್ಚಿ, ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ.

ಒಂದು ವೇಳೆ ರಸ್ತೆ ಬಂದ್‌ ಮಾಡಿರುವ ಊರೊಳಗಿನ ವ್ಯಕ್ತಿಗೆ ಸೋಂಕಿನ ಲಕ್ಷಣಗಳು ಕಂಡುಬಂದರೆ ಅಥವಾ ಮತ್ಯಾರಿಗೊ ತುರ್ತು ವೈದ್ಯಕೀಯ ಸೇವೆ ಅಗತ್ಯತೆ ಇದ್ದರೆ, ಅವರನ್ನು ಆಸ್ಪತ್ರೆಗೆ ರವಾನಿಸಲು ಆಂಬ್ಯುಲೆನ್ಸ್‌ ಹೋಗಬೇಕಾಗುತ್ತದೆ. ದಾರಿ ಬಂದ್ ಆಗಿದ್ದರೆ, ಅದನ್ನು ತೆರವು ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಇದರಿಂದ ಅನಾರೋಗ್ಯಪೀಡಿತ ವ್ಯಕ್ತಿಯ ಸ್ಥಿತಿ ಮತ್ತಷ್ಟು ಚಿಂತಾಜನಕಕ್ಕೆ ತಲುಪಬಹುದು.

ಗ್ರಾಮದಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಅಗ್ನಿಶಾಮಕ ವಾಹನಗಳು ಸಹ ತುರ್ತಾಗಿ ಅಂತಹ ಊರಿಗೆ ತಲುಪಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಹೆಚ್ಚಿನ ಅನಾಹುತ, ಸಾವು– ನೋವು ಸಂಭವಿಸಬಹುದು. ಕೊರೊನಾ ಸೋಂಕಿನಿಂದ ಸಮಸ್ಯೆಗೆ ಸಿಲುಕುವುದಕ್ಕಿಂತ ಇಂತಹ ಘಟನೆಗಳಿಂದಾಗಿ ದುಬಾರಿ ಬೆಲೆ ತೆರಬೇಕಾಗಬಹುದು.

ರಸ್ತೆ ಬಂದ್‌ನಿಂದಾಗಿ ಊರುಗಳ ಒಳದಾರಿಗಳ ಮೂಲಕ ಹತ್ತಿರದ ಪಟ್ಟಣ, ನಗರಗಳಿಗೆ ಹಾಲು, ಸೊಪ್ಪು, ತರಕಾರಿ, ಹಣ್ಣುಗಳನ್ನು ಸಾಗಿಸುವ ಸರಕು ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಬಂದ್‌ ಆದ ದಾರಿಗಳನ್ನು ಬಿಟ್ಟು, ಪರ್ಯಾಯ ಮಾರ್ಗಗಳನ್ನು ಹುಡುಕಿಕೊಂಡು, ಸುತ್ತಿಬಳಸಿ ಪಟ್ಟಣಗಳನ್ನು ಸೇರಬೇಕಿದೆ.

ಸೋಂಕಿನ ಕುರಿತು ಜಾಗೃತಿ ಮೂಡಿಸಲು ತೆರಳುವ ಸ್ಥಳೀಯಾಡಳಿತದ ನೌಕರರು, ಆರೋಗ್ಯ ಇಲಾಖೆ ಸಿಬ್ಬಂದಿ ಸಹ ಊರುಗಳಿಗೆ ಭೇಟಿ ನೀಡಲು ಈ ರಸ್ತೆಬಂದ್ ತಡೆಯೊಡುತ್ತಿದೆ.
ಸೋಂಕು ನಿವಾರಣೆಗೆ ರಚಿಸಿರುವ ಸ್ಥಳೀಯ ಮಟ್ಟದ ಕಾರ್ಯಪಡೆಯ ಸದಸ್ಯರು ಸಹ ಒಂದೂರಿಂದ ಮತ್ತೊಂದು ಊರಿಗೆ ಸರಾಗವಾಗಿ ಹೋಗಲು ಇದರಿಂದ ತೊಂದರೆ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT