ಮಂಗಳವಾರ, ಸೆಪ್ಟೆಂಬರ್ 17, 2019
21 °C
ಅಭಿವೃದ್ಧಿ ಹೆಸರಲ್ಲಿ ನಗರದ ಬಡಾವಣೆ, ರಸ್ತೆಗಳನ್ನು ಹಾಳು ಮಾಡಿದ್ದ ಏಜೆನ್ಸಿಗಳಿಗೆ ಬಿಸಿ ಮುಟ್ಟಿಸಿದ ಮಹಾನಗರ ಪಾಲಿಕೆ

ಅಡ್ಡಾದಿಡ್ಡಿ ಅಗೆದ ಏಜೆನ್ಸಿಗಳಿಗೆ ಲಕ್ಷ ಲಕ್ಷ ದಂಡ !

Published:
Updated:
Prajavani

ತುಮಕೂರು: ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆದು ಕಾಮಗಾರಿ ಮುಗಿದ ಬಳಿಕ ಮೊದಲಿದ್ದ ವ್ಯವಸ್ಥಿತ ರೀತಿಯ ಹಾಗೆ ಅಂದರೆ ಯಥಾ ಸ್ಥಿತಿ ನಿರ್ಮಾಣ (ರೆಸ್ಟೊರೇಶನ್) ಮಾಡದೇ ಬೇಜವಾಬ್ದಾರಿ ತೋರಿದ ಕೇಬಲ್, ಪೈಪ್ ಲೈನ್ ಹಾಕುತ್ತಿರುವ ಏಜೆನ್ಸಿಗಳಿಗೆ ಭಾರಿ ಪ್ರಮಾಣದ ದಂಡವನ್ನು ಹಾಕುವ ಮೂಲಕ ಮಹಾನಗರ ಪಾಲಿಕೆಯು ಬಿಸಿ ಮುಟ್ಟಿಸಿದೆ.

ರೆಸ್ಟೋರೇಷನ್ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸದ ಕಾರಣ ಎಲ್ ಆ್ಯಂಡ್ ಟಿ ಏಜೆನ್ಸಿಯವರಿಗೆ ₹ 1 ಲಕ್ಷ, ಮೇಘಾ ಗ್ಯಾಸ್ ಏಜೆನ್ಸಿಯವರಿಗೆ ₹ 1 ಲಕ್ಷ ಮತ್ತು ರಿಲಾಯನ್ಸ್ ಜಿಯೊ ಏಜೆನ್ಸಿಯವರಿಗೆ ₹ 50 ಲಕ್ಷ ದಂಡ ವಿಧಿಸಿದೆ.

ಹಾಗೆಯೇ ಬೆಸ್ಕಾಂ ಕಾಮಗಾರಿ ಕೈಗೊಂಡ ಕಡೆ ರೆಸ್ಟೋರೇಷನ್ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಬೆಸ್ಕಾಂಗೆ ಎಚ್ಚರಿಕೆ ನೀಡಿದೆ.

ಇಷ್ಟಾಗಿಯೂ  ಸಹ ಏಜೆನ್ಸಿಗಳು ರೆಸ್ಟೊರೇಷನ್ ಕಾಮಗಾರಿ ಬಗ್ಗೆ ಗಮನಹರಿಸಿಲ್ಲ ಎಂಬುದನ್ನು ನಾಲ್ಕು ದಿನಗಳ ಹಿಂದೆ ಬಿದ್ದ ಮಳೆ ಬಟಾ ಬಯಲು ಮಾಡಿದೆ. ಸಾರ್ವಜನಿಕರ ವ್ಯಾಪಕ ದೂರು, ಆಕ್ರೋಶ ವ್ಯಕ್ತವಾಗಿದ್ದು, ಪಾಲಿಕೆ ಆಯುಕ್ತರು ಏಜೆನ್ಸಿಗಳಿಗೆ ಎಚ್ಚರಿಕೆ ನೀಡಿ ರೆಸ್ಟೋರೇಷನ್ ಕಾಮಗಾರಿಗೆ ಕೈಗೊಳ್ಳಲು ಆದೇಶಿಸಿದ್ದಾರೆ. ಇಲ್ಲಿಯೂ ಉಪೇಕ್ಷೆ ತೋರಿದರೆ ಮತ್ತೆ ದಂಡದ ಬಿಸಿ ಮುಟ್ಟಿಸಲು ಚಿಂತನೆ ಮಾಡುತ್ತಿದ್ದಾರೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ‘ಗೆ ತಿಳಿಸಿದರು.

ಐದಾರು ತಿಂಗಳಿಂದಲೂ ನಗರದಲ್ಲಿ ಒಂದಿಲ್ಲೊಂದು ಬಡಾವಣೆ, ಒಂದಿಲ್ಲೊಂದು ಕಾಮಗಾರಿ ನಿರಂತರ ನಡೆಯುತ್ತಲೇ ಇದ್ದು, ದೂಳು, ಸಂಚಾರ ದಟ್ಟಣೆ, ಕಲುಷಿತ ವಾತಾವರಣಕ್ಕೆ ಕಾರಣವಾಗಿದೆ.

ಕಂಡ ಕಂಡಲ್ಲೆಲ್ಲ ನೆಲ ಅಗೆದು ಕಾಮಗಾರಿ ಮುಗಿದ ಬಳಿಕ ಅರೆಬರೆಯಾಗಿ ಮಣ್ಣು ಎಳೆದು ಹೋಗುವುದು, ಮತ್ತೊಂದು ಬಡಾವಣೆಯಲ್ಲಿ ಕಾಮಗಾರಿ ಕೈಗೊಳ್ಳುವುದನ್ನು ಕಾಮಗಾರಿ ಗುತ್ತಿಗೆ ಪಡೆದ ಏಜೆನ್ಸಿಗಳು ಮಾಡುತ್ತಿವೆ.

ಏಜೆನ್ಸಿಗಳ ಈ ಬೇಜವಾಬ್ದಾರಿಗೆ ನಗರದ ವಿವಿಧ ಬಡಾವಣೆಯ ನಿವಾಸಿಗಳ ಹರಿಹಾಯ್ದಿದ್ದರು. ಅಭಿವೃದ್ಧಿ ಕಾಮಗಾರಿ ಕೈಗೊಂಡಾಗ ಸ್ವಲ್ಪ ಹೆಚ್ಚು ಕಡಿಮೆ ಆಗುತ್ತದೆ. ಮಣ್ಣು ಹಾಕಿದ್ದೇವೆ. ಸರಿ ಹೋಗುತ್ತದೆ ಎಂದು ಕಾಮಗಾರಿ ಸ್ಥಳದಿಂದ ಏಜೆನ್ಸಿಯ ಪ್ರತಿನಿಧಿಗಳು ಕಾಲ್ಕಿಳುತ್ತಿದ್ದರು. ಹೀಗೆ ಕಾಲ್ಕಿತ್ತು ಹೋಗಿದ್ದ ಕಡೆಯ ಬಡಾವಣೆಯ ರಸ್ತೆಗಳು ಈಚೆಗೆ ಬಿದ್ದ ಮಳೆಗೆ ಹದಗೆಟ್ಟಿದ್ದು, ನಾಗರಿಕರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

ಏಜೆನ್ಸಿ ಸಭೆ ನಡೆಸಿದ ಆಯುಕ್ತರು: ರೆಸ್ಟೋರೇಷನ್ ಕಾಮಗಾರಿ ಸಮರ್ಪಕ ರೀತಿ ಕೈಗೊಳ್ಳದೇ ಇರುವುದನ್ನು ಮನಗಂಡ ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ಕಾಮಗಾರಿ ಕೈಗೊಂಡ ಏಜೆನ್ಸಿಗಳ ಸಭೆ ನಡೆಸಿ ಎಚ್ಚರಿಕೆ ನೀಡಿದರು. ಸುದೀರ್ಘ ಚರ್ಚೆಗ ಬಳಿಕ ಎರಡು ಏಜೆನ್ಸಿಗಳಿಗೆ ತಲಾ ₹ 1 ಲಕ್ಷ, ಮತ್ತೊಂದು ಏಜೆನ್ಸಿಗೆ ₹ 50 ಸಾವಿರ ದಂಡ ವಿಧಿಸಿದ್ದಾರೆ.

ಬೆಸ್ಕಾಂ ಸಹಾಯಕ ಎಂಜಿನಿಯರ್ ಬಸವರಾಜ್, ಮೇಘಾ ಗ್ಯಾಸ್ ಏಜೆನ್ಸಿಯ ಗಣೇಶ್, ಸುನಿಲ್, ಎಲ್‌ ಆ್ಯಂಡ್ ಟಿ ಕಂಪನಿಯ ನಿರ್ಮಲ್‌ಕುಮಾರ್ ಮತ್ತು ದೀಪಕ್‌ಕುಮಾರ್, ರಿಲೆಯನ್ಸ್ ನ ಯೋಜನಾ ವ್ಯವಸ್ಥಾಪಕ ಖಮೀರ್, ಶ್ರೀಧರ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಈರಣ್ಣ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಗುತ್ತಿಗೆದಾರರಾದ ಎಂ.ಎನ್.ರಮೇಶ್, ಅಮೃತ್‌ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.

Post Comments (+)