7ರಂದು ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ಸೋಮವಾರ, ಏಪ್ರಿಲ್ 22, 2019
31 °C

7ರಂದು ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

Published:
Updated:

ತುಮಕೂರು: ಲೋಕಸಭಾ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಮಾವೇಶವನ್ನು ನಗರದ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಏಪ್ರಿಲ್ 7ರಂದು ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಡಾ.ರಫೀಕ್ ಅಹಮ್ಮದ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಂಜೆ 4 ಗಂಟೆಗೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಜಮೀರ್ ಅಹಮ್ಮದ್ ನೇತೃತ್ವದಲ್ಲಿ ಸಮಾವೇಶ ನಡೆಯಲಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿ ಎಚ್.ಡಿ.ದೇವೇಗೌಡ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಸೇರಿದಂತೆ ಮೈತ್ರಿ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

‘ಏ.10ರಂದು ಮತ್ತೊಂದು ಬೃಹತ್ ಸಮಾವೇಶ ನಡೆಸುವ ಸಿದ್ಧತೆ ನಡೆದಿದ್ದು, ಆ ಸಮಾವೇಶದಲ್ಲಿ ಹಿರಿಯ ಮುಖಂಡರಾದ ಸಿದ್ಧರಾಮಯ್ಯ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ‘ಉಪಮುಖ್ಯಮಂತ್ರಿ ಡಾ.ಪರಮೇಶ್ವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದ್ದು, ಮೈತ್ರಿ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ. ದೇಶದ ಹಿತಕ್ಕಾಗಿ ಮೋದಿ ಅವರನ್ನು ಕೆಳಗಿಳಿಸಬೇಕು ಎಂದು ತುಮಕೂರು ಕ್ಷೇತ್ರದಿಂದ ದೇವೇಗೌಡರನ್ನು ಮೈತ್ರಿ ಪಕ್ಷಗಳು ಕಣಕ್ಕಿಳಿಸಿವೆ’ ಎಂದು ತಿಳಿಸಿದರು.

‘ಮುದ್ದಹನುಮೇಗೌಡ, ಕೆ.ಎನ್.ರಾಜಣ್ಣ ಅವರೂ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಉಭಯ ಪಕ್ಷಗಳ ಹಿರಿಯ ಮುಖಂಡರು ಆಂತರಿಕ ಗೊಂದಲಗಳನ್ನು ಪರಿಹರಿಸಿದ್ದಾರೆ’ ಎಂದು ಹೇಳಿದರು.

ಜೆಡಿಎಸ್ ಮುಖಂಡ ಲೋಕೇಶ್ವರ್ ಮಾತನಾಡಿ, ‘ದೇವೇಗೌಡರು ತುಮಕೂರು ಜಿಲ್ಲೆಯಲ್ಲಿನ ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು, ಅವರ ಸ್ಪರ್ಧೆ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ’ ಎಂದು ಹೇಳಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದರಾಜ್ ಮಾತನಾಡಿ, ‘ದೇವೇಗೌಡರನ್ನು ಎಲ್ಲಾ ವರ್ಗದ ಜನರು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ. ಹಳ್ಳಿಗಳಲ್ಲಿ ದೇವೇಗೌಡರ ಪರವಾದ ಅಲೆಯಿದೆ’ ಎಂದರು.

ಕಾಂಗ್ರೆಸ್ ಮುಖಂಡ ಶಕೀಲ್ ಅಹಮ್ಮದ್ ಮಾತನಾಡಿ, ‘ಕ್ಷೇತ್ರದಲ್ಲಿ ಪ್ರಚಾರ ಸರಿಯಾಗಿ ನಡೆಯುತ್ತಿಲ್ಲ. ಜನರನ್ನು ತಲುಪಲು ಆಗುತ್ತಿಲ್ಲ ಎಂಬ ವಿಷಯ ತಿಳಿದ ಹಿನ್ನೆಲೆಯಲ್ಲಿ ಜಮೀರ್ ಅಹಮ್ಮದ್ ನೇತೃತ್ವದಲ್ಲಿ ಈ ಸಮಾವೇಶ ಆಯೋಜನೆ ಮಾಡಲಾಗಿದೆ. ಎಂಟು ವಿಧಾನಸಭಾ ಕ್ಷೇತ್ರದ ಎರಡೂ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಮೈತ್ರಿ ಪಕ್ಷಗಳ ಹೊಂದಾಣಿಕೆ ಶಕ್ತಿ ಪ್ರದರ್ಶನವಾಗಲಿದೆ’ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಬೆಳ್ಳಿ ಲೋಕೇಶ್, ಮೈತ್ರಿ ಪಕ್ಷಗಳ ಮುಖಂಡರು ಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !